Breaking News

ರೋಗ ಬಂದಿದೆ,ನಾಳೆಯಿಂದ ಇಂಜೆಕ್ಷನ್ ಮಾಡ್ತಾರೆ….!!

ಜಿಲ್ಲೆಯ ಜಾನುವಾರುಗಳಿಗೆ 3 ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಜ.5 ರಿಂದ 31 ರವರೆಗೆ

ಪಲ್ಸ್ ಪೋಲಿಯೋ ಮಾದರಿಯಲ್ಲಿ ಲಸಿಕಾ ಕಾರ್ಯಕ್ರಮ ಅನುಷ್ಠಾನಗೊಳಿಸಲು ಅಗತ್ಯ ಕ್ರಮ: ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್

ಬೆಳಗಾವಿ, -ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣದಡಿ ಜಿಲ್ಲೆಯಾದ್ಯಂತ ದಿನಾಂಕ: 05-01-2023 ರಿಂದ 31-01-2023ರವರೆಗೆ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ಪಲ್ಸ್ ಪೋಲಿಯೋ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ (ಜ.4) ನಡೆದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಮೂರನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿಯ ಪ್ರಕಾರ ಹಸು, ಎತ್ತು, ಎಮ್ಮೆ, ಕರುಗಳ ಒಟ್ಟು ಸಂಖ್ಯೆ 13,93,711 ಇದ್ದು, ಪ್ರತಿಯೊಂದು ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 964 ಲಸಿಕೆದಾರರನ್ನೊಳಗೊಂಡ 482 ಲಸಿಕಾ ತಂಡಗಳನ್ನು ರಚಿಸಲಾಗಿದೆ. ಆ ಲಸಿಕೆದಾರರು ದಿನಾಂಕ: 05-01-2023 ರಿಂದ 31-01-2023ರ ವರೆಗೆ 10641 ಬ್ಲಾಕ್‌ಗಳಲ್ಲಿ ಇರುವ 13 ಲಕ್ಷ ಜಾನುವಾರುಗಳಿಗೆ ಕಾಲು ಬಾಯಿ ರೋಗದ ವಿರುದ್ಧ ಲಸಿಕೆಯನ್ನು ಹಾಕಲಾಗುವುದೆಂದು ಡಾ: ರಾಜೀವ ಎನ್.‌ ಕೂಲೇರ, ಉಪ ನಿರ್ದೇಶಕರು(ಆಡಳಿತ) ಇವರು ಸಭೆಯಲ್ಲಿ ತಿಳಿಸಿದರು.

ಈಗಾಗಲೇ ಪ್ರತಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ತರಬೇತಿ ಹೊಂದಿರುವ ಪಶು ಸಖಿಯರನ್ನೂ ಸಹ ಈ ಲಸಿಕಾ ಅಭಿಯಾನದಲ್ಲಿ ಕಾರ್ಯಕ್ರಮದ ಕುರಿತು ಪ್ರಚುರ ಪಡಿಸಲು ಅವರ ಸೇವೆಯನ್ನು ಬಳಸಿಕೊಳ್ಳಲು ಸಹ ಮುಖ್ಯ ಕಾರ್ಯನಿರ್ವಾಹಕರ ಅಧಿಕಾರಿಗಳು ಉಪ ನಿರ್ದೇಶಕರು(ಆಡಳಿತ) ಇವರಿಗೆ ತಿಳಿಸಿದರು.

ಸದ್ಯಕ್ಜೆ ಜಿಲ್ಲೆಯಲ್ಲಿ 13,31,950 ಡೋಜ್‌ಗಳಷ್ಟು ಕಾಲು ಬಾಯಿ ಬೇನೆ ರೋಗದ ಲಸಿಕೆ ಲಭ್ಯವಿದ್ದು, ಸರಕಾರದ ಮಾರ್ಗಸೂಚಿ ಪ್ರಕಾರ ಒಬ್ಬ ಲಸಿಕದಾರ ಪ್ರತಿ ದಿನ ಒಂದು ಬ್ಲಾಕ್‌ ನಲ್ಲಿ 100 ರಿಂದ 120 ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆಯನ್ನು ನೀಡಲಾಗುವುದು ಎಂದು ತಿಳಿಸಿದರು.

ಪಲ್ಸ ಪೊಲಿಯೋ ಮಾದರಿಯಲ್ಲಿ ಲಸಿಕಾ ಅಭಿಯಾನ ಯಶಸ್ಸಿಗೆ ಸೂಚನೆ:

ರಾಷ್ಟ್ರದಾದ್ಯಂತ ನಡೆಯುವ ಪಲ್ಸ ಪೊಲೀಯೋ ಲಸಿಕಾ ಅಭಿಯಾನದ ಮಾದರಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಕಾಲುಬಾಯಿ ರೋಗ ಲಸಿಕಾ ಅಭಿಯಾನವನ್ನು ನಡೆಸಲಾಗುವುದು ಅದಕ್ಕೆ ಎಲ್ಲಾ ರೈತ ಬಾಂಧವರು ಸಹಕರಿಸಬೇಕೆಂದು ದರ್ಶನ್ ಅವರು ತಿಳಿಸಿದರು.

ನಿಗದಿತ ಗುರಿಯಂತೆ 13 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಲಸಿಕೆ ಮತ್ತಿತರ ಸಲಕರಣೆಗಳನ್ನು ಶೀಥಲೀಕರಣ ಯಂತ್ರದಲ್ಲಿ ಸಂರಕ್ಷಿಸಿ ಪ್ರತಿ ದಿನ ಅಗತ್ಯ ಇರುವ ಲಸಿಕೆಯನ್ನು ವ್ಯಾಕ್ಸಿನ್‌ ಕ್ಯಾರಿಯರ್‌ ಬಳಸಿ ಲಸಿಕೆ ಮಾಡಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಲ್ಸ್ ಪೊಲಿಯೋ ಮಾದರಿಯಲ್ಲಿ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಪಶುವೈದ್ಯರ ನೇತೃತ್ವದ ತಂಡಗಳು ಅಭಿಯಾನದ ಯಶಸ್ಸಿಗೆ ಪ್ರಯತ್ನಿಸಬೇಕು ಎಂದರು.

ಜಾನುವಾರುಗಳಿಗೆ ಟ್ಯಾಗ್ ಅಳವಡಿಕೆ:

ಲಸಿಕಾ ಅಭಿಯಾನದ ಸಿದ್ಧತೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕರಾದ ಡಾ.ರಾಜೀವ್ ಎನ್.ಕೂಲೇರ್ ಅವರು, ಪ್ರತಿ ಜಾನುವಾರುಗಳ ಕಿವಿಗಳಿಗೆ ಟ್ಯಾಗ್ ಅಳವಡಿಸಲಾಗುವ ಮೂಲಕ ಲಸಿಕಾ‌ ಪ್ರಗತಿಯನ್ನು ಇನಾಫ್‌ ಪೋರ್ಟಲ್ ನಲ್ಲಿ ಪ್ರತಿ ದಿನ ನಮೂದಿಸಲಾಗುತ್ತದೆ ಎಂದು ವಿವರಿಸಿದರು.

ವರ್ಷದಲ್ಲಿ ಎರಡು ಬಾರಿ ಲಸಿಕಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಮ್ಮೆ, ಹಸು ಸೇರಿದಂತೆ 13 ಲಕ್ಷಕ್ಕೂ ಅಧಿಕ ಜಾನುವಾರುಗಳಿದ್ದು, ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ವಿವರಿಸಿದರು.
ಪ್ರತಿದಿನ ಕನಿಷ್ಠ 70 ಸಾವಿರ ಲಸಿಕಾ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 13.41 ಲಕ್ಷ ಲಸಿಕೆಗಳು ಲಭ್ಯವಿರುತ್ತವೆ. ಕಳೆದ ಬಾರಿ ಶೇ.87ಕ್ಕೂ ಅಧಿಕ ಗುರಿಸಾಧನೆ ಮಾಡಲಾಗಿತ್ತು ಎಂದು ಹೇಳಿದರು.

ಲಸಿಕೆ ಸಂಗ್ರಹಣೆ ಹಾಗೂ ಸಾಗಾಣಿಕೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಪಶುವೈದ್ಯರ ನೇತೃತ್ವದಲ್ಲಿ ತಂಡಗಳನ್ನು ಸಜ್ಜುಗೊಳಿಸಲಾಗಿದೆ. ಇದಲ್ಲದೇ ಪ್ರತಿಕೂಲ ಪರಿಣಾಮ ಎದುರಿಸಲು ಅಗತ್ಯವಿರುವ ತುರ್ತು ಔಷಧಿಗಳನ್ನು ಕೂಡ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ಚರ್ಮಗಂಟು ರೋಗ ಬಾಧೆಯಿಂದ ಜಾನುವಾರುಗಳ ರಕ್ಷಣೆಗೆ 1297000 ಮೇಕೆ ಸಿಡುಬು ಲಸಿಕೆ ನೀಡುವ ಮೂಲಕ ರೋಗವನ್ನು ನಿಯಂತ್ರಿಸಲಾಗುತ್ತಿದೆ ಎಂದು ಡಾ.ರಾಜೀವ್ ಎನ್.‌ ಕೂಲೇರ್ ತಿಳಿಸಿದರು. ಒಮ್ಮೆ ಲಸಿಕೆ ನೀಡಿದ ಬಳಿಕ ಮತ್ತೇ ರೋಗ ಕಂಡುಬಂದರೂ ಜಾನುವಾರುಗಳ ಮರಣ ಪ್ರಮಾಣ ಕಡಿಮೆ ಇರುತ್ತದೆ ಎಂದು ತಿಳಿಸಿದರು.

ಜನವರಿ 5 ರಿಂದ 31 ರವರೆಗೆ ನಡೆಯಲಿರುವ ಮೂರನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕೆಯನ್ನು ಜಾನುವಾರುಗಳಿಗೆ ಹಾಕಿಸಲು ಎಲ್ಲ ರೈತ ಬಾಂಧವರು ಸಹಕರಿಸಬೇಕು ಎಂದು ಅವರು ಮನವಿ‌ ಮಾಡಿಕೊಂಡರು.

ಪ್ರಚಾರ ಸಾಮಗ್ರಿ ಬಿಡುಗಡೆ:

ಮೂರನೇ ಸುತ್ತಿನ ಕಾಲುಬಾಯಿ ರೋಗ ನಿಯಂತ್ರಣ ಲಸಿಕಾ ಅಭಿಯಾನ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್, ಕರಪತ್ರ ಮತ್ತಿತರ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಅವರು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರಾಜೀವ್ ಎನ್.‌ ಕೂಲೇರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಪ್ರತಿನಿಧಿಗಳು, ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಪಶುಪಾಲನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಕೆ.ಎಂ.ಎಫ್. ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
***

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.