ಚಿರತೆ ಹಿಡಿಯಲು ಇಚ್ಛಾಶಕ್ತಿ ಕೊರತೆ
ಬೆಳಗಾವಿ- ಬೆಳಗಾವಿ ಜನತೆಗೆ ಇದೀಗ ಚಿರತೆಯದ್ದೇ ಭಯಭೀತಿ ಕಾಡುತ್ತಿದೆ. ನಗರದ ಕ್ಲಬ್ ರಸ್ತೆಯ ಗಾಲ್ಫ್ ಮೈದಾನದ ಅರಣ್ಯ ಪ್ರದೇಶಕ್ಕೆ ಚಿರತೆ ನುಸುಳಿ ಬರೋಬ್ಬರಿ ಒಂದು ವಾರ ಕಳೆದಿದೆ. ಆದರೆ, ಚಿರತೆ ಆಪರೇಷನ್ ಮಾತ್ರ ಸೆಕ್ಸಸ್ ಆಗಿಲ್ಲ.ಆದ್ರೆ ಇದೇ ವಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು ಮೂರು ಚಿರತೆಗಳು ಪತ್ತೆಯಾಗಿವೆ.
ಬೆಳಗಾವಿಯ ಗಾಲ್ಫ್ ಮೈದಾನ,ಚಿಕ್ಕೋಡಿ ತಾಲ್ಲೂಕಿನ ಯಡೂರು,ಇಂದು ಮೂಡಲಗಿ ತಾಲ್ಲೂಕಿನ ಧರ್ಮಟ್ಟಿಯಲ್ಲೂ ಚಿರತೆ ಮೇಕೆಯನ್ನು ಎತ್ಕೊಂಡು ಹೋಗಿರುವ ದೃಶ್ಯ ಸಿಸಿಟಿವ್ಹಿಯಲ್ಲಿ ಸೆರೆಯಾಗಿದೆ.ಇದು ಜಿಲ್ಲೆಯಲ್ಲಿ ಭೀತಿ ಮೂಡಿಸಿದೆ.
ಕಾಟಾಚಾರಕ್ಕೆ ಎನ್ನುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದೆ.ಗಾಲ್ಫ್ ಮೈದಾನದ ಅರಣ್ಯದಲ್ಲೇ ಚಿರತೆ ಇರುವ ಸುಳಿವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಚಿತ್ರವೆಂದರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಅವರೇ ಚಿರತೆ ಇಲ್ಲಿಯೇ ಮನೆ ಮಾಡಿಕೊಂಡಿದೇ ಎಂದು ಹೇಳಿಕೆ ನೀಡಿದ್ದಾರೆ. ಚಿರತೆ ಹಿಡಿಯಲು ಗದಗ ಸೇರಿದಂತೆ ಮತ್ತಿತರ ಕಡೆಗಳಿಂದ ಪರಿಣಿತರು ಬಂದಿದ್ದಾರೆ. ಚಿರತೆಗೆ ಅರಳಿಕೆ ಮದ್ದು ನೀಡಲು ಸಿಬ್ಬಂದಿಯೊಬ್ಬರು ಅರಣ್ಯದಲ್ಲೇ ಕಾಯ್ದು ಕಾಯ್ದು ಸುಸ್ತಾಗಿದ್ದಾರೆ. ಇತ್ತ ಜಿಲ್ಲಾಡಳಿತವೂ ಇದರ ಬಗ್ಗೆ ಗಂಭೀರವಾಗಿ ಪರಿಗಣನೆ ಮಾಡುತ್ತಿಲ್ಲ ಎಂಬ ಆರೋಪ ಕೂಡ ನಾಗರಿಕರಿಂದ ಕೇಳಿಬರುತ್ತಿವೆ.
ಗಾಲ್ಫ್ ಮೈದಾನದ ಕೂಗಳತೆ ದೂರದಲ್ಲೇ ವನಿತಾ ವಿದ್ಯಾಲಯ ಸೇರಿದಂತೆ ಮತ್ತಿತರ ಶಾಲೆಗಳು ಇವೆ. ಚಿಕ್ಕ ಪುಟ್ಟ ಮಕ್ಕಳು ಇದೇ ಮಾರ್ಗದಲ್ಲೇ ಶಾಲೆಗಳಿಗೆ ಸೈಕಲ್ ಮೇಲೆ ಬರುತ್ತಾರೆ. ಆದರೆ, ಚಿರತೆ ಬೆಳಗಾವಿಗೆ ಬಂದಿರುವುದು ಮಕ್ಕಳ ಪಾಲಕರನ್ನೂ ಬೆಚ್ಚಿಬೀಳಿಸಿದೆ. ಚಿರತೆ ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ನಗರದ 22 ಶಾಲೆಗಳಿಗೆ ರಜೆ ಘೋಷಣೆ ಮಾಡಿದೆ. ಅಲ್ಲದೇ, ಚಿರತೆ ಹಿಡಿಯುವ ಕಾರ್ಯ ವಿಫಲವಾಗಿರುವ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ವಿಸ್ತರಣೆ ಮಾಡುತ್ತಲೇ ಸಾಗಿದೆ. ಮಕ್ಕಳ ಶಿಕ್ಷಣದ ಮೇಲೂ ಇದು ದುಷ್ಪರಿಣಾಮ ಬೀರುತ್ತಿದೆ.
ಅರಣ್ಯ ಇಲಾಖೆ ನಾಗರಿಕರೊಂದಿಗೆ ಚೆಲ್ಲಾಟವಾಡುತ್ತಿದ್ದರೆ, ಜಿಲ್ಲಾಡಳಿತದ ಇಚ್ಛಾಶಕ್ತಿ ಕೊರತೆಯೂ ಎದ್ದುಕಾಣುತ್ತಿದೆ. ನಾಗರಿಕರು ಚಿರತೆ ಆಪರೇಷನ್ ಕಾರ್ಯಾಚರಣೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಬೇಕು. ಕೂಡಲೇ ಚಿರತೆ ಹಿಡಿದು ನಾಗರಿಕರಲ್ಲಿ ಮನೆ ಮಾಡಿರುವ ಆತಂಕ ದೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.