ಬೆಳಗಾವಿ-ಜನೇವರಿ 12 ಮತ್ತು 13 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ ದಿನಾಂಕ ನಿಗದಿಯಾಗಿದೆ.ಮಹಾಪುರುಷನ ಉತ್ಸವಕ್ಕೆ ಕೇವಲ ಹತ್ತು ದಿನ ಬಾಕಿ ಉಳಿದರೂ ಸರ್ಕಾರ ಈವರೆಗೆ ಉತ್ಸವ ಆಚರಣೆಗೆ ನಯಾಪೈಸೆಯನ್ನೂ ಬಿಡುಗಡೆ ಮಾಡದೇ ಇರುವದು ದುರ್ದೈವದ ಸಂಗತಿಯಾಗಿದೆ.
ಸರ್ಕಾರ ಉತ್ತರ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯ ಮಾಡುತ್ತಿದೆ ಅನ್ನೋದಕ್ಕೆ ಇದೊಂದೇ ಸಾಕ್ಷಿ ಸಾಕು,ಬ್ರಿಟಿಷ್ ರ ವಿರುದ್ಧ ಹೋರಾಡಿ ಬ್ರಿಟೀಷರ ಕಚೇರಿಗಳ ಮೇಲೆ ದಾಳಿ ಮಾಡಿ ಬ್ರಿಟೀಷ್ ಅಧಿಕಾರಿಗಳ ನಿದ್ದೆಗೆಡಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವವನ್ನು ಎರಡು ದಿನಗಳ ಕಾಲ ರಾಯಣ್ಣನ ಹುಟ್ಟೂರು ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿ ಆಚರಣೆ ಮಾಡಲಾಗುತ್ತದೆ.ಈ ಉತ್ಸವ ಆಚರಣೆಗೆ ಸರ್ಕಾರ ದುಡ್ಡು ಬಿಡುಗಡೆ ಮಾಡದೇ ಇರುವದರಿಂದ ಅಧಿಕಾರಿಗಳು ಉತ್ಸವವನ್ನು ಜನೇವರಿ ಬದಲಾಗಿ ಫೆಬ್ರುವರಿ ತಿಂಗಳಲ್ಲಿ ಆಚರಿಸುವ ನಿರ್ಧಾರ ಮಾಡಲು ಮುಂದಾದಾಗ ಅದಕ್ಕೆ ಸಂಗೊಳ್ಳಿ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ಉತ್ಸವದ ಪೂರ್ವಭಾವಿ ಸಭೆಯಲ್ಲಿ ನಡೆದಿದೆ.
ರಾಯಣ್ಣನ ಉತ್ಸವಕ್ಕೆ ಕೇವಲ ಹತ್ತು ದಿನ ಮಾತ್ರ ಬಾಕಿ ಇದೆ,ಆದ್ರೆ ಇನ್ನುವರೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ.ಈ ರೀತಿಯ ಹೀನಾಯ ಪರಿಸ್ಥಿತಿ ಇರುವಾಗ ಅಧಿಕಾರಿಗಳು ಉತ್ಸವ ಆಚರಣೆಗೆ ಸಿದ್ಧತೆ ಮಾಡಿಕೊಳ್ಳುವದಾದರೂ ಹೇಗೆ ? ಎನ್ನುವ ಪ್ರಶ್ನೆ ಕಾಡುತ್ತಿದೆ.
ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳನ್ನು ನಿಗದಿ ಮಾಡಬೇಕು,ಆಮಂತ್ರಣ ಪತ್ರಿಕೆ ಮುದ್ರಿಸಬೇಕು,ಪೆಂಡಾಲ್ ಸೇರಿದಂತೆ ಇನ್ನುಳಿದ ತಯಾರಿ ಮಾಡಲು ದುಡ್ಡು ಬೇಕು,ಸರ್ಕಾರ ಕ್ರಾಂತಿವೀರನ ಉತ್ಸವಕ್ಕೆ ಈ ರೀತಿಯಲ್ಲಿ ನಿರ್ಲಕ್ಷ್ಯ ಮಾಡುವುದು ನ್ಯಾಯವೇ ಎನ್ನುವುದು ರಾಯಣ್ಣನ ಅಭಿಮಾನಿಗಳ ಪ್ರಶ್ನೆಯಾಗಿದೆ.
ಸರ್ಕಾರ ವೀರರಾಣಿ ಕಿತ್ತೂರು ಉತ್ಸವಕ್ಕೆ ಎರಡು ಕೋಟಿ ರೂ ಅನುದಾನ ನೀಡುತ್ತದೆ.ರಾಯಣ್ಣನ ಉತ್ಸವಕ್ಕೆ ಒಂದು ಕೋಟಿ ಅನುದಾನ ನೀಡುವಂತೆ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಹತ್ತು ಹಲವು ಬಾರಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ,
ಉತ್ತರ ಕರ್ನಾಟಕದ ಜನ ಇಂತಹ ವಿಚಾರಗಳಿಗೂ ಧರಣಿ ಪ್ರತಿಭಟನೆ ಮಾಡಬೇಕಾ ? ಉತ್ತರ ಕರ್ನಾಟಕದ ಉತ್ಸವಗಳಿಗೆ ಸರ್ಕಾರ ಈ ರೀತಿಯಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ರಸ್ತೆಗಿಳಿದು ಹೋರಾಟ ಮಾಡುವ ಸಮಯ ಸಂಧರ್ಭ ಈಗ ಎದುರಾಗಿದೆ.