ಯಮಕನಮರಡಿ ಬಿಟ್ಟರೆ ಸವದತ್ತಿ ಕ್ಷೇತ್ರದಿಂದ ಸ್ಪರ್ಧೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ
ಬೆಳಗಾವಿ ಜಿಲ್ಲೆಯಲ್ಲಿ10ರಿಂದ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೀಟು ಗೆಲ್ಲಲು ಪ್ರಯತ್ನ
ಗೋಕಾಕ: ಕಾಂಗ್ರೆಸ್ ಟಿಕೆಟ್ ಪಡೆಯಲು ಅಭ್ಯರ್ಥಿ ಆಯಾ ಕ್ಷೇತ್ರದಲ್ಲಿ ಜನಪ್ರಿಯತೆ, ಆಕರ್ಷಣಿಯ ವ್ಯಕ್ತಿತ್ವ ಹೊಂದಿರಬೇಕು. ಒಳ್ಳೆಯ ಕೆಲಸ ಮಾಡಿರಬೇಕು. ಎಲ್ಲಾ ಪಕ್ಷಗಳ ಟಿಕೆಟ್ ಅಂತಿಮವಾದ ಮೇಲೆ ಕೊನೆಯ ಸರ್ವೇ ಮಾಡಿ ನಮ್ಮ ಅಭ್ಯರ್ಥಿಯನ್ನು ಫೈನಲ್ ಮಾಡುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಎರಡು ಕ್ಷೇತ್ರಗಳಿಂದ ಸತೀಶ್ ಜಾರಕಿಹೊಳಿ ಸ್ಪರ್ಧಿಸಬೇಕು ಎಂಬ ಬೆಂಬಲಿಗರ ಒತ್ತಾಯದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಗೋಕಾಕ್‍ನಲ್ಲಿ ಉತ್ತರಿಸಿದ ಸತೀಶ ಜಾರಕಿಹೊಳಿ ಅವರು, ಆ ರೀತಿ ಇರಬಹುದು, ಆದರೆ ಅಂತಿಮವಾಗಿ ಒಂದೇ ಕಡೆ ಸ್ಪರ್ಧಿಸಬೇಕಾಗುತ್ತದೆ. ಎರಡು ಕಡೆ ಸ್ಪರ್ಧಿಸುವ ಅನಿವಾರ್ಯತೆ ಇಲ್ಲ. ಆಯಾ ಕ್ಷೇತ್ರಗಳಲ್ಲಿ ಸಾಕಷ್ಟು ಅಭ್ಯರ್ಥಿಗಳಿದ್ದಾರೆ, ಅಭ್ಯರ್ಥಿಗಳು ಇಲ್ಲ ಎಂದರೆ ಆ ಮಾತು ಬೇರೆ ಎಂದರು.
ಎರಡನೇ ಕ್ಷೇತ್ರವಾದ್ರೆ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತಿರಿ ಎಂಬ ಪ್ರಶ್ನೆಗೆ ಬೇರೆ ಕ್ಷೇತ್ರ ಆಯ್ಕೆ ಮಾಡೋದು ಆದರೆ ಸವದತ್ತಿ ಕ್ಷೇತ್ರ ಒಂದೇ. ಸವದತ್ತಿ ಯಾಕೆಂದರೆ ನಮ್ಮ ಪಕ್ಷ ಗೆಲ್ಲಬೇಕು ಎಂದು ಅಲ್ಲಿ ನಾವು ಸಂಘಟನೆ ಮಾಡುತ್ತಿದ್ದೇವೆ. ಸವದತ್ತಿ ಅಷ್ಟೇ ಅಲ್ಲದೇ ಗೋಕಾಕ್, ಅಥಣಿಯಲ್ಲಿಯೂ ಪಕ್ಷ ಗೆಲ್ಲಬೇಕು ಎಂದು ಸಂಘಟನೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಈ ಬಾರಿ 10-12 ಸ್ಥಾನಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ. ಕನಿಷ್ಠ 10, ಗರಿಷ್ಠ 12 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು. ಆ ