Breaking News

ಅದ್ಭುತವಾದ ಪ್ರತಿಭೆಗೆ ಬೆರಗಾದೆ

ಸ್ನೇಹಿತರೆ, ಆತ್ಮೀಯರೆ,
ಸುದ್ದಿ, ವಾರ್ತೆ, ದೇಶದ ಸಮಸ್ಯೆಗಳ ಕುರಿತಾದ ಒಂದಿಷ್ಟು ಚರ್ಚೆಗಳನ್ನು ಹೆಚ್ಚಾಗಿ ಟಿವಿಯಲ್ಲಿ ವೀಕ್ಷಿಸುತ್ತ, ರಿಯಾಟಿಶೋಗಳ ಬಗ್ಗೆ ಬೈದುಕೊಳ್ಳುತ್ತ ಇರುವ ನಾನು ‘ಜಿ ಕನ್ನಡ’ ಚಾನಲ್ ಪ್ರಸಾರ ಮಾಡುತ್ತ ಬಂದ ರಿಯಾಟಿಶೋ ‘ಡ್ರಾಮಾ ಜ್ಯುನಿಯರ್’ ದಲ್ಲಿನ ಮಕ್ಕಳ ಅದ್ಭುತವಾದ ಪ್ರತಿಭೆಗೆ ಬೆರಗಾಗಿ ಆವಾಗ-ಈವಾಗ ಗಮನಿಸುತ್ತ ಬಂದಿದ್ದೆ. ಈ ಶೋನ ಅಂತಿಮ ಘಟ್ಟ ಗದಗದಲ್ಲಿ ಮುಕ್ತಾಯವಾದ ಬಗ್ಗೆ ಇಂದು (ರವಿವಾರ ಅಕ್ಟೋಬರ್ 9) ಈ ಚಾನಲ್ ಪ್ರಸಾರ ಮಾಡಿದ್ದು, ತಾವು ಗಮನಿಸರಬಹುದು. ಈ ಶೋ ನೋಡಿದ ನಾನು, ಬೇರೆ ಒಂದು ಲೇಖನ ಬರೆಯುವುದನ್ನು ಅರ್ಧದಲ್ಲಿಯೇ ಬಿಟ್ಟು, ಮಕ್ಕಳ ಪ್ರತಿಭೆ ದೃಷ್ಟಿಯಿಂದ, ನಾಟಕಗಳ ಸಂವೇದನೆಯ ಕಾರಣದಿಂದ, ಕನ್ನಡ ಕಲೆಯ ನೆಪದಿಂದ ಒಂದಿಷ್ಟು ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

ಐದು ವರ್ಷದ ಪುಟ್ಟಮಗುವಿನಿಂದ ಹಿಡಿದು ಹತ್ತುಹನ್ನೆರಡು ವರ್ಷದ ಮಕ್ಕಳು ಇದರಲ್ಲಿ ಭಾಗವಹಿಸಿದ್ದು ಮಾತ್ರವಲ್ಲ ಅದ್ಭುತವಾದ ಅಭಿನಯ ಪ್ರತಿಭಾ ಪ್ರದರ್ಶನ ನೀಡಿ ಕಲಾ ರಸಿಕರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಕನ್ನಡದಲ್ಲಿ ಬರುತ್ತಿರುವ ಸಿನಿಮಾಗಳು ಮತ್ತು ಹುಚ್ಚರಂತೆ ಕಾಣುವ ಸಿನಿಮಾ ನಟರ ಬಗ್ಗೆ ಹೇಸಿಗೆ ಅನ್ನಿಸಿ, ಕನ್ನಡದ ನಟನೆಗೆ ಇಂಥ ದುರ್ಗತಿ ಬಂತಲ್ಲ ಎಂದು ವ್ಯಥೆ ಪಡುತ್ತಿರುವಾಗ ಕನ್ನಡನಾಡಿನಲ್ಲಿ ಅದ್ಭುತ ಕಲಾವಿದರು ಇದ್ದಾರೆ ಮತ್ತು ಕಲೆಗಾಗಿಯೇ ಜನಿಸಿದ್ದಾರೆ ಎನ್ನುವುದಕ್ಕೆ ಡ್ರಾಮಾ ಜ್ಯೂನಿಯರ್‍ದಲ್ಲಿನ ಮಕ್ಕಳು ಸಾಕ್ಷಿ ಒದಗಿಸಿದ್ದಾರೆ.

ಭಾಗವಹಿಸಿದ ಪ್ರತಿಯೊಂದು ಮಗುವಿನ ಕಲೆಯೂ ಅದ್ಭುತ. ಅಂತಿಮಘಟ್ಟಕ್ಕೆ ಬಂದ ಎಂಟು ಜನರಲ್ಲಿ ಒಬ್ಬರಿಗಿಂತ ಒಬ್ಬರು ಪ್ರತಿಭಾಶಾಲಿಗಳು. ಕೊನೆಯಲ್ಲಿ ಜಯಶಾಲಿಯಾದ ಇಬ್ಬರು ಮಕ್ಕಳ ಕೊನೆಯ ಅಭಿನಯ ಹೇಳಲು ಕನ್ನಡ ಬಹಗಾರನಾದ ನನಗೆ ಅಕ್ಷರಗಳೇ ಸಾಲದು! ಮಂಗಳಮುಖಿಯ ಪಾತ್ರ ನಿರ್ವಹಿಸಿದ ಗದುಗಿನ ಹುಡುಗನ ಅಭಿನಯ ಏನುಹೇಳಿದರೂ ಕಡಿಮೆ. ಐದು ಜನ ಗಂಡಂದಿರನ್ನು ಪಡೆದೂ ಅವಮಾನ-ಅಪಮಾನದಿಂದ ಬೆಂದು ಜ್ವಾಲೆಯಾದ ಪಾಂಚಾಲಿಯ ಒಡಲೋಳಗಿನ ಬೆಂಕಿಯನ್ನು ಹೊರಹಾಕಿದ ಐದು ವರ್ಷದ ಮಗುವಿನ ಅಭಿನಯ ಧನ್ಯ. ನಿರ್ಣಾಯಕರಾಗಿ ಭಾಗವಹಿಸಿದ ಹಿರಿಯ ನಟಿ ಲಕ್ಷ್ಮಿ, ಮೇಗಾ ಧಾರವಾಹಿಗಳ ಹಿರೋ ಸಿಎಸ್‍ಪಿ. ತರುಣ ನಟ ರಾಘವೇಂದ್ರ ಮಕ್ಕಳೊಂದಿಗೆ ಮಕ್ಕಳಾಗಿ ಜೀವನದಲ್ಲಿ ಇಂಥ ಸುಂದರ ಘಳಿಗೆಗಳನ್ನು ಕಂಡಿಲ್ಲ ಎಂದು ಉದ್ಘಾರ ತೆಗೆದಿರುವುದರಲ್ಲಿ ಅತಿಶಯೋಕ್ತಿಯಲ್ಲ. ನಟ ಆನಂದನ ನಿರೂಪಣೆ, ಜಿ. ಕನ್ನಡದವರ ಸಾಹಸ ನಿಜಕ್ಕೂ ಮೆಚ್ಚಲೇ ಬೇಕಾದದ್ದು.

ಶೋದಲ್ಲಿ ಪ್ರದರ್ಶನಗೊಂಡ ನಾಟಕಗಳ ಕಥಾವಸ್ತು ಸಾಮಾಜಿಕ ಸಂವೇದನೆಯಿಂದ ಕೊಡಿದ್ದು, ಸಮಸ್ಯೆಗಳ ಮೇಲೆ ಬೆಳಕು ಚಲ್ಲಲಾಗಿತ್ತು. ಉತ್ತಮ ಸಂಭಾಷಣೆ ಪುಟ್ಟಮಕ್ಕಳ ಅಭಿನಯದ ವ್ಯಕ್ತಿತ್ವದ ಮೂಲಕ ಪ್ರದರ್ಶನಗೊಳ್ಳುವುದು ಬೆರಳು ಕಚ್ಚುವಂತಿತ್ತು. ಮಕ್ಕಳ ಈ ಜನಪರ ನಾಟಕಗಳನ್ನು ಅಷ್ಟೇ ಮುಗ್ಧವಾಗಿ ಗಮನಿಸಿದಾಗ ಅದರ ರಸದೌತನವೇ ಬೇರೆ. ಸಾಮಾಜಿಕ ಸಮಸ್ಯೆಗಳನ್ನು ಮುಂದು ಮಾಡಿ, ಐತಿಹಾಸಿಕ ಪುರುಷರನ್ನು ಸರಕನ್ನಾಗಿಸಿ ಇತ್ತೀಚೆಗೆ ಪ್ರದರ್ಶನಗೊಳ್ಳುತ್ತಿರುವ ಬುದ್ದಿವಂತರ ನಾಟಕಗಳನ್ನು ನೆನಸಿಕೊಂಡಾಗ ಶೋದಲ್ಲಿ ಪ್ರದರ್ಶನಗೊಂಡ ನಾಟಕಗಳ ಮುಂದೆ ಅವು ಜುಜಬಿ ಎನ್ನಿಸುವಂತಿತ್ತು. ಬುದ್ದಿವಂತರ ಜನಪರ ನಾಟಕಗಳ ಹಿಂದೆ ಪ್ರಚಾರ, ಹಣಗಳಿಕೆ, ಸ್ವಾರ್ಥ ಸಾಧನೆ, ಪ್ರಶಸ್ತಿ, ಸರಕಾರಿ ಆಶೆ ಆಕಾಂಕ್ಷೆಗಳು ಮುಖ್ಯ ಪಾತ್ರ ನಿರ್ವಹಣೆಯಾಗಿವೆ. ಜನಪರ ನಾಟಕ ಪ್ರದರ್ಶನಕ್ಕೆ ಸಾಮಾಜಿ ಕಾಳಜಿಯ ಮುಕ್ತಮನಸ್ಸು ಬೇಕು ಎನ್ನುವುದಕ್ಕೆ ಮಕ್ಕಳ ನಾಟಕಗಳು ನಿರ್ದೇಶನ ನೀಡಿವೆ. ಜನಪರ ನಾಟಕ ಮಾಡುವ ಅವಕಾಶವಾದಿಗಳು ಯು ಟ್ಯೂಬ್‍ನಲ್ಲಿ ಈ ನಾಟಕಗಳನ್ನು ನೋಡಿದರೆ ಅವರ ಜೀವನ ಸಾರ್ಥಕವಾಗುತ್ತದೆ. ಇಂಥ ನಾಟಕಗಳನ್ನು ಪ್ರದರ್ಶನ ನೀಡಿ, ಬಿಯರ್ ಬಾರ್ ಅಂಗಡಿಗಳಲ್ಲಿ ಬಾಟಲಿಗಳನ್ನು ಖಾಲಿ ಮಾಡುವವರು ಈ ಮಕ್ಕಳ ನಾಟಕ ನೋಡಿ ಒಂದಿಷ್ಟು ಸಂತೊಷ ಪಡುವುದು ಸೂಕ್ತ.
ಇಂಥ ಪ್ರತಿಭಾವಂತ ಮಕ್ಕಳನ್ನು ಬಳಸಿಕೊಂಡು ಕನ್ನಡದ ಕಲಾಶ್ರೀಮಂತಿಕೆಯನ್ನು ಹೆಚ್ಚಿಸಬೇಕಾದ ತುರ್ತು ಅಗತ್ಯವಿದೆ. ಸಮಕಾಲೀನ ಸಂಗತಿಗಳಿಗೆ ಮುಖಾಮುಖಿಗೊಳಿಸಿ ಈ ಮಕ್ಕಳನ್ನು ಬೆಳೆಸುವ ಒಳ್ಳೆಯ ಮನಸ್ಸಿನ ಹಿರಿಯ ಕಲಾವಿದರ, ಕಲಾ ಆರಾಧಕರ ಅವಶ್ಯಕತೆಯಿದೆ.

_ ಡಾ. ಕೆ. ಎನ್. ದೊಡ್ಡಮನಿ

Check Also

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳ ಪರಶೀಲನೆ

ಬೆಳಗಾವಿ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯು ಮಾನ್ಯ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.