Breaking News

ಸರ್ಕಾರಿ ಶಾಲೆಗಳಿಗೆ ದತ್ತು ಪಡೆಯುವ ಸೌಭಾಗ್ಯ….!!

*ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ; ಮಾನವೀಯತೆ ಮೆರೆದ ಸಚಿವ ರಮೇಶ್ ಜಾರಕಿಹೊಳಿ‌.*

ಭಾರತದ ಯುವಕರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸರ್ಕಾರಗಳಿಗೆ ಸವಾಲಾಗಿರುವ ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ರಾಜ್ಯದ ಜಲಸಂಪನ್ಮೂಲ ಸಚಿವರಾದ *ರಮೇಶ್ ಜಾರಕಿಹೊಳಿ‌* ಅವರು ಮಾನವೀಯತೆಯನ್ನು ಮೆರೆದಿದ್ದಾರೆ.

ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಕಾಲದಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ *ಶ್ರೀ ಬಿ ಎಸ್ ಯಡಿಯೂರಪ್ಪ* ಅವರು ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಕಾರ್ಪೊರೇಟ್ ಸಂಸ್ಥೆಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವಂತೆ ಮನವಿ ಮಾಡಿದ್ದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರಬೇಕಾದರೇ ಅಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮತ್ತು ಸಾಮಾಜಿಕ ಕಳಕಳಿಯುಳ್ಳ ಸಂಸ್ಥೆಗಳು ತಮ್ಮ ಜವಾಬ್ದಾರಿ ಅರಿತು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬೇಕೆಂಬ ಸರ್ಕಾರದ ಕಾಳಜಿಗೆ ಸ್ಪಂದನೆ ದೊರೆಯುತ್ತಿದೆ.

‘ಹೆಣ್ಣು ಮಗುವೊಂದಕ್ಕೆ ಶಿಕ್ಷಣ ನೀಡಿದರೆ ಶಾಲೆಯೊಂದನ್ನು ತೆರೆದಂತೆ’ ಎಂಬ ನುಡಿ ವಾಡಿಕೆಯಲ್ಲಿದ್ದು, ಇದಕ್ಕಿಂತ ಒಂದು ಹೆಜ್ಜೆ ಮುಂದಿರುವ ಜಲ ಸಂಪನ್ಮೂಲ ಸಚಿವ *ರಮೇಶ್‌ ಜಾರಕಿಹೊಳಿ* ಅವರು, ಅವಸಾನದ ಅಂಚಿನಲ್ಲಿ ಇರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ಮೂಲಕ ಹೃದಯ ಶ್ರೀಮಂತಿಗೆ ಮೆರೆದಿದ್ದಾರೆ.

ರಾಜ್ಯದಲ್ಲಿರುವ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣದೆ ಇರುವುದು ಒಂದೆಡೆಯಾದರೆ ಖಾಸಗಿ ಶಾಲೆಗಳ ಆರ್ಭಟದಿಂದ ಬಳಲಿ ಬೆಂಡಾಗಿವೆ. ಆದರೆ, ಮಾತೃ ಭಾಷೆ ಜತೆಗೆ ಒತ್ತಡ ರಹಿತ ಶಿಕ್ಷಣ ನೀಡುವಲ್ಲಿ ಸರ್ಕಾರಿ ಶಾಲೆಗಳ ಪಾತ್ರ ಪ್ರಮುಖವಾಗಿದೆ.

ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಶಿಕ್ಷಣ ನೀಡಿ ಅವರ ಬದುಕನ್ನು ಹಸನಾಗಿಸಿ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಸಚಿವ ಜಾರಕಿಹೊಳಿ‌ ಮುಂದಡಿ ಇರಿಸಿದ್ದಾರೆ.

‘ಭಾರತದ ಭವಿಷ್ಯಕ್ಕೆ ಉತ್ತಮ ಶಿಕ್ಷಣ ಭದ್ರಬುನಾದಿ’ ಎಂಬುದನ್ನು ಅರಿತಿರುವ ಸಚಿವ *ರಮೇಶ್ ಜಾರಕಿಹೊಳಿ‌*, ಗ್ರಾಮೀಣ ಭಾರತದಲ್ಲಿ ಶಿಕ್ಷಣ ಕ್ಷೇತ್ರ ಸುಧಾರಣೆಗೆ ಸಹಕಾರಿಯಾಗುವಂತೆ ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.

*ಏನೀ ಯೋಜನೆ:*
ರಾಜ್ಯದಲ್ಲಿ 43,447 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 3.029 ಪ್ರೌಢಶಾಲೆಗಳಿದ್ದು, ಶಿಕ್ಷಣ ಇಲಾಖೆಗೆ ವಾರ್ಷಿಕ ನೀಡಲಾಗುವ ಅನುದಾನದಲ್ಲಿ ಶೇ.90ರಷ್ಟು ಶಿಕ್ಷಕರ ಭತ್ಯೆಗೆ ಖರ್ಚಾಗುತ್ತಿದ್ದು, ಇನ್ನುಳಿದ ಶೇ.10ರಷ್ಟು ಅನುದಾನದಲ್ಲಿ ಶಾಲೆಗಳ ಅಭಿವೃದ್ಧಿ ಕಷ್ಟಸಾಧ್ಯ. ಈ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಅನುವಾಗುವಂತೆ ರಾಜ್ಯ ಸರ್ಕಾರವು *ಶಾಲಾ ದತ್ತು ಯೋಜನೆ* ಯನ್ನು ಹೊಂದಿದ್ದು, ಹತ್ತು ಹಲವು ಉದ್ಯಮಿಗಳು ಈಗಾಗಲೇ ಹಲವು ಶಾಲೆಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡವರ ಸಹಾಯದಿಂದ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಜತೆ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಮಾಡುವುದು ಸರ್ಕಾರದ ಆಲೋಚನೆ ಆಗಿದ್ದು, ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಹಲವು ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

*ಮಾದರಿ ರಾಜಕಾರಣಿ*:
ಸರ್ಕಾರದ ಈ ಯೋಜನೆ ಬಗ್ಗೆ ಅರಿತ ಸಚಿವ *ರಮೇಶ್ ಜಾರಕಿಹೊಳಿ* ಅವರು, ತಮ್ಮ ಕ್ಷೇತ್ರದ ಶಾಲೆಗಳ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿ ಹಿಂದುಳಿದ ಮತ್ತು ಅಭಿವೃದ್ಧಿ ಕುಂಠಿತವಾಗಿರುವ ಶಾಲೆಗಳನ್ನು ಗುರ್ತಿಸಿದ ಕೂಡಲೇ ಅವುಗಳನ್ನು ದತ್ತು ಪಡೆಯುವ ಮೂಲಕ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದಾರೆ.

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಗೋಕಾಕ್‌ ತಾಲ್ಲೂಕಿನಲ್ಲಿರುವ ಖನಗಾಂವ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ, ಮಮದಾಪೂರದ ಸರಕಾರಿ ಮಾದರಿ ಗಂಡು ಮಕ್ಕಳ ಶಾಲೆ, ಅಂಕಲಗಿಯ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಧುಪಧಾಳದ ಮತ್ತು ಸುಲಧಾಳ ಗ್ರಾಮದಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದುಕೊಂಡಿರುವ ಸಚಿವರು ಈ ಶಾಲೆಗಳ ಸಮಗ್ರ ಅಭಿವೃದ್ಧಿಗೆ ರೂಪು ರೇಷೆ ಸಿದ್ಧಪಡಿಸುವತ್ತ ಗಮನ ಹರಿಸಿದ್ದಾರೆ.

ಸರ್ಕಾರಿ ಶಾಲೆಗಳನ್ನು ರಾಜಕಾರಣಿಗಳು ದತ್ತು ಪಡೆದು ಮುನ್ನಡೆಸಲು ಅವಕಾಶ ಇರುವ ಬಗ್ಗೆ ತಿಳಿದೊಡನೆ ಶಿಕ್ಷಣ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿದ *ರಮೇಶ್ ಜಾರಕಿಹೊಳಿ* ಅವರು ಕೂಡಲೇ ಈ ಐದು ಶಾಲೆಗಳನ್ನು ದತ್ತು ಪಡೆದುಕೊಂಡು ಶಿಕ್ಷಣ ಇಲಾಖೆಯ ಪ್ರಮಾಣಪತ್ರವನ್ನು ಪಡೆದುಕೊಂಡಿದ್ದಾರೆ.

ಯೋಜನೆಯಡಿ ತಾವು ದತ್ತು ಪಡೆದುಕೊಂಡಿರುವ ಐದು ಶಾಲೆಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿರುವ ಸಚಿವರು, ಶಾಲೆಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆಗೆ ಅನುವಾಗುವಂತೆ ಅಗತ್ಯ ಇರುವೆಡೆ ಶಾಲಾ ಕಟ್ಟಡಗಳ ನವೀಕರಣಕ್ಕೆ ಚಿಂತನೆ ನಡೆಸಿದ್ದಾರೆ.
ಇನ್ನುಳಿದಂತೆ ಶಾಲಾ ಕ್ರೀಡಾಂಗಣ, ಕೈತೋಟ ಅಭಿವೃದ್ಧಿ ಮತ್ತು ಶಾಲಾ ಕಾಂಪೌಂಡ್ ಗೋಡೆ ನಿರ್ಮಾಣ, ಸಮರ್ಪಕ ಪೀಠೋಪಕರಣ, ಕಂಪ್ಯೂಟರ್ ಶಿಕ್ಷಣಕ್ಕೆ ಅನುವಾಗುವಂತಹ ಉಪಕರಣ ಮತ್ತು ಬೋಧನೆಗೆ ಸವಲತ್ತು ರೂಪಿಸುವ ಜತೆ ಜತೆಗೆ ಗ್ರಂಥಾಲಯ ಮತ್ತು ಲ್ಯಾಬೊರೇಟರಿಗಳನ್ನು ಅಸ್ತಿತ್ವಕ್ಕೆ ತರಲು ಕಾರ್ಯಕ್ರಮ ರೂಪಿಸುತ್ತಿದ್ದಾರೆ.

ಕ್ರೀಡಾ ಚಟುವಟಿಕೆಗಳ ಅಗತ್ಯ ಸಲಕರಣೆಗಳನ್ನು ಒದಗಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಕೌಶಲ್ಯ ಮತ್ತು ನಾಯಕತ್ವ ಗುಣಗಳನ್ನು ರೂಪಿಸುವ ಕಾರ್ಯಕ್ರಮಗಳು, ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ತರಬೇತಿ, ಶೈಕ್ಷಣಿಕ ಪ್ರವಾಸ ಏರ್ಪಾಡು, ಕ್ರೀಡಾಕೂಟಗಳ ಏರ್ಪಾಡಿಗೆ ಈ ಯೋಜನೆಯಡಿ ಅವಕಾಶವಿದ್ದು, ಬಡ, ಅಲ್ಪ ಸಂಖ್ಯಾತರ, ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮಕ್ಕಳನ್ನು ದತ್ತು ಪಡೆದು ಶಿಕ್ಷಣ ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

ಅಗತ್ಯ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಪೌಷ್ಠಿಕ ಮಧ್ಯಾಹ್ನದ ಊಟ ಒದಗಿಸುವುದು, ಬೇಸಿಗೆ ಸೇರಿದಂತೆ ವಿವಿಧ ಶಿಬಿರಗಳ ಏರ್ಪಾಡು ಮಾಡುವುದೂ ಸೇರಿದಂತೆ ಸ್ಕೌಟ್ಸ್- ಗೈಡ್ಸ್, ಸೇವಾದಳ, ಕಿರಿಯರ ರೆಡ್‌ಕ್ರಾಸ್, ಎನ್‌ಸಿಸಿ, ವಿಜ್ಞಾನ ಕ್ಲಬ್, ಪರಿಸರ ಜಾಗೃತಿ ಸೇರಿದಂತೆ ಪೋಷಕರ ಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಲು ಈ ದತ್ತು ಯೋಜನೆ ಅನುವಾಗುತ್ತದೆ.

ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕ್ಷೀಣಿಸುತ್ತಿರುವ ಮತ್ತು ಸರ್ಕಾರಕ್ಕೆ ಶಾಲೆಗಳನ್ನು ಅಭಿವೃದ್ಧಿಪಡಿಸಲು ದುಸ್ಥರವಾಗಿದ್ದು, ಮುಂದಿನ ಪ್ರಜೆಗಳಿಗೆ ಉತ್ತಮ ಶಿಕ್ಷಣ ನೀಡುವ ಮಹತ್ಕಾರ್ಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂಬುದನ್ನು ಮನಗಂಡಿರುವ ಸಚಿವ *ರಮೇಶ್ ಜಾರಕಿಹೊಳಿ* ಅವರು
ತಮ್ಮ ಕ್ಷೇತ್ರದ ಐದು ಶಾಲೆಗಳನ್ನು ಪಡೆದುಕೊಂಡು ಅಭಿವೃದ್ಧಿ ಪಡಿಸಲು ಮುಂದಾಗುವ ಮೂಲಕ ಇತರರಿಗೂ ಮಾದರಿಯಾಗಿ *’ಸಾಹುಕಾರ್’* ಎಂಬ ಅಭಿಮಾನಿಗಳ ಪ್ರೀತಿಯ ಕರೆಗೆ ಪ್ರತಿರೂಪವಾಗಿ ಹೊರಹೊಮ್ಮಿದ್ದಾರೆ.
——————————-

ಉತ್ತಮ ಶಿಕ್ಷಣದಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂಬುದರಲ್ಲಿ ನಂಬಿಕೆ ಹೊಂದಿರುವ ನಾನು, ಡಾ.ಬಿ.ಆರ್. ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ಸಾಗಿ ಬಂದಿದ್ದು, ಅವರ ಪ್ರಮುಖ ಆಶಯಗಳಲ್ಲಿ ಒಂದಾಗಿರುವ “ಸರ್ವರಿಗೂ ಶಿಕ್ಷಣ” ನೀಡಬೇಕೆಂಬ ಮಹದಾಸೆಯಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಈ ಶಾಲೆಗಳನ್ನು ಯಾವುದೇ ಹೈಟೆಕ್ ಶಾಲೆಗಿಂದ ಕಡಿಮೆ ಇಲ್ಲದಂತೆ ಮಾದರಿ ಶಾಲೆಗಳನ್ನಾಗಿ ರೂಪಿಸುವ ಕನಸು ಹೊಂದಿದ್ದೇನೆ.”
– *ರಮೇಶ್ ಜಾರಕಿಹೊಳಿ*
ಜಲಸಂಪನ್ಮೂಲ ಸಚಿವ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *