ಬೆಂಗಳೂರು, ಜುಲೈ, 22: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್ ಅವರಿಗೆ ಸರ್ಕಾರ ಹೊಸ ಹುದ್ದೆ ನೀಡಿದೆ. ಐಪಿಎಸ್ ಅಧಿಕಾರಿ ಎ.ಎಂ.ಪ್ರಸಾದ್ ಅವರಿಗೆಗಾಗಿಯೇ ರಾಜ್ಯ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಮಾನವಾದ ಹೊಸ ಹುದ್ದೆಯೊಂದನ್ನು ಸೃಷ್ಟಿ ಮಾಡಿ ನೀಡಿದೆ. ಬೆಂಗಳೂರು ನಗರ ಸಂಚಾರ ವಿಭಾಗ ಪೊಲೀಸ್ ಆಯುಕ್ತರಾಗಿ ಇನ್ನು ಮುಂದೆ ಎ.ಎಂ.ಪ್ರಸಾದ್ ಅಧಿಕಾರ ನಡೆಸಲಿದ್ದಾರೆ.
ರಾಜ್ಯ ಗುಪ್ತದಳದ ಮುಖ್ಯಸ್ಥರಾಗಿದ್ದ ಎ.ಎಂ.ಪ್ರಸಾದ್ ಅವರನ್ನು ಶುಕ್ರವಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಸರ್ಕಾರ, ಈ ಹಿಂದೆ ಇದ್ದ ಸಂಚಾರ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಹುದ್ದೆಯನ್ನು ರದ್ದುಪಡಿಸಿ, ಪ್ರಸಾದ್ ಗಾಗಿ ಸಂಚಾರ ವಿಭಾಗ ಪೊಲೀಸ್ ಆಯುಕ್ತ ಹುದ್ದೆಯನ್ನು ಸೃಷ್ಟಿ ಮಾಡಿ ನೀಡಿದೆ.ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಕೆಜೆ ಜಾರ್ಜ್ ತಮ್ಮ ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ಇನ್ನು ಗಣಪತಿ ಪ್ರಕರಣದ ಎರಡನೇ ಆರೋಪಿ ಲೋಕಾಯುಕ್ತ ಎಡಿಜಿಪಿಯಾಗಿದ್ದ ಪ್ರೊಣವ್ ಮೊಹಾಂತಿ ಅವರು ಕೇಂದ್ರ ಸೇವೆಗೆ ನಿಯುಕ್ತಿಗೊಂಡಿದ್ದಾರೆ. ಇದೀಗ ಎ ಎಂ ಪ್ರಸಾದ್ ಅವರಿಗೂ ಹೊಸ ಜವಾಬ್ದಾರಿ ವಹಿಸಲಾಗಿದೆ.
