ಬೆಳಗಾವಿ-ಕಳೆದ ಇಪ್ಪತ್ತು ದಿನಗಳಿಂದ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮನೆ ಮಾಡಿ ಹಾಯಾಗಿರುವ ಚಿರತೆ ಹಿಡಿಯುವ ವಿಚಾರ,ಅರಣ್ಯ ಇಲಾಖೆಗೆ ಸವಾಲಾಗಿದೆ.ನಿನ್ನೆ ಸೋಮವಾರ ಪೋಲೀಸ್ ಹಾಗೂ ಅರಣ್ಯ ಇಲಾಖೆಯ ಸರ್ಪಗಾವಲು ಭೇದಿಸಿ,ರಸ್ತೆ ಜಂಪ್ ಮಾಡಿ,ಗಾಲ್ಫ್ ಮೈದಾನ ಸೇರಿಕೊಂಡಿದ್ದ ಚಾಲಾಕಿ ಚಿರತೆ ಅರಣ್ಯ ಇಲಾಖೆಯ ಬಲೆಯಿಂದ ಜಸ್ಟ್ ಮಿಸ್ ಆಗಿತ್ತು.
ಇವತ್ತು ಬೆಳ್ಗೆಯಿಂದಲೂ ಚಿರತೆ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು ಗಾಲ್ಫ್ ಮೈದಾನ ರಕ್ಷಣಾ ಇಲಾಖೆಗೆ ಸೇರಿದ್ದರಿಂದ ಈ ಪ್ರದೇಶದಲ್ಲಿ ಬೆಂಗಳೂರಿನಿಂದ ತರಿಸಿದ ಹೈಟೆಕ್ ದ್ರೋಣ ಕ್ಯಾಮರಾಗಳನ್ನು ಹಾರಿಸಲು ರಕ್ಷಣಾ ಇಲಾಖೆಯ ಅನುಮತಿ ಪಡೆಯುವದು ಕಡ್ಡಾಯವಾಗಿದ್ದರಿಂದ ದ್ರೋಣ ಕ್ಯಾಮರಾ ಕಾರ್ಯಾಚರಣೆಗೆ ಅಡ್ಡಿಯಾಯಿತು.
ಗಾಲ್ಫ್ ಮೈದಾನದ ಬಹು ಪ್ರದೇಶ ದಟ್ಟ ಅರಣ್ಯದಿಂದ ಕೂಡಿರುವದರಿಂದ ಶಿವಮೊಗ್ಗದ ಸಕ್ರೆಬೈಲ್ ಅರಣ್ಯ ಪ್ರದೇಶದಲ್ಲಿ ಪಳಗಿದ ಆನೆಗಳನ್ನು ಬೆಳಗಾವಿಗೆ ತರಲಾಗುತ್ತಿದೆ. ಈ ಆನೆಗಳು ಇಂದು ರಾತ್ರಿ 8 ಗಂಟೆಗೆ ಬೆಳಗಾವಿ ತಲುಪುವ ಸಾಧ್ಯತೆ ಇದೆ.ನಾಳೆ ಬೆಳಗ್ಗೆಯಿಂದ ಬೆಳಗಾವಿಯಲ್ಲಿ ಸಕ್ರೆಬೈಲ್ ಆನೆಗಳ ಮೂಲಕ ಚಿರತೆ ಪತ್ತೆ ಕಾರ್ಯಾಚರಣೆ ನಡೆಯಲಿದೆ.