Breaking News

ಅಜ್ಞಾತಕ್ಕೆ ಉಳಿಸಲಾದ, ಜನಪರ ನಾಯಕ ಪ್ರಕಾಶ ಹುಕ್ಕೇರಿ

ಬೆಳಗಾವಿ ಜಿಲ್ಲೆಯ ರಾಜಕಾರಣ ಮಹಾರಾಷ್ಟ್ರ ಪ್ರಭಾವ ಸಿಂಡಿಕೇಟ್‌ ಡೆಮಾಕ್ರಸಿ ವ್ಯವಸ್ಥೆಯದು. ಗ್ರಾಮ ಪಂಚಾಯಿತಿ ಸದಸ್ಯತ್ವದಿಂದ ಸಂಸದರ ವರೆಗೆ ಪ್ರಜಾತಂತ್ರದ ಆಧಾರದ ಮೇಲೆಯೇ ಇಲ್ಲಿಯ ಜನಪ್ರತಿನಿಧಿಗಳು ಆಯ್ಕೆಯಾದರೂ ಆಯ್ಕೆಯಾಗುವ ಹೆಚ್ಚಾನುಹೆಚ್ಚು ನಾಯಕರು ಅನುಕೂಲಸ್ಥರು, ಶ್ರೀಮಂತರು. ಹೀಗಾಗಿ ಇಲ್ಲಿ ಪಾಳೆಗಾರರ ರಾಜಕೀಯ ಪ್ರಭಾವವಿದೆ. ಪಕ್ಷ ರಾಜಕೀಯ ಹೆಸರಿಗೆ ಮಾತ್ರ. ಚುನಾವಣೆ ಬಂದಾಗ ಒಳಗೊಳಗೆ ಏನೆಲ್ಲಾ ಹೊಂದಣಿಕೆಗಳು ನಡೆಯುವುದು ಬೆಳಗಾವಿ ರಾಜಕೀಯ ಬಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ.

ಬೆಳಗಾವಿ ಜಿಲ್ಲೆಯಲ್ಲಿ ಪಾಳೆಗಾರರ ರಾಜಕೀಯ ವ್ಯವಸ್ಥೆಯ ಕಾರಣ ಸಾರ್ವಜನಿಕರ ಅಭಿವೃದ್ಧಿ ಕೆಲಸಗಳು ಅಷ್ಟಕಷ್ಟೆ. ತಮ್ಮ ಸ್ವಂತ ಅನುಕೂಲವೇ ಮುಖ್ಯವಾಗಿರಿಸಿಕೊಂಡು ಕೆಲ ಅಭಿವೃದ್ಧಿ ಕೆಲಸಗಳಾಗಿವೆ ಹೊರತು, ಗಡಿಭಾಗದಲ್ಲಿ ಇಂಥ ಅಭಿವೃದ್ಧಿ ಮಾಡಬೇಕೆಂಬು ಮಹತ್ವಾಕಾಂಕ್ಷೆ ತೀರ ಕಡಿಮೆ ಪ್ರಮಾಣದು. ಇಷ್ಟಿದ್ದೂ ಕೆಲ ಶಾಸಕರು ಸಾಧ್ಯವಾದ ಮಟ್ಟಿಗೆ ಜನಪರ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿಕೊಂಡಿರುವುದನ್ನೂ ತಳ್ಳಿ ಹಾಕುವಂತಿಲ್ಲ.

ಇಂಥ ಸಿಂಡಿಕೇಟ್‌ ಡೆಮಾಕ್ರಸಿ ವ್ಯವಸ್ಥೆಯನ್ನು ಅರಗಿಸಿ ಕುಡಿದ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರು ಪಾಳೆಗಾರಿಕೆಯ ಗತ್ತಿನಲ್ಲಿಯೇ ಪಾಳೆಗಾರನಾಗಿ ಉಳಿಯದೆ ಎಲ್ಲರೂ ಮೆಚ್ಚುವ ಜನಪರ ಕೆಲಸಗಳನ್ನು ಮಾಡುವುದರ ಮೂಲಕ ವಿಶೇಷ ಗಮನ ಸೆಳೆದವರು. ಪ್ರಜ್ಞಾವಂತ ಮತದಾರರಿಗೆ ಇಂಥವರು ಬೇಡವಾಗಿದಾರೋ ಇಲ್ಲ ಬದಲಾವಣೆ ಬಯಸುವರೋ ಕಳೆದ ಲೋಕಸಭಾ ಚುನಾವಣೆಯಲ್ಲಿ ಈ ಜನ ನಾಯಕನನ್ನು ಸೋಲಿಸಿದರು.

