ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಹೊಂದಿರುವ ರಾಯಬಾಗ ತಾಲ್ಲೂಕಿನ ಕುಡಚಿಯ ಮಾಸಾಬಿ ದರ್ಗಾಕ್ಕೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ₹2 ಕೋಟಿಯ ಬಂಪರ್ ಕೊಡುಗೆ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರವು ಬೆಳಗಾವಿ ಜಿಲ್ಲೆಯ ಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಿತ್ತು. ಇದರ ಬೆನ್ನಲ್ಲೇ, ವಕ್ಫ್ ಮಂಡಳಿ ವ್ಯಾಪ್ತಿಗೆ ಬರುವ ಬೆಳಗಾವಿಯ ಪ್ರಸಿದ್ಧ ಮಾಸಾಬಿ ದರ್ಗಾದ ಅಭಿವೃದ್ಧಿಗೆ ₹2 ಕೋಟಿ ಅನುದಾನ ಮಂಜೂರು ಮಾಡಿಸುವ ಮೂಲಕ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಭಾವೈಕ್ಯದ ಸಂದೇಶ ಸಾರಿದ್ದಾರೆ.
ರಾಯಬಾಗದ ಕುಡಚಿಯ ಮಾಸಾಬಿ ದರ್ಗಾಕ್ಕೆ ವರ್ಷವಿಡೀ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಮುಸ್ಲಿಮರಷ್ಟೇ ಅಲ್ಲ; ಹಿಂದೂಗಳೂ ಅಪಾರ ಸಂಖ್ಯೆಯಲ್ಲಿ ಬಂದು ದರ್ಶನ ಪಡೆಯುತ್ತಾರೆ. ಇಲ್ಲಿಗೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ, ಮೂಲಸೌಕರ್ಯ ಸಿದ್ಧಪಡಿಸುವುದಕ್ಕಾಗಿ ವಕ್ಫ್ ಮಂಡಳಿಯು ಪ್ರಿಯಾಂಕಾ ಜಾರಕಿಹೊಳಿ ಅವರ ವಿಶೇಷ ಪ್ರಯತ್ನದಿಂದಾಗಿ 2 ಕೋಟಿ ಮಂಜೂರು ಮಾಡಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ದೇಶ, ವಿದೇಶದಿಂದ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಭಕ್ತರ ಅನುಕೂಲಕ್ಕಾಗಿ ಸವದತ್ತಿ ಯಲ್ಲಮ್ಮ ಪುಣ್ಯಕ್ಷೇತ್ರಕ್ಕೆ ಕೂಡಲೇ ರೈಲು ಸಂಪರ್ಕ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿ ಕೇಂದ್ರದ ಗಮನಸೆಳೆಯುವುದಾಗಿ ಪ್ರಿಯಾಂಕಾ ಜಾರಕಿಹೊಳಿ ತಿಳಿಸಿದ್ದಾರೆ.