ಬೆಳಗಾವಿ- ಬೆಳಗಾವಿ ಮಹಾನಗರಕ್ಕೆ ಹೊಂದಿಕೊಂಡೇ ಇರುವ ಪೀರನವಾಡಿ ಗ್ರಾಮದಲ್ಲಿ ರಾಯಣ್ಣನ ಅಭಿಮಾನಿಗಳು ನಿನ್ನೆ ರಾತ್ರಿ 3 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸಿ ,ನಾಲ್ಕು ವರ್ಷಗಳ ವಿವಾದಕ್ಕೆ ಅಂತ್ಯ ಹಾಡಿದರು.
ನಿನ್ನೆ ಮದ್ಯರಾತ್ರಿ ಪೀರನವಾಡಿಗೆ ದೌಡಾಯಿಸಿದ ರಾಯಣ್ಣನ ಅಭಿಮಾನಿಗಳು ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತ್ರತ್ವದಲ್ಲಿ ಧಿಡೀರ್ ಕಾರ್ಯಾಚರಣೆ ನಡೆಸಿ,ರಾಯಣ್ಣನ ಅಭಿಮಾನಿಗಳು ನಿಗದಿ ಪಡಿಸಿದ ಸ್ಥಳದಲ್ಲೇ ಮೂರ್ತಿ ಪ್ರತಿಷ್ಠಾಪನೆ ಮಾಡಿ,ಪೂಜೆ ಸಲ್ಲಿಸಿ ಮೂರ್ತಿಗೆ ಹೂಮಾಲೆ ಹಾಕಿ ಮೂರ್ತಿಯನ್ನು ಅನಾವರಣ ಮಾಡಿದರು.
ಬೆಳಿಗ್ಗೆ ಸುರ್ಯೋದಯವಾಗಿ,ಶುಭೋದಯವಾಗಿ,ಉಷಾಕಿರಣಗಳು ರಾಯಣ್ಣನ ಮೂರ್ತಿಯ ಮೇಲೆ ಬೀಳುತ್ತಿದ್ದಂತೆ,ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ವಿಷಯ ಗೊತ್ತಾಗಿ ನೂರಾರು ಜನ ಶಿವಾಜಿ ಅಭಿಮಾನಿಗಳು ಪೀರನವಾಡಿ ಸರ್ಕಲ್ ಗೆ ದೌಡಾಯಿಸಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಸರ್ಕಲ್ ನಲ್ಲೇ ಸಿಂಹಾಸನರೂಢ ಶಿವಾಜಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಮುಂದಾದರು ಪೋಲೀಸರು ಅವರನ್ನು ತಡೆದು ಶಿವಾಜಿ ಮೂರ್ತಿಯನ್ನು ತಮ್ಮ ವಶಕ್ಕೆ ಪಡೆದರು
ಅಧಿಕಾರಿಗಳ ದೌಡು
ಪೀರನವಾಡಿಯಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು,ಒಂದು ಕಡೆ ಶಿವಾಜಿ ಅಭಿಮಾನಿಗಳು ಗುಂಪುಗೂಡಿದ್ದರು,ಇನ್ನೊಂದು ಕಡೆ ರಾಯಣ್ಣನ ಅಭಿಮಾನಿಗಳು ಗುಂಪುಗೂಡಿದ್ದರು,ಸ್ಥಳಕ್ಕೆ ದೌಡಾಯಿಸಿದ ಡಿಸಿಪಿ ಸೀಮಾ ಲಾಟ್ಕರ್ ಕಾರಿನಿಂದ ಇಳಿಯುತ್ತಿದ್ದಂತೆಯೇ ಪೋಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು,ಜನ ಗುಂಪು ಸೇರದಂತೆ ನೋಡಿಕೊಳ್ಳಿ ಎಂದು ಸೂಚನೆ ನೀಡಿ ಎರಡೂ ಗುಂಪುಗಳನ್ನು ಚದುರಿಸಿದರು,ಕೆಲ ಹೊತ್ತಿನ ನಂತರ ಬೆಳಗಾವಿ ನಗರ ಪೋಲೀಸ್ ಆಯುಕ್ತ ತ್ಯಾಗರಾಜನ್ ಹಾಗು ಬೆಳಗಾವಿ ನಗರದ ಎಲ್ಲ ಎಸಿಪಿ ಗಳು ಪೀರನವಾಡಿಗೆ ದೌಡಾಯಿಸಿದರು
ಮೂರ್ತಿ ತೆರವುಗೊಳಿಸುವಂತೆ ಪಟ್ಟು
ಪೀರನವಾಡಿಯಲ್ಲಿ ಎಲ್ಲ ಹಿರಿಯ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ ಬಳಿಕ ಪೀರನವಾಡಿಯ ಶಿವಾಜಿ ಮೂರ್ತಿಯ ಬಳಿ ನೂರಾರು ಜನ ಶಿವಾಜಿ ಅಭಿಮಾನಿಗಳು ಸೇರಿದರು,ಪೀರನವಾಡಿಯ ಶಿವಾಜಿ ಸರ್ಕಲ್ ನಲ್ಲಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದು ಕಾನೂನು ಬಾಹಿರ ಕೂಡಲೇ ಮೂರ್ತಿ ತೆರವು ಮಾಡಿ,ಇಲ್ಲಾ ಅಂದ್ರೆ ಬೇರೆ ಕಡೆಗೆ ಸ್ಥಳಾಂತರ ಮಾಡಿ ಎಂದು ಶಿವಾಜಿ ಅಭಿಮಾನಿಗಳು ಪಟ್ಟು ಹಿಡಿದ್ರು,ಪೋಲೀಸರ ಜೊತೆ ವಾದ ಮಾಡಿದ್ರು ಪೋಲೀಸ್ ಅಧಿಕಾರಿಗಳು ಅವರನ್ನು ಮನವೊಲಿಸುವ ಪ್ರಯತ್ನ ಮಾಡಿದರೂ ಶಿವಾಜಿ ಅಭಿಮಾನಿಗಳು ಪಟ್ಟು ಸಡಿಸಲಿಲ್ಲ.