ಪ್ರಕಾಶ ಹುಕ್ಕೇರಿ ಜನರ ಮಧ್ಯ ಇದ್ದು ಕೆಲಸ ಮಾಡುವ ಕ್ರಿಯಾಶೀಲ ರಾಜಕಾರಣಿ. ಹೀಗಾಗಿ, ಇವರು ಹಿತ್ತಲ ಬಾಗಿಲಿನಿಂದ ವಿಧಾನಸೌಧ ಪ್ರವೇಶಿಸಿದವರಲ್ಲ. ತಮ್ಮ ಬಗ್ಗೆ ಅಪಾರ ವಿಶ್ವಾಸ ಹೊಂದಿದ ಹುಕ್ಕೇರಿ ಅವರು ಹಿತ್ತಲಬಾಗಿಲಿನ ಕದ ಬಡೆದವರೂ ಅಲ್ಲ. ಮೀಸೆಯ ಮೇಲೆ ಕೈತೀಡುತ್ತ ಮುಂಬಾಲಿನಿಂದಲೇ ಪ್ರವೇಶ ಪಡೆಯುವ ಸಾಹಸಿಗ,ಜನಪರ ಕಾಳಜಿವುಳ್ಳ ಹಿರಿಯ ನಾಯಕ.

ಪ್ರಕಾಶ ಹುಕ್ಕೇರಿ ಅವರು ಬೆಳಗಾವಿ ಗಡಿಭಾಗದಲ್ಲಿರುವ ಒಬ್ಬ ಅಪರೂಪದ ರಾಜಕಾರಣಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಚಿಕ್ಕೋಡಿ ಭಾಗದಲ್ಲಿ ಹೋದರೆ ಪ್ರತಿಯೊಬ್ಬರೂ ಈ ಮಾತನ್ನು ಹೇಳುತ್ತಾರೆ. ಕರ್ನಾಟಕದ ರಾಜಕಾರಣಿಗಳು ಇವರಿಗೆ ಹೇಗೆ ಆತ್ಮೀಯರೋ ಹಾಗೆಯೇ ಮೊದಲಿನಿಂದಲೂ ಮಹಾರಾಷ್ಟ್ರದ ಘಟಾನುಘಟಿ ರಾಜಕಾರಣಿಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡು ಬಂದವರು. ಉಭಯ ರಾಜ್ಯಗಳ ಮಧ್ಯದ ಅಭಿವೃದ್ಧಿ ಕೆಲಸಗಳ ತೊಡಕಿಗಾಗಿ ತವರು ಮನೆಗೆ ಹೋದಂತೆ ಮಹಾರಾಷ್ಟ್ರದ ಮಂತ್ರಿಗಳನ್ನು ಮನೆಬಾಗಿಲು ತಟ್ಟಿ ಕೆಲಸ ಮಾಡಿಸಿಕೊಂಡವರು. ರಾಜ್ಯ ಅಥವಾ ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರವಿರಲಿ ತಮ್ಮಕ್ಷೇತ್ರದ ಅಭಿವೃದ್ಧಿಗೆ ಹಠಹಿಡಿದು ಹಣ ಬಿಡುಗಡೆ ಮಾಡಿಸಿಕೊಂಡು ಕೆಲಸ ಮಾಡುತ್ತ ಬಂದವರು. ಜನಪರ ಕೆಲಸ ಮಾಡಿಸಿಕೊಳ್ಳಲು ಪ್ರಕಾಶ ಹುಕ್ಕೇರಿ ಅವರಿಗೆ ವಿಧಾನಸೌಧ, ಸಂಸತ್ತೇ ಬೇಕಾಗಿಲ್ಲ. ಮತ್ತು ಅವರು ಹೆಚ್ಚಾಗಿ ತಮ್ಮ ಯೋಜನೆಗಳ ಅನುಮೋದನೆಗೆ ಸಚಿವರ ಮನವಲಿಸಿದ್ದ ವಿಧಾನಸೌಧ ಹಾಗೂ ಸಂಸತ್ತಿನಲ್ಲಿ ಕಡಿಮೆ. ಏನಿದ್ದರೂ ಮಂತ್ರಿಗಳ ಮನೆಗಳಿಗೆ ನೇರವಾಗಿ ಭೆಟ್ಟಿ ನೀಡಿ, ತೀರ ಆತ್ಮೀಯತೆಯಿಂದ ಮಾತಾಡಿ, ಅವರ ಮನ ಗೆದ್ದು ಕೆಲಸ ಸಾಧಿಸಿಕೊಂಡು ಬಂದಿರುವ ಜಾಯಮಾನ ಅವರದು. ಪ್ರಕಾಶ ಹುಕ್ಕೇರಿ ಅವರು ಜನಪರ ಕಾರ್ಯಸಾಧನೆಯ ಈ ಕಾರಣದಿಂದಾಗಿ ಚಿಕ್ಕೋಡಿ, ಸದಲಗಾ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಾದರಿ ಕೆಲಸಗಳಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಬೆಳಗಾವಿ ಜಿಲ್ಲೆಯಿಂದಲೂ ವಿಧಾನ ಸೌಧದಲ್ಲಿ ಸಚಿವರಿದ್ದರು ಎಂಬ ಅನುಭವ ಬೆಳಗಾವಿ ಜಿಲ್ಲೆಯ ಜನತೆಯ ಅನುಭವಕ್ಕೆ ಬಂದದ್ದು ಪ್ರಕಾಶ ಹುಕ್ಕೇರಿ ಅವರು ಕಾಂಗ್ರೆಸ್‌ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದಾಗ. ಅವರು ಸಚಿವರಾಗಿದ್ದಾಗ ಹಲವಾರು ಅಭಿವೃದ್ಧಿ ಕೆಲಸಗಳು ನಡೆದಿವೆ. ಯೋಜನೆಗಳು ನೆರವೇರಿದಾಗ ಇಡೀ ಸರ್ಕಾರವನ್ನೇ ಬೆಳಗಾವಿಗೆ ಕರೆತಂದು ಮೆರೆಸಿ ಮುಂದಿನ ಕಾರ್ಯಯೋಜನೆಗೆ ಮುನ್ನುಡಿ ಬರೆದ ಜಾಣ ರಾಜಕಾರಣಿ ಪ್ರಕಾಶ ಹುಕ್ಕೇರಿ ಅವರನ್ನು ಬೆಳಗಾವಿ ಜಿಲ್ಲೆಯ ಜನ ಪ್ರೀತಿಯಿಂದ ಮೀಸೆ ಮಾವ ಎಂದೇ ಕರೆಯುತ್ತಾರೆ.

ಬೆಳಗಾವಿಯ ವೈದ್ಯಕೀಯ ಕಾಲೇಜು ಸ್ಥಾಪನೆಯಾದದ್ದು ಪ್ರಕಾಶ ಹುಕ್ಕೇರಿ ಅವರು ಸಚಿವರಾದಾಗ. ಅನೇಕ ಅಡೆತಡೆಗಳನ್ನು ಸದೆಬಡೆದು, ಕಾಲೇಜು ಆರಂಭಗೊಳ್ಳಲು ಹುಕ್ಕೇರಿ ಅವರ ಶ್ರಮ ಅಡಿಗಿರುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ವೈದ್ಯಕೀಯ ಕಾಲೇಜಿನಿಂದ ಪ್ರತಿಭಾವಂತರು ವೈದ್ಯರು ಹೊರಬರಲು ಸಾಧ್ಯವಾಗಿದೆ. ಕಿತ್ತೂರು ಉತ್ಸವಕ್ಕೆ ಹೊಸ ಕಳೆ ತಂದುಕೊಟ್ಟವರು ಪ್ರಕಾಶ ಹುಕ್ಕೇರಿ. ಅವರು ಸಚಿವರಾಗಿದ್ದಾಗ ಬಹುಷಃ 2005 ರಲ್ಲಿ ಉಂಟಾದ ಪ್ರವಾಹದಲ್ಲಿ ಮಾಡಿದ ಕೆಲಸ, ತೋರಿದ ಸಾಹಸ ಯಾರೂ ಮರೆಯಲು ಸಾಧ್ಯವಿಲ್ಲ. ಹೇಳುತ್ತ ಹೋದಂತೆ ಪಟ್ಟಿ ಬೆಳೆಯುತ್ತದೆ.

