ಬೆಳಗಾವಿ (ಸವದತ್ತಿ) : ( (ಪಾಲಿಕ್ ಆಸಿಡ್)ವುಳ್ಳ ಮಾತ್ರೆಗಳನ್ನು ಸೇವಿಸಿದ ಬಳಿಕ 55ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ತಾಲ್ಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಎಲ್ಲ ವಿದ್ಯಾರ್ಥಿಗಳನ್ನೂ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು ಶಾಲೆಯಲ್ಲಿ ಇಂದು ಮಧ್ಯಾಹ್ನ 239ಮಕ್ಕಳು ಬಿಸಿಯೂಟ ಮಾಡಿದರು. ಊಟದ ಬಳಿಕ ಪ್ರತಿ ಸೋಮವಾರ ಕಬ್ಬಿಣಾಂಶದ ಮಾತ್ರೆ ನೀಡುವುದು ರೂಢಿ. ಅದೇ ರೀತಿ ಈ ಸೋಮವಾರವೂ ಕೂಡ ಎಲ್ಲ ಮಕ್ಕಳಿಗೂ ಊಟದ ಬಳಿಕ ಮಾತ್ರೆ ನೀಡಲಾಗಿದೆ. ಸಂಜೆ 7.30ರ ಸುಮಾರಿಗೆ ಹಲವು ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತು. ಅದರಲ್ಲಿ 21 ವಿದ್ಯಾರ್ಥಿ–ವಿದ್ಯಾರ್ಥಿನಿಯರು ತೀವ್ರ ನೋವು ಉಂಟಾಗಿದ್ದರಿಂದ ತಕ್ಷಣ ಅವರನ್ನು ಆಂಬುಲೆನ್ಸ್ ಸಹಾಯದಿಂದ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ತಾಲೂಕಾ ಆರೋಗ್ಯಾಧಿಕಾರಿ ಡಾ.ಮಹೇಶ ಚಿತ್ತರಗಿ, ಆಸ್ಪತ್ರೆಗೆ ಬಂದ ಎಲ್ಲ ಮಕ್ಕಳಿಗೂ ಸಲೈನ್ ಹಚ್ಚಲಾಗಿದೆ. ಯಾರಿಗೂ ಪ್ರಾಣಾಪಾಯ ಇಲ್ಲ. ಮಕ್ಕಳು ಅಸ್ವಸ್ಥರಾಗಲು ಮಧ್ಯಾಹ್ನದ ಊಟ ಕಾರಣವೋ ಅಥವಾ ಮಾತ್ರೆ ಕಾರಣವೋ ಇನ್ನೂ ಗೊತ್ತಾಗಿಲ್ಲ. ರಾತ್ರಿಯಿಡೀ ಮಕ್ಕಳ ಮೇಲೆ ನಿಗಾ ಇಡಲಾಗುವುದು. ಈಗಾಗಲೇ ಕೆಲವು ಮಕ್ಕಳು ಚೇತರಿಸಿಕೊಂಡಿದ್ದಾರೆ. ಆತಂಕ ಪಡುವ ಅಗತ್ಯವಿಲ್ಲ.ಅಸ್ವಸ್ಥಗೊಂಡ ಎಲ್ಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು 6 ಮತ್ತು 7ನೇ ತರಗತಿಗೆ ಸೇರಿದವರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.