ಗೋವಾ ಚುನಾವಣೆ: ಸ್ಟಾರ್ ಪ್ರಚಾರಕರಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇಮಕ
ನವದೆಹಲಿ: ಇದೇ ಫೆ. 14 ರಂದು ನಡೆಯಲಿರುವ ಗೋವಾ ವಿಧಾನಸಭೆ ಚುನಾವಣೆಗೆ ಎಐಸಿಸಿ 30 ಜನರನ್ನೊಳಗೊಂಡ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಸ್ಟಾರ್ ಪ್ರಚಾರಕರಾಗಿ ನೇಮಕಗೊಂಡಿದ್ದಾರೆ.
ಈ ಬಾರಿ ಗೋವಾದಲ್ಲಿ ಸ್ವಂತ ಬಲದ ಮೇಲೆ ಪಕ್ಷವನ್ನು ಅಧಿಕಾರ ತರಲೇಬೇಕೆಂದು ಪಣತೊಟ್ಟಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು, ತಮ್ಮದೇಯಾದ ತಂಡವನ್ನು ರಚಿಸಿಕೊಂಡು ಗೆಲುವಿಗೆ ರಣತಂತ್ರ ಹೆಣೆದಿದ್ದಾರೆ. ನಾಲ್ಕು ದಿನ ಗೋವಾದಲ್ಲಿ ಬೀಡುಬಿಟ್ಟಿದ ಅವರು, ವಿವಿಧ ವಿಧಾನಸಭಾ ಮತಕ್ಷೇತ್ರಗಳಿಗೆ ಭೇಟಿ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು.
ಈ ಚುನಾವಣೆಯನ್ನು ಗೆಲ್ಲಲೇಬೇಕೆಂದು ಹಠತೊಟ್ಟಿರುವ ಸತೀಶ್ ಜಾರಕಿಹೊಳಿ ಅವರು, ಗೋವಾ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಕೂಡ ಮಾಡಿದ್ದಾರೆ. ತಮ್ಮದೇ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಅವರು, ಒಂದೊಂದು ಕ್ಷೇತ್ರದಲ್ಲಿ ಒಂದೊಂದು ತಂಡವನ್ನು ರಚಿಸಿ, ಅವರಿಗೆ ಚುನಾವಣಾ ಜವಾಬ್ದಾರಿಗಳನ್ನು ನೀಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಅಂತ ನಾಯಕರನ್ನು ಎಐಸಿಸಿ ಸ್ಟಾರ್ ಪ್ರಚಾರಕರನ್ನಾಗಿ ನೇಮಿಸಿ, ಆದೇಶಿಸಿದೆ.
ಇನ್ನೂ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕಾರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಮಲ್ಲಿಕಾರ್ಜುನ ಖರ್ಗೆ, ಪಿ.ಚಿದಂಬರಂ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ದಿನೇಶ್ ಗೂಂಡುರಾವ್, ಗಿರೀಶ್ ಚೊಡಂಕರ್, ದಿಗಂಬರ್ ಕಾಮತ್, ಫ್ರಾನ್ಸಿಸ್ಕೊ ಸರ್ದಿನ್ಹಾ, ರಣದೀಪ್ ಸುರ್ಜೆವಾಲಾ, ಅಶೋಕ ಗೇಹ್ಲೊಟ್, ಅಶೋಕ ಚವ್ಹಾಣ, ಸಚಿನ್ ಪೈಲಟ್, ಒಮನ್ ಚಂಡ್ಯ, ರಮೇಶ್ ಚನ್ನಿಥಲಾ, ಶಶಿ ತರೂರ್, ಎಚ್ಕೆ ಪಾಟೀಲ್, ಎಂಬಿ ಪಾಟೀಲ್, ರಮಾಕಾಂತ್ ಕೆ, ಅಮೀತ್ ದೇಶಮುಖ್, ನಾನಾ ಪತೋಳೆ, ಯಶೋಮತಿ ಠಾಕೂರ್, ಆರ್.ವಿ. ದೇಶಪಾಂಡೆ, ಕನ್ಹಯ್ಯಾ ಕುಮಾರ್, ಇಮ್ರಾನ್ ಪ್ರತಾಪಗರ್ಹಿ, ನೆಟ್ಟಾ ಡಿಸೋಜಾ ಹಾಗೂ ಬಿ.ವಿ. ಶ್ರೀನಿವಾಸ್ ಅವರನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.