ಸಂಸದ ಸ್ಥಾನಕ್ಕೆ ಸೋತರೂ ಸುಮ್ಮನಿರದ ನಿರಾಶೆಗೆ ಒಳಗಾಗದ ಆಶಾವಾದದ ಪ್ರಯತ್ನ ಹಾಗೂ ಕಾಳಜಿಪರ ಕೆಲಸಗಳು ನಡೆಯುತ್ತಲೇ ಇರುತ್ತವೆ. ಅತೀವೃಷ್ಟಿ ಪ್ರವಾಹ ಉಂಟಾದರೆ ಪ್ರಕಾಶ ಹುಕ್ಕೇರಿ ಅವರ ಸಹಾಯ ಇದ್ದೇ ಇರುತ್ತದೆ. ನದಿ ಸುತ್ತುವರೆದಾಗ,ಗ್ರಾಮಗಳು ಜಲಾವೃತಗೊಂಡಾಗ ಸರ್ಕಾರದ ಬೋಟ್‌ ಬರುತ್ತದೆಯೋ ಇಲ್ಲವೋ ಗೊತ್ತಿಲ್ಲ, ಆದರೆ, ಪ್ರಕಾಶ ಹುಕ್ಕೇರಿ ಅವರು ದೋಣಿ ,ಮತ್ತು ಬೋಟ್ ಬಂದೇ ಬರುತ್ತದೆ ಎಂಬ ವಿಶ್ವಾಶ ಕೃಷ್ಣಾ ತೀರದ ಸಂತ್ರಸ್ತರ ಬಾಯಿಯಲ್ಲಿ ಯಾವತ್ತೂ ಖಾಯಂ ಇದೆ. ಸ್ವತಃ ತಾವೇ ನೀರಿಗಿಳಿದರು ಜನರ ರಕ್ಷಣೆಗೆ ಮುಂದಾಗಿದ್ದಾರೆ. ಸಹಾಯ ಹಸ್ತ ಚಾಚಿದ್ದಾರೆ. ತಾವು ಹೋಗುವ ದಾರಿಯಲ್ಲಿ ಅಪಘಾತವಾಗಿ ಸಂಕಷ್ಟಕ್ಕೆ ಒಳಗಾದವರಿಗೆ ಸ್ವತಃ ನಿಂತು ಸಹಾಯ ಮಾಡಿದ ಉದಾಹರಣೆಗಳು ಈಗಲೂ ನಡೆಯುತ್ತಲೇ ಇರುತ್ತವೆ.

ಜನ ಸೇವೆಗೆ ಇವರಿಗೆ ಶಾಸಕನಾಗಬೇಕೆಂದಿಲ್ಲ. ಅದು ಅವರ ಸಹಜ ಗುಣ. ಹೀಗಾಗಿ, ಇವರನ್ನು ಕಾಂಗ್ರೆಸ್‌ ಪಕ್ಷದವರು ನೆನೆಯದೇ ಇರಬಹುದು, ಜನರು ಸೋಲಿಸಿರಬಹುದು. ಆದರೆ, ಪ್ರಕಾಶ ಹುಕ್ಕೇರಿಯವರು ನಂಬಿದವರನ್ನು,ಕ್ಷೇತ್ರದ ಜನತೆಯನ್ನು,ತಮ್ಮ ಬೆಂಬಲಿಗರನ್ನು, ಮರೆಯಲು ಸಾಧ್ಯವಿಲ್ಲ.

