ಬೆಳಗಾವಿ
ರಾಜ್ಯದ ಅ ಢಲ್ಲಿ ನಡೆಯುತ್ತಿರುವ ಆರ್ ಆರ್ ವಿಧಾನಸಭಾ ಉಪಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಮ್ಮದೆ ಶೈಲಿಯಲ್ಲಿ ತಿರುಗೇಟು ನೀಡಿದರು.
ಶುಕ್ರವಾರ ಜಿಪಂ ಸಭಾಂಗಣದಲ್ಲಿ ವಿವಿಧ ಸ್ಥಾಯಿ ಸಮಿತಿ ಚುನಾವಣೆಯ ಅಧ್ಯಕ್ಷ, ಸದಸ್ಯರ ಆಯ್ಕೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಗೋಕಾಕ ಉಪಚುನಾವಣೆಯ ವೇಳೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪನವರ ಮೇಲೆ ಪ್ರಕರಣ ದಾಖಲಾಗಿತ್ತು. ಆರ್. ಆರ್. ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಕುಸುಮಾ ಅವರ ಮೇಲೆ ಪ್ರಕರಣ ದಾಖಲಾಗಿದ್ದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹತಾಶೆಯಿಂದ ಮಾತನಾಡುತ್ತಿದ್ದಾರೆ. ಅದು ಚುನಾವಣೆ ಪ್ರಕ್ರಿಯೆ ಅದನ್ನು ನಿಭಾಯಿಸಬೇಕು ಎಂದು ಅವರು ಹೇಳಿದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಚುನಾವಣೆ ಪಕ್ಷಾತೀತವಾಗಿ ನಡೆಯುವಂಥದ್ದು, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಹುಕ್ಕೇರಿ ಶಾಸಕ ಉಮೇಶ ಕತ್ತಿ ಅವರ ನಿರ್ಣಯವೇ ಅಂತಿಮ ಎಂದರು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಸಂಜಯ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.