ಲಾಠಿ ಪ್ರಹಾರ
ಪೀರನವಾಡಿಯ ಛತ್ರಪತಿ ಶಿವಾಜಿ ಮೂರ್ತಿಯ ಬಳಿ ನೂರಾರು ಶಿವಾಜಿ ಅಭಿಮಾನಿಗಳು ಸೇರಿಕೊಂಡು,ರಾಯಣ್ಣನ ಮೂರ್ತಿಯನ್ನು ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದು ಪೋಲೀಸ್ ಅಧಿಕಾರಿಗಳ ಜೊತೆ ವಾದ ಮಾಡುತ್ತಿರುವಾಗಲೇ ಅದೇ ಸ್ಥಳಕ್ಕೆ ಇಬ್ಬರು ರಾಯಣ್ಣನ ಅಭಿಮಾನಿಗಳು ಹಳದಿವ ಧ್ವಜ ಹಿಡಿದು ಬೈಕ್ ಮೇಲೆ ಆಗಮಿಸಿದಾಗ,ಕೆಲವರು ಅವರ ಮೇಲೆ ಕಲ್ಲು ಎಸೆದರು,ಆಗ ಪೋಲೀಸರು ಅಲರ್ಟ್ ಆಗಿ ಬೈಕ್ ಮೇಲೆ ಬಂದಿದ್ದ ಇಬ್ಬರು ರಾಯಣ್ಣನ ಅಭಿಮಾನಿಗಳಿಗೆ ಲಾಠಿ ತೋರಿಸಿ ಅಲ್ಲಿಂದ ಚದುರಿಸಿ ಓಡಿಸಿದ ಬಳಿಕ,ಕಲ್ಲು ತೂರಿದ ಕಿಡಗೇಡಿಗಳ ಮೇಲೆಯೂ ಲಾಠಿ ಪ್ರಹಾರ ನಡೆಸಿ ಜನರ ಗುಂಪು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.ಲಾಠಿ ಪ್ರಹಾರದ ಬಳಿಕ ಪೀರನವಾಡಿ ಈಗ ಶಾಂತವಾಗಿದ್ದು ಪೋಲೀಸರ ಹತೋಟಿಯಲ್ಲಿದೆ.
ಬೆಳಗಾವಿಗೆ ಎಡಿಜಿಪಿ ಭೇಟಿ
ಪೀರನವಾಡಿ ಘಟನೆ ನಡೆಯುತ್ತಿದ್ದಂತೆಯೇ ಸರ್ಕಾರದ ಸೂಚನೆ ಮೇರೆಗೆ,ಬೆಳಗಾವಿಗೆ ಎಡಿಜಿಪಿ ಭೇಟಿ ನೀಡಿದ್ದಾರೆ.
ಬೆಳಗಾವಿಗೆ ಆಗಮಿಸಿರುವ ಕಾನೂನು ಮತ್ತು ಸುವ್ಯೆವಸ್ಥೆ ವಿಭಾಗದ ಎಡಿಜಿಪಿ ಅಮರಕುಮಾರ ಪಾಂಡೆ,ಅವರು ಬೆಳಗಾವಿಯ ಪೋಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಪೀರನವಾಡಿ ಘಟನೆಯ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ರಾಯಣ್ಣನ ಅಭಿಮಾನಿಗಳ ವಿಜಯೋತ್ಸವ
ಪೀರನವಾಡಿ ಗ್ರಾಮದ ಸರ್ಕಲ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ ರಾಯಣ್ಣನ ಅಭಿಮಾನಿಗಳು ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಬ್ರಮಿಸಿದರು.