ಬೆಳಗಾವಿ- ವಾಯುವ್ಯ ಪದವೀಧರ, ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಯಲ್ಲಿ,ಹಣಮಂತ ನಿರಾಣಿ ಹಾಗೂ ಅರುಣ ಶಹಾಪೂರ ಅವರನ್ನು ಕಣಕ್ಕಿಳಿಸಿರುವ ಬಿಜೆಪಿ,ಇಬ್ಬರನ್ನು ಗೆಲ್ಲಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ.ಈ ಕುರಿತು ಬೆಳಗಾವಿಯಲ್ಲಿ ಸರಣಿ ಸಭೆಗಳನ್ನು ನಡೆಸುತ್ತಿರುವ ಬಿಜೆಪಿ ನಾಯಕರು ಇಂದು ಬೆಳಗಾವಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ,ಅವರಿಗೆ ಬಿಜೆಪಿ ಹೈಕಮಾಂಡ್ ಪರಿಷತ್ ಚುನಾವಣೆಯ ಜವಾಬ್ದಾರಿ ನೀಡಿದ್ದು ,ಅವರ ನೇತ್ರತ್ವದಲ್ಲಿ ಇಂದು ಬೆಳಗಾವಿಯ ಹೊಟೇಲ್ ಸಂಕಂ ದಲ್ಲಿ ಬೆಳಗಾವಿ,ವಿಜಯಪೂರ,ಬಾಗಲಕೋಟೆ ಈ ಮೂರು ಜಿಲ್ಲೆಗಳ ಹಾಲಿ,ಮಾಜಿ ಬಿಜೆಪಿ ಶಾಸಕರು ಮೂರು ಜಿಲ್ಲೆಗಳ ಮಂತ್ರಿಗಳು, ಹಾಗು ಇಲ್ಲಿಯ ಬಿಜೆಪಿ ಹಿರಿಯ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ.ಜೊತೆಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಈ ಸಭೆಯಲ್ಲಿ ಭಾಗವಹಿಸುತ್ತಾರೆ.
ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಭಿನ್ನಮತವಿದೆ.ಇದನ್ನು ಬಿಜೆಪಿಯ ವರಿಷ್ಠ ನಾಯಕರು ಬಹಿರಂಗವಾಗಿ ಒಪ್ಪದಿದ್ದರೂ ಬೆಳಗಾವಿ ಜಿಲ್ಲೆಯ ಗುಂಪುಗಾರಿಕೆಯ ಬಗ್ಗೆ ಅರಿವುಇದೆ. ಭಿನ್ನಮತ ಶಮನಕ್ಕಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಇವತ್ತು ಬೆಳಗಾವಿಯಲ್ಲಿ ಸಭೆ ನಡೆಸುತ್ತಿದ್ದಾರೆ.ಈ ಸಭೆಯಲ್ಲಿ ಯಾರು ಭಾಗವಹಿಸುತ್ತಾರೆ,ಯಾರು ಗೈರಾಗುತ್ತಾರೆ ಎನ್ನುವದು ಈಗ ಮುಖ್ಯವಾಗಿದೆ.
ಕಳೆದ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಒಳಜಗಳದಿಂದಾಗಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರು ಸೋಲು ಅನುಭವಿಸಬೇಕಾಯಿತು ಎನ್ನುವ ಮೆಸ್ಸೇಜ್ ಬಿಜೆಪಿ ಹೈಕಮಾಂಡ್ ಗೆ ಹೋಗಿರುವ ಹಿನ್ನಲೆಯಲ್ಲಿ ಬಿಜೆಪಿ ಈ ಬಾರಿಯ ಪರಿಷತ್ ಚುನಾವಣೆಯಲ್ಲಿ ಭಿನ್ನಮತ ಶಮನಕ್ಕೆ ವಿಶೇಷ ಮುತುವರ್ಜಿ ವಹಿಸಿ,ಇದಕ್ಕಾಗಿಯೇ ಬೆಳಗಾವಿಯಲ್ಲಿ ವಿಶೇಷ ಸಭೆ ನಡೆಸುತ್ತಿದೆ.
ಇಂದು ಶನಿವಾರ ಬೆಳಿಗ್ಗೆ 11-00 ಗಂಟೆಗೆ ಬೆಳಗಾವಿಯ ಹೊಟೇಲ್ ಸಂಕಂ ನಲ್ಲಿ ಸಭೆ ನಡೆಸಲಿರುವ ಪ್ರಲ್ಹಾದ್ ಜೋಶಿ ಮಧ್ಯಾಹ್ನ ಚಿಕ್ಕೋಡಿಯಲ್ಲೂ ಸಭೆ ನಡೆಸಲಿದ್ದಾರೆ.