ಕಾಂಗ್ರೆಸ್‌ ಪಕ್ಷದಲ್ಲಿರುವ ಜನಪರ ಕೆಲಸದ ಅಪರೂಪದ ಇಂಥ ಬೆಳಗಾವಿ ಜಿಲ್ಲೆಯ ರಾಜಕಾರಣಿಯನ್ನು ಕಾಂಗ್ರೆಸ್‌ ಪಕ್ಷ ಕಡೆಗಾನಿಸಿದೆ ಹಾಗೂ ಅವರನ್ನು ಮೂಲೆಗುಂಪು ಮಾಡುವ ಪ್ರಯತ್ನ ಮಾಡುತ್ತ ಬಂದಿದೆ. ಅವರಿಗೆ ರಾಜ್ಯದ ರಾಜಕಾರಣದಲ್ಲಿ ಹೆಚ್ಚು ಆಸಕ್ತಿ ಇದ್ದರೂ ಮೂಲಿಗೊತ್ತುವ ಉದ್ದೇಶದಿಂದಲೇ ಲೋಕಸಭೆ ಚುನಾಚವಣೆಗೆ ಸ್ಪರ್ಧಿಸಲು ನಿಲ್ಲಿಸಲಾಯಿತು. ಪಕ್ಷದ ಮುಂದಿನ ಸಾಲಿನಲ್ಲಿ ಪ್ರಕಾಶ ಹುಕ್ಕೇರಿ ಅವರು ಬರದಂತೆ ಎಲ್ಲ ರೀತಿಯ ಪ್ರಯತ್ನಗಳು ಈಗಲೂ ನಡೆದಿದೆ. ಆದರೂ, ಹುಕ್ಕೇರಿ ಅವರು ತಮ್ಮ ಇಳಿವಯಸ್ಸಿಯಲ್ಲಿ ಯುವಕನಂತೆ ಕೆಲಸದಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಜನಪರ ಕೆಲಸಗಳಿಂದ ಜನರ ಮನೆ ಮಾತಾದ ಪ್ರಕಾಶ ಹುಕ್ಕೇರಿ ಅವರ ಕ್ರಿಯಾಶೀಲತೆ, ರಾಜಕೀಯ ಅನುಭವ ಕಾಂಗ್ರೆಸ್‌ ಮರತಿರಬಹುದು. ಆದರೆ, ಬಿಜೆಪಿ ಪಕ್ಷದ ಹಿರಿಯ ನಾಯಕ, ಇಂದಿನ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಮರೆತಿಲ್ಲ. ಬಸವರಾಜ್‌ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಕ್ಕೆ ಅವರೊಂದಿಗಿನ ಆತ್ಮೀಯತೆಯ ಕಾರಣ, ಪ್ರಕಾಶ ಹುಕ್ಕೇರಿ ಅವರು ಅಭಿನಂದಿಸಲು ಹೋದಾಗ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಸ್ವತಃ ಬಸವರಾಜ್‌ ಬೊಮ್ಮಾಯಿ ಅವರು ಪ್ರಕಾಶ ಹುಕ್ಕೇರಿ ಅವರ ಕಾಲಿಗೆಬಿದ್ದು ನಮಸ್ಕರಿಸುವುದರ ಮೂಲಕ ಸೌಜನ್ಯತೆ ಮೆರೆದಿದ್ದಾರೆ. ಇದು ಬಸವರಾಜ್‌ ಬೊಮ್ಮಾಯಿ ಅವರ ಸೌಜನ್ಯ ಮಾತ್ರವಲ್ಲ, ಪ್ರಕಾಶ ಹುಕ್ಕೇರಿ ಅವರ ರಾಜಕೀಯ ಅನುಭವ ಹಾಗೂ ಜನಪರ ಮನ್ನಣೆಯ ಶಕ್ತಿಯನ್ನೂ ಸೂಚಿಸುತ್ತದೆ. ಇದನ್ನು ಬಸವರಾಜ್‌ ಬೊಮ್ಮಾಯಿ ಅವರು ಚನ್ನಾಗಿ ಬಲ್ಲವರಾಗಿದ್ದಾರೆ. ಆದರೆ, ಮುಳುಗುವ ದೋಣಿಯ ಸ್ಥಿತಿಯಲ್ಲಿರುವ ಕಾಂಗ್ರೆಸ್‌ ಪಕ್ಷದ ಪಂಚೇಂದ್ರಿಗಳಿಗೆ ತಾಗುತ್ತಿಲ್ಲ. ದೋಣಿ ಮುಳುಗುವ ಮುನ್ನ ಇನ್ನಾದರೂ ಕೃಷ್ಣಾ ನದಿಯ ಪ್ರವಾಹದಲ್ಲಿ ಹುಟ್ಟಹಾಕಿ ಅನುಭವವಿರುವ ಪ್ರಕಾಶ ಹುಕ್ಕೇರಿ ಅವರ ಕೈಯಲ್ಲಿಯೂ ಪಕ್ಷ ಒಂದು ಹುಟ್ಟನ್ನು ಕೊಟ್ಟಿದ್ದಾದರೆ ದಡ ಸೇರಿತ್ತು!!

*ಮೆಹಬೂಬ ಮಕಾನದಾರ್*

****

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *