ಬೆಳಗಾವಿ – ಕತ್ತಿ ಸಾಹುಕಾರ್ಗೆ ಈಗ ಅಗ್ನಿ ಪರೀಕ್ಷೆಯಾದ್ರೆ ಇವರನ್ನು ಅಡ್ಜಸ್ಟ್ ಮಾಡುವದೇ ಬಿಜೆಪಿಗೆ ಸವಾಲಾಗಿದೆ.ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ರಮೇಶ್ ಕತ್ತಿಗೆ ಈ ಬಾರಿ ಟಿಕೆಟ್ ಕೊಡಲೇ ಬೇಕು ಎಂದು ದೆಹಲಿಯಲ್ಲಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದ್ದು,ಇಂದು ರಮೇಶ್ ಕತ್ತಿ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡಿಸಲು ರಾಜ್ಯದ ಕೆಲವು ಬಿಜೆಪಿ ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿದೆ ಎಂದು ಹೇಳಲಾಗುತ್ತಿದೆ.ಯಾಕಂದ್ರೆ ಬಿಜೆಪಿ ಮುಖಂಡ ಸಂತೋಷ್ ಜೀ ಅವರು ಅಣ್ಣಾಸಾಹೇಬ್ ಜೊಲ್ಲೆ ಅವರ ಬೆನ್ನಿಗೆ ನಿಂತಿರುವದರಿಂದ ಅಣ್ಣಾಸಾಹೇಬ್ ಚಿಕ್ಕೋಡಿಯಿಂದ ಫಿಕ್ಸ್ ಆಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.ಹೀಗಾಗಿ ರಮೇಶ್ ಕತ್ತಿಯವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಯತ್ನಗಳು ದೆಹಲಿಯಲ್ಲಿ ನಡೆಯುತ್ತಿವೆ. ಜೊತೆಗೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಸಹ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರ ಇದೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಎಲ್ಲ ಬಿಜೆಪಿ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.ಮಾಜಿ ವಿಧಾನಪರಿಷತ್ತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಲು ಜೋರ್ದಾರ್ ಪ್ರಯತ್ನ ನಡೆಸಿದ್ದಾರೆ.
ದೆಹಲಿಯಲ್ಲಿ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಚಾರದಲ್ಲಿ ಸರಣಿ ಸಭೆಗಳು ನಡೆಯುತ್ತಿವೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ದೆಹಲಿಗೆ ದೌಡಾಯಿಸಿದ್ದು ಬಿಜೆಪಿ ವರಿಷ್ಠರು ಜೆಡಿಎಸ್ ಪಕ್ಷಕ್ಕೆ ಯಾವ ಕ್ಷೇತ್ರಗಳನ್ನು ಬಿಟ್ಟು ಕೊಡಬೇಕು ಎನ್ನುವ ತೀರ್ಮಾಣವಾದ ಬಳಿಕ ಉಳಿದ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎನ್ನುವ ಮಾಹಿತಿ ಬಿಜೆಪಿ ಮೂಲಗಳಿಂದ ಲಭಿಸಿದೆ.
ಒಟ್ಟಾರೆ ಇಂದು ಸಂಜೆಯವರೆಗೆ ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾಗಲಿದ್ದು. ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರ ಒಂದು ಗುಂಪು ಬೇರೆ ಜಿಲ್ಲೆಯ ನಾಯಕರಿಗೆ ಬೆಳಗಾವಿಯಿಂದ ಅವಕಾಶ ಕೊಡುವದು ಬೇಡ,ಎನ್ನುವ ಸಂದೇಶವನ್ನು ಬಿಜೆಪಿ ವರಿಷ್ಠರಿಗೆ ರವಾನಿಸಿದ ಹಿನ್ನಲೆಯಲ್ಲಿ ಈ ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡುವದು ಬಿಜೆಪಿ ವರಿಷ್ಠರಿಗೆ ಕಗ್ಗಂಟಾಗಿದೆ.