ಬೆಳಗಾವಿ
ಅಖಿಲ ಭಾರತ ಪಂಚಮಸಾಲಿ ಹಕ್ಕೋತ್ತಾಯ ಸಮಿತಿ ರಚನೆ ಮಾಡಿಕೊಂಡು ನಮ್ಮ ಹಕ್ಕೋತ್ತಾಯಕ್ಕಾಗಿ ಅ.24ರಂದು ಸುವರ್ಣ ವಿಧಾನಸೌಧದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಉತ್ತರ ಕರ್ನಾಟಕದಲ್ಲಿ ಪಂಚಮಸಾಲಿ ಸಮುದಾಯ ಇದೆ. ನಮ್ಮ ಮೂಲ ಕಸಬೂ ಕೃಷಿ. ಕೇಂದ್ರ ಸರಕಾರ ಅನೇಕ ಸಮುದಾಯದಗಳಿಗೆ ಸೌಲಭ್ಯ ನೀಡುತ್ತಿದೆ. ಆದರೆ ಪಂಚಮಸಾಲಿ ಸಮುದಾಯಕ್ಕೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯದವರು ಎಂದಿಗೂ ಬೇಡಿದ ಕೈಯಲ್ಲ. ಕೈ ಎತ್ತಿ ಕೊಡುವ ಸಮಯದಾಯ. ನಮ್ಮ ಬೇಡಿಕೆಯನ್ನು ಸರಕಾರ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಕೋವಿಡ್-19 ಇರುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಂಡು ಧರಣಿ ನಡೆಸಲಾಗುವುದು ಎಂದರು.
ಸುವರ್ಣ ವಿಧಾನಸೌಧದ ಎದುರು ಸಂಗೊಳ್ಳಿ ರಾಯಣ್ಣ, ರಾಣಿ ಚನ್ನಮ್ಮಳ ಮೂರ್ತಿ ಸ್ಥಾಪನೆ ಸೇರಿದಂತೆ ಪಂಚಮಸಾಲಿ ಸಮಾಜದ ಬೇಡಿಕೆ ಈಡೇರಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ. ಆದ್ದರಿಂದ ಸರಕಾರ ಕೂಡಲೇ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಹೋರಾಟವನ್ನು ಉಗ್ರಗೊಳಿಸಲಾಗುವುದು ಎಂದು ಹೇಳಿದರು.
ಬಸವರಾಜ ರೊಟ್ಟಿ, ರಾಜಶೇಖರ ಮೆಣಸಿನಕಾಯಿ, ರುದ್ರಣ್ಣ ಚಂದರಗಿ, ಮಹಾಂತೇಶ ಹಳ್ಳೂರು, ಡಾ. ರವಿ ಪಾಟೀಲ, ಬಸನಗೌಡ ಚಿಕ್ಕನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.