ಬೆಳಗಾವಿ: ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯೆಯರನ್ನು ಹೋಟೆಲ್ ಉದ್ದಿಮೆಯಲ್ಲಿ ತೊಡಗಿಸಿ, ಅವರ ಸ್ವಾವಲಂಬಿ ಜೀವನಕ್ಕೆ ನೆರವಾಗುವ ಉದ್ದೇಶದಿಂದ ರಾಷ್ಟ್ರೀಯ ಜೀವನೋಪಾಯ ಮಿಷನ್ ಇಲ್ಲಿನ ಜಿಪಂ ಕಚೇರಿಯಲ್ಲಿ ಆರಂಭಿಸಿದ ‘ಅಕ್ಕ ಕೆಫೆ’ ಗೆ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ತಿಂಡಿಯನ್ನು ಸವಿದು ಪರಿಶೀಲಿಸಿದರು.
ಇದೇ ವೇಳೆ ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆ ಅಡಿ ಸ್ಥಾಪಿಸಿದ ಅಕ್ಕ ಕಫೆ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಸಿಂಧೆ ಅವರು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮಾಹಿತಿ ನೀಡಿದರು.
ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆ ಅಡಿ ಸ್ಥಾಪಿಸಿದ ಅಕ್ಕ ಕಫೆ ಯಶಸ್ಸು ಕಂಡಿದ್ದು, ಬೆಳಗಾವಿಯ ಭೂತರಾಮನಹಟ್ಟಿಯಲ್ಲಿರುವ ರಾಣಿ ಚೆನ್ನಮ್ಮ ಮೃಗಾಲಯದಲ್ಲೂ ಅಕ್ಕ ಕಫೆ ಸ್ಥಾಪಿಸುವ ಯೋಜನೆ ರೂಪಿಸಲಾಗಿದ್ದು, ಈ ಯೋಜನೆ ಜಾರಿಗೆ ಅನುವು ಮಾಡಿಕೊಡಬೇಕೆಂದು ಸಚಿವರಿಗೆ ಜಿಪಂ ಸಿಇಒ ರಾಹುಲ್ ಸಿಂಧೆ ಅವರು ಮನವಿ ಮಾಡಿದರು.
ಬೆಂಗಳೂರಿನ ಗಾಂಧಿ ನಗರದ ಪಂಚಾಯತರಾಜ್ ಆಯುಕ್ತಾಲಯದ ಆವಣರದಲ್ಲಿ 2024ರ ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆಯ ದಿನ ಮೊದಲ ‘ಅಕ್ಕ ಕೆಫೆ’ಗೆ ಚಾಲನೆ ನೀಡಲಾಗಿತ್ತು. ಕರ್ನಾಟಕ ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ ರಾಜ್ಯದಾದ್ಯಂತ 50ಕ್ಕೂ ಹೆಚ್ಚು ‘ಅಕ್ಕ ಕೆಫೆ’ಗಳನ್ನು ಪ್ರಾರಂಭಿಸುವ ಯೋಜನೆ ರೂಪಿಸಿದೆ. ಇಲ್ಲಿ ಬಡವರು, ಕೂಲಿಕಾರ್ಮಿಕರು, ಉದ್ಯೋಗ ಅರಸಿ ದೂರದಿಂದ ಬರುವವರು, ವಿದ್ಯಾರ್ಥಿಗಳು ಸೇರಿದಂತೆ ಶ್ರಮಿಕ ವರ್ಗ ಸೇರಿದಂತೆ ಎಲ್ಲರಿಗೂ ಕಡಿಮೆ ದರದಲ್ಲಿ ಉತ್ತಮ ತಿಂಡಿ ಮತ್ತು ಊಟ ನೀಡಲಾಗುತ್ತಿದೆ. ಈ ಕೆಫೆಗಳನ್ನು ಮಹಿಳೆಯರೇ ಸಂಪೂರ್ಣವಾಗಿ ನಿರ್ವಹಿಸುವುದು ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಶಾಸಕ ಆಸೀಪ್ ( ರಾಜು) ಸೇಠ್, ಜಿಪಂ ಸಿಇಒ ರಾಹುಲ್ ಸಿಂಧೆ, ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪ, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು .