ಬೆಳಗಾವಿ-ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಕೊನೆಯ ಹಂತ ತಲುಪಿದೆ. ನಾಳೆಯೊಳಗೆ ಮೀಸಲಾತಿ ಘೋಷಿಸಲು ಪಂಚಮಸಾಲಿ ಸಮುದಾಯ ಗಡುವು ನೀಡಿದೆ. ಮೀಸಲಾತಿ ಘೋಷಿಸಿದ್ರೆ ನಾಳೆ ನಡೆಯುವ ವಿರಾಟ ಪಂಚಶಕ್ತಿ ಸಮಾವೇಶದಲ್ಲಿ ಸಿಎಂಗೆ ಸನ್ಮಾನ ಇಲ್ಲವಾದ್ರೆ ಹೋರಾಟ ಮಾಡೋದಾಗಿ ಕೂಡಲಸಂಗಮ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಅಂತಿಮ ಹಂತ ತಲುಪಿದೆ. ನಾಳೆಯೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸಬೇಕು. ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಪಡೆಯಬೇಕು ಇಲ್ಲವಾದ್ರೆ ವಿರಾಟ ಪಂಚಶಕ್ತಿ ಸಮಾವೇಶದಲ್ಲಿ ಉಗ್ರ ಪ್ರತಿಭಟನೆ ನಡೆಸಲು ಪಂಚಮಸಾಲಿ ಸಮುದಾಯ ನಿರ್ಧರಿಸಿದೆ. ಈಗಾಗಲೇ ಸವದತ್ತಿಯಿಂದ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದು ನಾಳೆ ಬೆಳಗಾವಿಯ ಈ ಪಾದಯಾತ್ರೆ ತಲುಪಲಿದೆ.
ಸುವರ್ಣಸೌಧದಿಂದ ಎರಡು ಕಿಲೋಮೀಟರ್ ಅಂತರದಲ್ಲಿ ಇರುವ ರಾಘವೇಂದ್ರ ಲೇಔಟ್‌ನಲ್ಲಿ 60 ಎಕರೆ ಪ್ರದೇಶದಲ್ಲಿ ಸಮಾವೇಶ ನಡೆಸಲು ನಿರ್ಧರಿಸಿದ್ದಾರೆ. 25 ಲಕ್ಷ ಜನ ಸೇರುವಂತೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಕರೆ ಕೊಟ್ಟಿದ್ದಾರೆ ಆದರೂ ಸುಮಾರು 2ಲಕ್ಷಕ್ಕೂ ಹೆಚ್ಚು ಜನ ಸೇರುವ ಸಾಧ್ಯತೆ ಇದೆ. ಇನ್ನು ನಾಳೆಯೊಳಗೆ ಸಿಎಂ ಮೀಸಲಾತಿ ಘೋಷಣೆ ಮಾಡುತ್ತಾರೆ ಎಂಬ ವಿಶ್ವಾಸವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಕ್ತಪಡಿಸಿದ್ದಾರೆ.
ಇನ್ನು ಮತ್ತೊಂದೆಡೆ ನಾಳೆಯೊಳಗೆ ರಾಜ್ಯ ಸರ್ಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇನ್ನು ಈಗಾಗಲೇ ವಿಧಾನಸಭಾ ಕ್ಷೇತ್ರವಾರು ಸಮಾವೇಶ ಮಾಡಿರುವ ಪಂಚಮಸಾಲಿ ಸಮುದಾಯದ ಮುಖಂಡರು ಲಕ್ಷಾಂತರ ಜನರ ಸೇರಲು ಸಿದ್ಧತೆ ನಡೆಸಿದ್ದಾರೆ. ನಾಳೆ ಬೆಳಗ್ಗೆ ಹಿರೇಬಾಗೇವಾಡಿಯಿಂದ ರಾಷ್ಟ್ರೀಯ ಹೆದ್ದಾರಿ 4 ಮೂಲಕ ಪಾದಯಾತ್ರೆ ಆಗಮಿಸುವ ಹಿನ್ನೆಲೆ ಸಂಚಾರ ಅಸ್ತವ್ಯಸ್ತ ಆಗುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹ ನಾಳೆಯೊಳಗೆ ಮೀಸಲಾತಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಪಂಚಮಸಾಲಿ ಮೀಸಲಾತಿ ಹೋರಾಟ ಅಂತಿಮ ಹಂತ ತಲುಪಿದ್ದು ನಾಳೆಯೊಳಗೆ ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ ಬಂಪರ್ ಗಿಫ್ಟ್ ಕೊಡ್ತಾರಾ ಅಂತಾ ಕಾದು ನೋಡಬೇಕು.