Breaking News

ಹೊಸ ಜಾತಿ‌ ಸೇರ್ಪಡೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿ- ಶಾಸಕ ಸತೀಶ ಜಾರಕಿಹೊಳಿ ಒತ್ತಾಯ

ಹೊಸ ಜಾತಿ‌ ಸೇರ್ಪಡೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಿ- ಶಾಸಕ ಸತೀಶ ಜಾರಕಿಹೊಳಿ ಒತ್ತಾಯ
——————————————————————
ಮೀಸಲಾತಿ ಮಾನವಹಕ್ಕು- ನ್ಯಾಯಮೂರ್ತಿ ನಾಗಮೋಹನ್ ದಾಸ್

ಬೆಳಗಾವಿ, –ಮೀಸಲಾತಿ ಸಂವಿಧಾನದ ಹಕ್ಕು ಮಾತ್ರವಲ್ಲ; ಮಾನವ ಹಕ್ಕು ಕೂಡ ಹೌದು. ಮೀಸಲಾತಿ ಒದಗಿಸಿದರೆ ಸಾಲದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಕೆಲಸವಾಗಬೇಕಿದೆ ಎಂದು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್‌ ಅಭಿಪ್ರಾಯಪಟ್ಟರು.

ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಹೆಚ್ಚಿಸುವ ಕುರಿತು ಕುಮಾರ ಗಂಧರ್ವ ರಂಗಮಂದಿರದಲ್ಲಿ ಶುಕ್ರವಾರ (ಜ.೧೦) ನಡೆದ ಬೆಳಗಾವಿ ವಿಭಾಗ ಮಟ್ಟದ ಅಹವಾಲು ಸ್ವೀಕೃತಿ ಮತ್ತು ಸಮಾಲೋಚನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಲಕ್ಷಾಂತರ ಉದ್ಯೋಗ‌ ಖಾಲಿ ಇದ್ದರೆ ಮೀಸಲಾತಿ ಜಾರಿ ಸಾಧ್ಯವೇ ಎಂದು ಪ್ರಶ್ನಿಸಿದರು. ಸರ್ಕಾರದ ಸಂಸ್ಥೆಗಳಲ್ಲಿ ಬಂಡವಾಳ ಹಿಂದಕ್ಕೆ ಪಡೆಯುತ್ತಿರುವಗ ಮೀಸಲಾತಿ ಅನುಷ್ಠಾನ ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಪ್ರಶ್ನಿಸಿದರು.

ಮೀಸಲಾತಿ ಬಗ್ಗೆ ಯುವ ಸಮುದಾಯದಲ್ಲಿ ವಿರೋಧಭಾವ ವ್ಯಕ್ತವಾಗುತ್ತಿದೆ. ಹತ್ತು ವರ್ಷ ಮೀಸಲಾತಿ ನೀಡಬೇಕು ಎಂದು‌ ಅಂಬೇಡ್ಕರ್ ಹೇಳಿದ್ದರೂ ಈಗಲೂ ಮೀಸಲಾತಿ ಏಕೆ? ನೇಮಕಾತಿ ಗೆ ನೀಡುವ ಮೀಸಲಾತಿ ಬಡ್ತಿಗೆ ಏಕೆ ಎಂದು ಪ್ರಶ್ನಿಸುತ್ತಾರೆ.
ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಈಗಲೂ ಮೀಸಲಾತಿಯ ಅಗತ್ಯತೆ ಬಗ್ಗೆ ಮೀಸಲಾತಿ ವಿರೋಧಿ ಯುವ ಸಮುದಾಯಕ್ಕೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಮೀಸಲಾತಿಯ ಅಗತ್ಯತೆ ಮತ್ತು ಅನಿವಾರ್ಯತೆ ಬಗ್ಗೆ ಮನದಟ್ಟು ಮಾಡುವ ಕೆಲಸವನ್ನು ಸಂಘಟನೆಗಳು ಕೆಲಸ ಮಾಡಬೇಕಿದೆ.
ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಹೆಚ್ಚಿನ ಚರ್ಚೆ, ಸಮಾಲೋಚನೆ ನಡೆಸಲು ಆಯೋಗ ಮುಕ್ತ ಅವಕಾಶ ನೀಡಲಿದೆ.
ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಲು ಸಾಧ್ಯವಾಗದವರು ಬೆಂಗಳೂರಿನ ಆಯೋಗದ ಕಚೇರಿಗೆ ಬಂದು ತಮ್ಮ ಅಹವಾಲು ಸಲ್ಲಿಕೆಗೂ ಅವಕಾಶ ನೀಡಲಾಗುವುದು ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ತಿಳಿಸಿದರು.

ದೇಶದಲ್ಲಿ ಅನೇಕ ಜಾತಿ ಧರ್ಮಗಳಿವೆ. ಭಾರತದಲ್ಲಿ ಒಟ್ಟು ೪೬೩೫ ಜಾತಿ-ಉಪ ಜಾತಿಗಳಿವೆ. ಜಾತಿ ಜಾತಿ ನಡುವೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಅಸಮತೋಲನಗಳಿವೆ.
ಇದರಿಂದ ಕೆಲವರಿಗೆ ಅತೀ ಅನುಕೂಲವಾದರೆ ಕೆಲ ಸಮುದಾಯದವರಿಗೆ ಭಾರೀ ಅನ್ಯಾಯವಾಗುತ್ತಿದೆ. ಇಂತಹ‌ ಅಸಮಾನತೆ ವಿರುದ್ದ ಬುದ್ಧ, ಬಸವಣ್ಣ ಹಾಗೂ ಗಾಂಧೀಜಿಯವರ ನೇತೃತ್ವದಲ್ಲಿ ಹೋರಾಟಗಳು ನಡೆದಿವೆ.

ಸಾಮಾಜಿಕ ಅನ್ಯಾಯಕ್ಕೆ ಒಳಗಾದವರಿಗೆ ಸಾಂವಿಧಾನಿಕ ಹಕ್ಕು ನೀಡಿದ ಮಹಾನ್ ವ್ಯಕ್ತಿ ಡಾ.ಅಂಬೇಡ್ಕರ್ ಅವರು. ಸಂವಿಧಾನ ಜಾರಿಯಾದ ೭೦ ವರ್ಷಗಳಲ್ಲಿ ಕೆಲವು ಜನರಿಗೆ ಅನುಕೂಲವಾಗಿದೆ ಎಂದು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಹೇಳಿದರು.

ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್, ಆದಿಕವಿ ಮಹರ್ಷಿ ವಾಲ್ಮೀಕಿ ಹಾಗೂ ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹೊಸ ಜಾತಿ ಸೇರ್ಪಡೆಗೆ ತಕ್ಕಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಲಿ:

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಪಟ್ಟಿಗೆ ಯಾವುದೇ ಹೊಸ ಜಾತಿ ಸೇರ್ಪಡೆ ಮಾಡಿದರೆ ಅದೇ ಪ್ರಮಾಣದ ಮೀಸಲಾತಿ ಪ್ರಮಾಣ ಹೆಚ್ಚಳವಾಗಬೇಕು ಎಂದು ಶಾಸಕ ಸತೀಶ್ ಜಾರಕಿಹೊಳಿ ಒತ್ತಾಯಿಸಿದರು.

ಬೇರೆ ಬೇರೆ ಜಾತಿಗಳನ್ನು ಸೇರ್ಪಡೆಗೊಳಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಈಗಾಗಲೇ ಪಟ್ಟಿಯಲ್ಲಿರುವ ಜಾತಿ ಸಮುದಾಯಗಳಿಗೆ ಅನ್ಯಾಯವಾಗುತ್ತದೆ.
ರಾಜಕೀಯ ಕಾರಣಗಳಿಗೆ ಬೇರೆ ಬೇರೆ ಜಾತಿಗಳನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸದಿದ್ದರೆ ಪರಿಶಿಷ್ಟರು ಬರೀ ಮೀಸಲಾತಿ ಪ್ರಮಾಣ ಹೆಚ್ಚಳ ಹೋರಾಟದಲ್ಲೇ ಕಾಲ ಕಳೆಯುವಂತಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.
ಪರಿಶಿಷ್ಟ ವರ್ಗದ ಜನರು ಈಗಾಗಲೇ ಹೆಚ್ಚುವರಿ ಮೀಸಲಾತಿ ಪ್ರಮಾಣದಿಂದ ವಂಚಿತರಾಗಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದು ಎಲ್ಲರ ಬೇಡಿಕೆಯಾಗಿದೆ. ನಾಗಮೋಹನ್ ದಾಸ್ ಆಯೋಗವು ಸರ್ಕಾರಕ್ಕೆ ಬೇಗನೇ ವರದಿ ಸಲ್ಲಿಸಬೇಕು ಸತೀಶ್ ಜಾರಕಿಹೊಳಿ ಮನವಿ ಮಾಡಿಕೊಂಡರು

ಮೀಸಲಾತಿ ಹೆಚ್ಚಳಕ್ಕೆ ಮೊದಲ ಆಯೋಗ:

ಆಯೋಗದ ಸದಸ್ಯರಾದ ಅನಂತ ನಾಯಕ ಮಾತನಾಡಿ, ಪರಿಶಿಷ್ಟ ಜಾತಿ/ಪಂಗಡಗಳ ಜನಸಂಖ್ಯೆ ಆಧರಿಸಿ ಮೀಸಲಾತಿ ಪ್ರಮಾಣ ಹೆಚ್ಚಿಸುವ ಕುರಿತು ಸರ್ಕಾರ ಆಯೋಗ ರಚಿಸಿದೆ ಎಂದರು.

ಸಾಮಾಜಿಕ ನ್ಯಾಯ ಬಲಪಡಿಸಲು ಸಂವಿಧಾನದ ಮೂಲಕ ಮೀಸಲಾತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನಾಡಿನ ಚಿಂತಕರು, ಸಾಹಿತಿಗಳು ಹಾಗೂ ಸಂಘಟಕರು ಈಗಾಗಲೇ ೪೧೨ ಅಹವಾಲುಗಳು ಆಯೋಗಕ್ಕೆ ಸಲ್ಲಿಕೆಯಾಗಿವೆ.

ದಲಿತ ಸಂಘಟನೆಗಳು ಹಾಗೂ ಕಾನೂನು ತಜ್ಞರು ಸೇರಿದಂತೆ ‌ವಿವಿಧ ಜತೆ ಈಗಾಗಲೇ ೩೩ ಸಮಾಲೋಚನಾ ಸಭೆಗಳನ್ನು ನಡೆಸಲಾಗಿದೆ.
ಗುಲ್ಬರ್ಗ ವಿಭಾಗದ ಸಭೆಯಲ್ಲಿ ೫೪ ಮೌಖಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ವಿವರಿಸಿದರು.

ಮೀಸಲಾತಿ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಇಡೀ ದೇಶದಲ್ಲಿಯೇ ಕರ್ನಾಟಕ ಸರ್ಕಾರ ಮೊಟ್ಟ ಮೊದಲ ಬಾರಿ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಆಯೋಗವನ್ನು ರಚಿಸಿರುವುದು ಎಲ್ಲರೂ ಹೆಮ್ಮೆಪಡುವ ವಿಷಯವಾಗಿದೆ ಎಂದು ಅನಂತ ನಾಯಕ ಅಭಿಪ್ರಾಯಪಟ್ಟರು.

ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಜಾತಿಗಳ ಸಂಖ್ಯೆ ಏರುತ್ತಲೇ ಸಾಗಿದ್ದು, ಇದೀಗ ಐವತ್ತಕ್ಕೂ ಅಧಿಕ ಜಾತಿಗಳು ಸೇರ್ಪಡೆಯಾಗಿವೆ.
ಆಯೋಗದ ವರದಿ ಆಧರಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದರು.
ಜೂನ್ ಮಾಹೆವರೆಗೆ ಆಯೋಗದ ಅವಧಿ ಇರುವುದರುಂದ ಸಮಾಲೋಚನಾ ಸಭೆಯ ಬಳಿಕವೂ ಜನರು ಬೆಂಗಳೂರಿನಲ್ಲಿ ಇರುವ ಆಯೋಗದ ಕಚೇರಿಗೂ ತಮ್ಮ ಅಹವಾಲು ಸಲ್ಲಿಸಬಹುದು ಎಂದು ಅನಂತ ನಾಯಕ ತಿಳಿಸಿದರು.

ಹೊಸ ಜಾತಿ ಸೇರ್ಪಡೆ ಬೇಡ:

ಸಭೆಯಲ್ಲಿ ಅಭಿಪ್ರಾಯ ಮಂಡಿಸಿದ ಹಾವೇರಿ ಜಿಲ್ಲೆಯ ಮಾಲತೇಶ ಅಂಗೂರ ಅವರು, ಹಾವೇರಿ ಜಿಲ್ಲೆಯಲ್ಲಿ ೧.೪೧ ಲಕ್ಷ ವಾಲ್ಮೀಕಿ ನಾಯಕ ಸಮಾಜದ ಜನಸಂಖ್ಯೆಯಿದೆ. ಜನಾಂಗದ ಯುವಕರು‌ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಮೀಸಲಾತಿ ಪ್ರಮಾಣ ಕೇವಲ ಶೇ.೩ ರಷ್ಟು ಇರುವುದರಿಂದ ಪದವೀಧರರಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗುತ್ತಿಲ್ಲ.
ಜನಸಂಖ್ಯೆ ಆಧರಿಸಿ ಶಿಕ್ಷಣದಲ್ಲಿ ಶೇ.೧೦ ಮೀಸಲಾತಿ ನೀಡುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಬಾಗಲಕೋಟೆಯ ಮಾದಿಗ ಮಹಾಸಭಾದ ಮುತ್ತಣ್ಣ ಬೆಣ್ಣೂರ ಮಾತನಾಡಿ, ಈಗಿರುವ ಶೇ.೧೮ ಮೀಸಲಾತಿಯೇ ಸಮರ್ಪಕವಾಗಿ ಜಾರಿಯಾಗಿಲ್ಲ. ಆದ್ದರಿಂದ ೧೦೧ ಜಾತಿಗಳಿಗೂ ಮೀಸಲಾತಿ ಸೌಲಭ್ಯ ಲಭಿಸುವಂತೆ ಆಯೋಗ ಶಿಫಾರಸ್ಸು ಮಾಡಬೇಕು.
ಮುಂಬರುವ ದಿನಗಳಲ್ಲಿ ರಾಜಕೀಯ ಕಾರಣಕ್ಕೆ ಇತರ ಯಾವುದೇ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ ಮಾಡಬಾರದು ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.

ವಿಜಯಪುರ ಜಿಲ್ಲೆಯ ಅಶೋಕ ಚಲವಾದಿ ಮಾತನಾಡಿ, ಅಸ್ಪೃಶ್ಯರಿಗೆ ಸರ್ಕಾರದ ಸೌಲಭ್ಯಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಮೀಸಲಾತಿ ಪ್ರಮಾಣವನ್ನು ೨೦ ರಿಂದ ೨೫ ರವರೆಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಲ್ಲಿ ಒಟ್ಟು ೧೫೬ ಜಾತಿಗಳ ಜನರಿದ್ದರೂ ಕೇವಲ ಶೇ.೧೮ ಮೀಸಲಾತಿ ಸಾಕಾಗುವುದಿಲ್ಲ. ಆದ್ದರಿಂದ ಹೆಚ್ಚಿನ ಮೀಸಲಾತಿ ಅಗತ್ಯವಿದೆ ಎಂದು ಬಾಗಲಕೋಟೆ ಜಿಲ್ಲೆಯ ದಲಿತ ಸಂಘಟನೆಯ ಪದಾಧಿಕಾರಿಗಳು ಆಗ್ರಹಿಸಿದರು.

ರಾಜ್ಯದಲ್ಲಿ ಕೇವಲ ಎಂಟು ಸಾವಿರದಷ್ಟು ಜನರಿರುವ ಘಂಟಿಚೋರ ಜನಾಂಗಕ್ಕೆ ಜಾತಿಪ್ರಮಾಣಪತ್ರ ಸಿಗುತ್ತಿಲ್ಲ. ಇದೇ ರೀತಿಯ ಸಣ್ಣ ಸಣ್ಣ ಸಮಾಜಗಳನ್ನು ಗುರುತಿಸಿ ಮೀಸಲಾತಿ ಒದಗಿಸಬೇಕು ಎಂದು ಘಂಟಿಚೋರ ಸಮಾಜದ ಮುಖಂಡರೊಬ್ಬರು‌ ಆಗ್ರಹಿಸಿದರು.

ಆಯೋಗದ ಸದಸ್ಯರಾದ ಡಾ.ಚಂದ್ರಶೇಖರ್, ಅನಂತ ನಾಯಕ, ಸದಸ್ಯ ರಾಜಶೇಖರ್ ಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಮತ್ತಿತರರು ಉಪಸ್ಥಿತರಿದ್ದರು.
ಸದಸ್ಯ ಕಾರ್ಯದರ್ಶಿ ಸಮೀರ್ ಅಹ್ಮದ್ ಮುಲ್ಲಾ ಸ್ವಾಗತಿಸಿದರು.

ಖಾಸಗಿ ವಲಯದಲ್ಲೂ ಮೀಸಲಾತಿ ಅಗತ್ಯ:

ಮೀಸಲಾತಿ ಸೌಲಭ್ಯಗಳು ವಂಚಿಸಲು ಖಾಸಗೀಕರಣ ಮಾಡುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಖಾಸಗಿ ವಲಯದಲ್ಲೂ ಮೀಸಲಾತಿ ಸೌಲಭ್ಯ ಒದಗಿಸಬೇಕು ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿಬಂದವು.

ವೀರಶೈವ ಜಂಗಮರಿಗೆ ಮೀಸಲಾತಿಗೆ ವಿರೋಧ:

ವೀರಶೈವ ಜಂಗಮರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಜಾತಿ ಮೀಸಲಾತಿ ನೀಡಬಾರದು ಧಾರವಾಡದ ಲಕ್ಷ್ಮಣ ಬಕ್ಕಾಯಿ ವಾದ ಮಂಡಿಸಿದರು.
ಲಿಂಗಾಯತರಿಗೆ ಈಗಾಗಲೇ ಮೀಸಲಾತಿ ಇದೆ. ಆದಾಗ್ಯೂ ಕೆಲವರು ಬೇಡ ಜಂಗಮ ಎಂಬ ಹೆಸರಿನಲ್ಲಿ ಮೀಸಲಾತಿ ಪಡೆಯುವ ಮೂಲಕ ಬೇಡ ಜಂಗಮರಿಗೆ ಅನ್ಯಾಯವಾಗುತ್ತಿದೆ ಎಂದು ಒತ್ತಾಯಿಸಿದರು.

ಸರ್ಕಾರ ಜಾರಿಗೆ ತಂದ ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಹಣ ಕೂಡ ಸಮರ್ಪಕವಾಗಿ ಖರ್ಚು ಮಾಡುತ್ತಿಲ್ಲ.
ಪರಿಶಿಷ್ಟ ಜಾತಿ ಮತ್ತು ಸಮುದಾಯಗಳಿಗರ ಶೇ.೨೭ ಮೀಸಲಾತಿ ಅಗತ್ಯವಿದೆ ಎಂದು ಲಕ್ಷ್ಮಣ ಬಕ್ಕಾಯಿ ಪ್ರತಿಪಾದಿಸಿದರು.
ಬೆಳಗಾವಿ ವಿಭಾಗದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮುಖಂಡರು ಮತ್ತು ಸಂಘಟನೆಗಳ ಪದಾಧಿಕಾರಿಗಳು ಅಭಿಪ್ರಾಯ ಮಂಡಿಸಿದರು.
***

Check Also

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.