Breaking News

ನದಾಫ್ ನಜೀರ್ ಭೂಗತ ಲೋಕದ ವಜೀರ್..!

ಬೆಳಗಾವಿ: ಬೆಳಗಾವಿಯಲ್ಲಿ ಭೂಗತ ಲೋಕದ ಡಾನ್ ಗಳ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿ ಜೀವದ ಹಂಗು ತೊರೆದು ಪಾತಕಿಗಳ ಬೆನ್ನಟ್ಟಿದ ಬೆಳಗಾವಿ ನಗರದ ಪೊಲೀಸರು ಹಲವಾರು ಕೊಲೆ ಮತ್ತು ಅಪಹರಣ ಪ್ರಕರಣಗಳನ್ನು ಬೇಧಿಸಿ ಭೂಗತ ಲೋಕದ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಭೂಗತ ಲೋಕದ ಪಾತಕಿಗಳಿಗೆ ತನ್ನ ಫಾರ್ಮ್ ಹೌಸ್ ನಲ್ಲಿ ಆಶ್ರಯ ನೀಡಿ ಬೆಳಗಾವಿ ನಗರದ ಕೋಟ್ಯಾಧೀಶರ ಬಗ್ಗೆ ಮಾಹಿತಿ ನೀಡಿ ಪಾತಕಿಗಳನ್ನು ಸಂರಕ್ಷಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಜೀರ್ ನಧಾಪನ ಅಸಲಿ ಮುಖವಾಡವನ್ನು ಪೊಲೀಸರು ಬಯಲಿಗೆ ಎಳೆದಿದ್ದಾರೆ.

 

ಎರಡು ವರ್ಷದ ಹಿಂದೆ ಅಪಹರಣಕ್ಕೊಳಗಾಗಿದ್ದ ಬೆಳಗಾವಿಯ ಉದ್ಯಮಿ ಸುರೇಶ ರೇಡಕರ್ ಪುತ್ರ ರೋಹನ್ ರೇಡೆಕರ್ ನನ್ನು ಹತ್ಯೆ ಮಾಡಿ ಚೋರ್ಲಾ ಘಾಟನಲ್ಲಿ ಆತನ ಶವವನ್ನು ಎಸೆದಿದ್ದೇ, ಭೂಗತ ಲೋಕದ ಪಾತಕಿಗಳು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದು, ಬಂಧನಕ್ಕೊಳಗಾಗಿರುವ ಆರು ಜನ ಆರೋಪಿಗಳು ಭೂಗತ ದೊರೆ ಮಂಗಳೂರು ಮೂಲದ ಮತ್ತು ಚೋಟಾ ಶಕೀಲ್ ಬಂಟ ರಷಿದ್ ಮಲಬಾರಿಯ ಸಹಚರರು ಎನ್ನುವ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

 

ಭೂಗತ ಲೋಕದ ಪಾತಕಿ ರಷಿದ್ ಮಲಬಾರಿ ಜೊತೆ ಸೇರಿಕೊಂಡು ಹಲವಾರು ಜನರ ಹತ್ಯೆಗೈದು ಅಪರಾಧ  ಎಸಗಿದ ಬೆಳಗಾವಿ ಕಾಕತಿವೇಸ್ ನಿವಾಸಿ ಮುಜಪ್ಪರ್ ಮಹ್ಮದ್ ಶೇಖ್ (24), ಅಶೋಕ ನಗರದ ಇಮ್ತಿಯಾಜ್ ಅಬ್ದುಲ್ ಅಝೀಜ್ ಢಲಾಯತ್ (36), ರಾಮ ನಗರದ ಜತೀನ್ ಅರ್ಜುನ್ ಕದಮ್ (31)  ಹಾಗೂ ರಷಿದ್ ಮಲಬಾರಿಗೆ ತನ್ನ ಅಸುಂಡಿ ಫಾರ್ಮ್ ಹೌಸ್ ನಲ್ಲಿ ಆಶ್ರಯ ನೀಡಿದ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಜೀರ್ ನಧಾಪ್ ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಬೆಳಗಾವಿಯಲ್ಲಿ ಭೂಗತ ಲೋಕದ ಸೃಷ್ಟಿಗೆ ಕಾರಣವಾಗಿರುವ ಅಂಶಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.

 

ನಝೀರ್, ಭೂಗತ ಲೋಕದ ವಝೀರ್ ಆಗಿದ್ದು ಹೇಗೆ?

ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿ ಹಣ ಮಾಡಿಕೊಂಡಿದ್ದ ನಝೀರ್ ನಧಾಪ್ ತಾನು ನಧಾಪ್ ಶುಗರ್ಸ್ ಕಾರ್ಖಾನೆ ಆರಂಭಿಸುವುದಾಗಿ ಹೇಳಿ ತನ್ನ ಸಮಾಜಕ್ಕೆ ಹನ್ನೊಂದು ಕೋಟಿ ಟೋಪಿ ಹಾಕಿದ ಆಸಾಮಿ ಈತ. ಕಳೆದ ಕೆಲವೊಂದು ವರ್ಷಗಳಿಂದ ಕೋಟ್ಯಾಧೀಶನಾಗುವ ಕನಸು ಕಂಡಿದ್ದ ಆದರೆ ಇತ್ತೀಚಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆಗೆ ಎದುರಿಸುತ್ತಿದ್ದ ಈತನಿಗೆ ರಷಿದ ಮಲಬಾರಿಗೆ ಪರಿಚಯ ಮಾಡಿಸಿಕೊಟ್ಟಿದ್ದೇ ನಝೀರ್ ನ ಡ್ರೈವರ್.

 

ರಷಿದ್ ಮಲಬಾರಿಯ ಜೊತೆ ಸ್ನೇಹ ಬೆಳೆಸಿಕೊಂಡ ನಜೀರ್, ಮೊದಲು ಸ್ಕೇಚ್ ಹಾಕಿದ್ದೆ ತನ್ನ ಸ್ನೇಹಿತ ಸುರೇಶ ರೇಡೇಕರ್ ನನ್ನು. ಸುರೇಶ ರೇಡೆಕರ್ ಅವರಿಗೆ ಸೇರಿದ ಕೋಲ್ಡ್ ಸ್ಟೋರೇಜ್ ನಲ್ಲಿ ನಜೀರ್ ನಧಾಪ್ ತಾನು ತಯಾರಿಸಿದ ಬೆಲ್ಲವನ್ನು ಸಂಗ್ರಹಿಸುತ್ತಿದ್ದ. ಹೀಗೆ ಸುರೇಶ ರೇಡೆಕರ್ ಮತ್ತು ನಜೀರ್ ಮಧ್ಯೆ ಸ್ನೇಹ ಬೆಳೆದಿತ್ತು. ರಷಿದ್ ಮಲಬಾರಿ ಜೊತೆ ದೋಸ್ತಿ ಮಾಡಿಕೊಂಡ ಮಾಜಿ ಜಿಪಂ ಅಧ್ಯಕ್ಷ ನಜೀರ್, ಸುರೇಶ ರೇಡೆಕರ್ ನನ್ನು ಅಪಹರಿಸಿ 5 ಕೋಟಿ ರೂ ಎತ್ತುವ ತಂತ್ರ ರೂಪಿಸುತ್ತಾನೆ.

 

ರಷಿದ್ ಮಲಬಾರಿ ಮತ್ತು ನಜೀರ್ ನದಾಫ್ ಹಾಕಿದ ಸ್ಕೇಚ್ ನಂತೆ ಆತನ ಸಹಚರರು ಸುರೇಶ ರೇಡೆಕರ್ ನನ್ನು ಕಿಡ್ನಾಪ್ ಮಾಡಲು ಹೊಂಚು ಹಾಕುತ್ತಾರೆ. ನಿತ್ಯ ಸಂಜೆ ಸುರೇಶ ರೇಡೇಕರ್ ತನ್ನ ಕೋಲ್ಡ್ ಸ್ಟೋರೇಜ್ ಗೆ ಬರುತ್ತಾನೆ ಎಂಬ ಮಾಹಿತಿಯನ್ನು ನಜೀರ್ ನಧಾಪ್ ಕಲೆ ಹಾಕಿರುತ್ತಾನೆ. ಹಾಗಾಗಿ ಮಲಬಾರಿಯ ಬಂಟರು ಸಂಜೆ ಹೊತ್ತಿಗೆ ಹೊಂಚು ಹಾಕಿ ಕುಳಿತಿರುವಾಗ ಸುರೇಶ ರೇಡೆಕರ್ ನ ಕಾರು ಅಲ್ಲಿಗೆ ಬರುತ್ತದೆ, ಆತನ ಕಾರಿಗೆ ತಮ್ಮ ಕಾರಿನಿಂದ ಡಿಕ್ಕಿ ಹೊಡೆದು ಆತನ ಜೊತೆ ಜಗಳಕ್ಕಿಳಿಯುತ್ತಾರೆ. ನಂತರ, ಆತನನ್ನು ತಮ್ಮ ಕಾರಿನಲ್ಲಿ ಎಳೆದೊಯ್ಯುತ್ತಾರೆ. ಕಾರಿನಲ್ಲಿ ವಿಚಾರಣೆ ಮಾಡಿದಾಗ ತಾವು ಅಪಹರಿಸಿದ್ದು ಸುರೇಶ ರೇಡೆಕರ್ ಅಲ್ಲ ಬದಲಿಗೆ ಆತನ ಮಗ ರೋಹನ್ ನನ್ನು ಎನ್ನುವುದು ಗೊತ್ತಾಗುತ್ತದೆ. ಹೀಗಾಗಿ, ಈ ಕಿರಾತಕರು ತಮ್ಮ ಬಗ್ಗೆ ಈತ ಪೊಲೀಸರಿಗೆ ಮಾಹಿತಿ ನೀಡಬಹುದು ಎಂಬ ಹೆದರಿಕೆಯಿಂದ ಆತನನ್ನು ಫೆಬ್ರವರಿ 19, 2015ರಂದು ಚೋರ್ಲಾ ಘಾಟ್ ರಸ್ತೆಯಲ್ಲಿ ಕೊಲೆ ಮಾಡಿ ಆತನ ಶವವನ್ನು ದಟ್ಟ ಕಾಡಿನೊಳಗೆ ಎಸೆಯುತ್ತಾರೆ.

 

ಬಯಲಿಗೆ ಬಿದ್ದ ಜಾಲ

ಹಿಂಡಲಗಾ ಜೈಲಿನಿಂದ ಜಾಮೀನು ಮೇಲೆ ಬಿಡುಗಡೆಗೊಂಡ ರಷಿದ್ ಮಲಬಾರಿ ಜೈಲಿನಲ್ಲಿರುವಾಗ ಬೆಳಗಾವಿ ಕೆಲವು ಕ್ರಿಮಿನಲ್ ಗಳ ಜೊತೆ ಸ್ನೇಹ ಬೆಳೆಸಿಕೊಂಡಿರುತ್ತಾನೆ. ಜೈಲಿನಿಂದ ಹೊರ ಬಂದ ಮಲಬಾರಿ, ಇವರ ಮುಖಾಂತರ ಬೆಳಗಾವಿ ಜಿಲ್ಲೆಯಲ್ಲಿ ತನ್ನ ಲೋಕ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕುತ್ತಾನೆ. ತನ್ನ ಗ್ಯಾಂಗ್ ರೇಡಿ ಮಾಡಿಕೊಂಡು ಮೊದಲಿಗೆ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಷರೀಫ್ ಯರಗಟ್ಟಿ ಎಂಬಾತನನ್ನು ಕಿಡ್ನಾಪ್ ಮಾಡಿ ಆತನಿಂದ 3.50 ಲಕ್ಷ ರೂ. ವಸೂಲಿ ಮಾಡಿದ ಕಿರಾತಕರು ಒಂದು ತಿಂಗಳ ಬಳಿಕ ಮತ್ತೇ 25 ಲಕ್ಷ ಡಿಮ್ಯಾಂಡ್ ಮಾಡುತ್ತಾರೆ. ಇದಕ್ಕೆ ಬೆದರಿದ ಷರೀಫ್, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತಾನೆ. ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಜಾಲಾಡಿಸಿ ಭೂಗತ ಲೋಕದ ಹುತ್ತಿಗೆ ಕೈ ಹಾಕಿ ಪಾತಕ ಲೋಕದ ಕ್ರಿಮಿನಲ್ ಗಳನ್ನು ಬಂಧಿಸುತ್ತಾರೆ.  ಕಿಡ್ನಾಪ್ ಆದ ಷರೀಫ್ ಯರಗಟ್ಟಿ ಪೊಲೀಸರಿಗೆ ದೂರು ನೀಡದೇ ಹೋಗಿದ್ದಲ್ಲಿ ಭೂಗತ ಲೋಕದ ಕೃತ್ಯಗಳು ಬಯಲಿಗೆ ಎಳೆಯಲು ಪೊಲೀಸರಿಗೆ ಸಾಧ್ಯವೇ ಆಗುತ್ತಿರಲಿಲ್ಲ.

 

ನಗರಸೇವಕರ ಜೊತೆ ಮಲಬಾರಿ ಲಿಂಕ್..!

ಕಳೆದ ಎರಡು ವರ್ಷಗಳಿಂದ ಸವದತ್ತಿ ತಾಲೂಕಿನ ಅಸುಂಡಿ ಗ್ರಾಮದಲ್ಲಿರುವ ನಜೀರ್ ನಧಾಪನ ಫಾರ್ಮ್ ಹೌಸ್ ನಲ್ಲಿ ಆಶ್ರಯ ಪಡೆದಿದ್ದ ಇದೇ ಫಾರ್ಮ್ ಹೌಸ್ ನಲ್ಲಿ ತನ್ನ ಎರಡನೇ ಹೆಂಡತಿಯನ್ನು ಇರಿಸಿಕೊಂಡಿದ್ದ. ರಷಿದ್ ಮಲಬಾರಿ ಬೆಳಗಾವಿ ಜಿಲ್ಲೆಯ ಶ್ರೀಮಂತರು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಪಟ್ಟಿ ಮಾಡಿಕೊಂಡಿದ್ದ. ಶ್ರೀಮಂತರನ್ನು ಕಿಡ್ನಾಪ್ ಮಾಡಿ ಕೊಟ್ಯಾಂತರ ರೂಪಾಯಿ ಹಣ ಗಳಿಸುವ ಸ್ಕೇಚ್ ಹಾಕಿಕೊಂಡಿದ್ದ. ನಜೀರ್ ನದಾಫ ಬೆಳಗಾವಿಯ ಮೂರು ಜನ ನಗರ ಸೇವಕರನ್ನು ರಷಿದ್ ಮಲಬಾರಿಗೆ ಪರಿಚಯಿಸಿದ್ದ. ಈ ಮೂವರು ನಗರ ಸೇವಕರು ಹಲವಾರು ಬಾರಿ ಮಲಬಾರಿ ಜೊತೆ ಮೀಟಿಂಗ್ ಮಾಡಿದ್ದರು. ಈ ಮೀಟಿಂಗ್ ನಲ್ಲಿ ಯಾರಿಗೆ ಸೆಟ್ಟಿಂಗ್ ಮಾಡಲಾಗಿತ್ತು ಎನ್ನುವ ಮಾಹಿತಿಯನ್ನು  ತಿಳಿದುಕೊಳ್ಳಲು ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

ಪೊಲೀಸರಿಗೆ ಬಹುಮಾನ

ಬೆಳಗಾವಿಯ ಭೂಗತ ಲೋಕದ ಪಾತಕಿಗಳು ಮೂಡಿಸಿದ ಹೆಜ್ಜೆ ಗುರುತುಗಳನ್ನು ಪತ್ತೆ ಮಾಡಿ ಪಾತಕಿ ರಷಿದ್ ಮಲಬಾರಿಯ ಸಹಚರರನ್ನು ಹೆಡೆ ಮುರಿ ಕಟ್ಟಿದ ಬೆಳಗಾವಿ ಪೊಲೀಸರ ಧೈರ್ಯ ನಿಜಕ್ಕೂ ಶ್ಲಾಘನೀಯ. ಈ ಪ್ರಕರಣದ ಹಗಲು ರಾತ್ರಿ ಶ್ರಮವಹಿಸಿ ಪಾತಕಿಗಳನ್ನು ಪತ್ತೆ ಮಾಡಿದ ಪೊಲೀಸರ ತಂಡಕ್ಕೆ ನಗರ ಪೊಲೀಸ್ ಆಯುಕ್ತ ಟಿ.ಜೆ. ಕೃಷ್ಣಭಟ್ಟ ಅವರು 25 ಸಾವಿರ ರೂ ಬಹುಮಾನ ಘೋಷಿಸಿದ್ದಾರೆ. ಇನ್ನೂ ಹೆಚ್ಚಿನ ಬಹುಮಾನ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *