Breaking News

ಕ್ರಾಂತಿವೀರನ ಉತ್ಸವಕ್ಕೆ ಕೋಟಿ ಕೊಡ್ತಾರೆ.ಸಿಎಂ ಬರ್ತಾರೆ…!!

ಜ.17, 18 ರಂದು ಸಂಗೊಳ್ಳಿ ಉತ್ಸವ: ಶಾಸಕ ಮಹಾಂತೇಶ ಕೌಜಲಗಿ

ಬೆಳಗಾವಿ,-ಈ ಬಾರಿ ಸಂಗೊಳ್ಳಿ ಉತ್ಸವವನ್ನು ಜ.17 ಹಾಗೂ 18 ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು.

ಸಂಗೊಳ್ಳಿ ರಾಯಣ್ಣ ಸ್ಮಾರಕ ಕಲ್ಯಾಣ ಮಂಟಪದಲ್ಲಿ ಮಂಗಳವಾರ(ಜ.2) ನಡೆದ ಸಂಗೊಳ್ಳಿ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಬಾರಿಯ ಉತ್ಸವಕ್ಕೆ ಸರಕಾರ ಒಂದು ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ.
ಉತ್ಸವದ ಸಂದರ್ಭದಲ್ಲಿ ರಾಕ್ ಗಾರ್ಡನ್, ರಸ್ತೆ ಸೇತುವೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೂಡ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಗೊಳ್ಳಿ ಸೈನಿಕ ಶಾಲೆ, ರಾಕ್ ಗಾರ್ಡನ್ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿರುತ್ತಾರೆ. ಉತ್ಸವದಲ್ಲಿ ಅವರು ಭಾಗವಹಿಸಲಿದ್ದಾರೆ. ಆದ್ದರಿಂದ ಈ‌ ಬಾರಿ ಅಚ್ಚುಕಟ್ಟಾಗಿ ಉತ್ಸವ ಆಚರಿಸಲು ಎಲ್ಲರೂ ಸಹಕರಿಸಬೇಕು ಎಂದು ಮಹಾಂತೇಶ ಕೌಜಲಗಿ ಹೇಳಿದರು.

ಅದ್ಧೂರಿ ಉತ್ಸವ ಆಚರಣೆ-ಜಿಲ್ಲಾಧಿಕಾರಿ ನಿತೇಶ್ ಪಾಟೀಲ:

ಬೈಲಹೊಂಗಲ ಶಾಸಕರಾದ ಮಹಾಂತೇಶ ಕೌಜಲಗಿ ಅವರ ಪ್ರಯತ್ನದ ಫಲವಾಗಿ ಈ ಬಾರಿ ಒಂದು ಕೋಟಿ ರೂಪಾಯಿ ಅನುದಾನ ಲಭಿಸಿದೆ. ಇದರಿಂದ ಹೊಸ ಹೊಸ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ಪ್ರತಿವರ್ಷದಂತೆ ಅದ್ಧೂರಿಯಾಗಿ ಮತ್ತು ಅಚ್ಚುಕಟ್ಟಾಗಿ ಉತ್ಸವವನ್ನು ಆಚರಿಸಲಾಗುವುದು.ಉತ್ಸವದ ಯಶಸ್ಸಿಗಾಗಿ ಒಟ್ಟಾರೆ 13 ಉಪ ಸಮಿತಿಗಳನ್ನು ರಚಿಸಲಾಗುವುದು. ಸಮಿತಿಯಲ್ಲಿ ಹೆಸರು ನೋಂದಾಯಿಸಲು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಸಾನಿಧ್ಯ ವಹಿಸಿ ಮಾತನಾಡಿದ ಗುರುಲಿಂಗ ಶಿವಾಚಾರ್ಯ, ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರು ಬಾಳಪ್ಪ ಸೇರಿದಂತೆ ಎಲ್ಲರೂ ಜಾತ್ಯಾತೀತವಾಗಿ ಗುರುತಿಸಲ್ಪಡುವಂತವರು. ಈ ಬಾರಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿರುವುದು ಸಂತಸಕರ ಸಂಗತಿ ಎಂದರು.

ಮುಂಬರುವ ವರ್ಷಗಳಲ್ಲಿ ಜನವರಿ 12 ಹಾಗೂ 13 ರಂದೇ ನಿಯಮಿತವಾಗಿ ಸಂಗೊಳ್ಳಿ ಉತ್ಸವವನ್ನು ಆಚರಿಸಬೇಕು ಎಂದು ಸಲಹೆ ನೀಡಿದರು.
ಉತ್ಸವದ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣನ ಕುರಿತು ಏರ್ಪಡಿಸಲಾಗುವ ವಿಚಾರಸಂಕಿರಣದಲ್ಲಿ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಿವಾಚಾರ್ಯರು ಕರೆ ನೀಡಿದರು.

ಮುಖ್ಯಮಂತ್ರಿಗಳಿಗೆ ಉತ್ಸವದಲ್ಲಿ ಪೌರಸನ್ಮಾನ ನೀಡಬೇಕು; ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಬೇಕು; ಉತ್ತಮ ಕಲಾತಂಡಗಳನ್ನು ಆಹ್ವಾನಿಸಬೇಕು ಹಾಗೂ ಕುಸ್ತಿ ಸ್ಪರ್ಧೆ ಆಯೋಜಿಸಬೇಕು ಎಂದು ಸಾರ್ವಜನಿಕರು ಸಲಹೆಗಳನ್ನು ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ಸಂಗೊಳ್ಳಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮಲ್ಲೇಶ ಹೊರಪೇಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ‌ ನಿರ್ದೇಶಕರಾದ ಶ್ರೀಶೈಲ್ ಕಂಕಣವಾಡಿ, ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸತ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.
***

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *