ಬೆಳಗಾವಿ:ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸಗಳನ್ನು ಜನರು ಮೆಚ್ಚುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಒತ್ತಾಯ ಪೂರ್ವಕವಾಗಿ ಸ್ಪರ್ಧಿಸಿದ್ದಾರೆ. ಸತೀಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ನ ದೊಡ್ಡ ಗೇಮ್ ಪ್ಲ್ಯಾನ್ ಇದಾಗಿದೆ. ಹೀಗಾಗಿ ಬಿಜೆಪಿ ಇಲ್ಲಿ ಗೆಲುವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯೆಕ್ತ ಪಡಿಸಿದ್ದಾರೆ.
ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಸಾರಿಗೆ ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಸಹಾನುಭೂತಿಯಿಂದ ಪರಿಶೀಲನೆ ನಡೆಸಬೇಕು ಕೊರೊನಾ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರ ಸರ್ಕಾರ ದೊಡ್ಡ ಪರಿಣಾಮ ಎದುರಿಸುತ್ತಿವೆ. ಈಗಷ್ಟೇ ಪ್ರಯಾಣಿಕರು ಓಡಾಡುತ್ತಿದ್ದಾರೆ.
ಕೊರೊನಾ ಹಾವಳಿ ಮತ್ತೆ ಹೆಚ್ಚಾಗುತ್ತಿದೆ. ಹೀಗಾಗಿ ಸಾರಿಗೆ ನೌಕರರು ಸರ್ಕಾರದ ಜೊತೆಗೆ ಮಾತುಕತೆ ನಡೆಸಬೇಕು. ಮೂರು ಕ್ಷೇತ್ರಗಳ ಉಪಚುನಾವಣೆ ಇರುವ ಕಾರಣ ನೀತಿ ಸಂಹಿತೆ ಜಾರಿಯಲ್ಲಿದೆ. ಕೋವಿಡ್ ಎರಡನೇ ಅಲೆ ಆರಂಭವಾಗಿದೆ. ಕೊರೊನಾದಿಂದ 4 ಸಾವಿರ ಕೋಟಿ ನಷ್ಟವಾಗಿದೆ. ಹೀಗಾಗಿ ಸಾರಿಗೆ ಸಾರಿಗೆ ನೌಕರರ ಬೇಡಿಕೆಯನ್ನು ಸರ್ಕಾರ ಪರಿಶೀಲನೆ ನಡೆಸಬೇಕು. ಆದರೆ ಮೇ ಅಂತ್ಯದವರೆಗೆ ಸಾರಿಗೆ ನೌಕರರು ತಾಳ್ಮೆಯಿಂದ ಇರಬೇಕು. ನಾಳೆ ಮುಷ್ಕರ ಕೈಬಿಡಬೇಕು ಎಂದು ಕೋರಿದರು.
ನಕ್ಸಲ್ ದಾಳಿ ಬಹಳ ದಿನಗಳ ನಂತ್ರ ಇಲ್ಲಿ ಆಗಿದೆ. ಇದು ದುರ್ದೈವದ ಸಂಗತಿ. ಆದರೆ ನಕ್ಸಲ್ ಬೆಳೆಸಿದ್ದು ಯಾರೆಂಬುವುದು ಗೊತ್ತಿದೆ.ನಮ್ಮ ಸರ್ಕಾರ ಬಂದ ನಂತರ ನಕ್ಸಲ್ ದಾಳಿ ಕಡಿಮೆ ಆಗಿವೆ. ಆದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಸಾಕಷ್ಟು ದಾಳಿಗಳಾಗಿವೆ. ದೇಶದಲ್ಲಿ ನಕ್ಸಲೀಸಂ ತೊಡೆದುಹಾಕಲು ನಾವು ಸಿದ್ಧರಿದ್ದೇವೆ. ಆದರೆ ಈ ವಿಷಯದಲ್ಲಿ ಯಾರೂ ರಾಜಕಾರಣ ಮಾಡಬಾರದು. ದೇಶದ ಆಂತರಿಕ ಭದ್ರತೆಗೆ ನಮ್ಮ ಸರ್ಕಾರ ಹೆಚ್ಚಿನ ಆಧ್ಯತೆ ನೀಡುತ್ತಿದೆ ಎಂದರು.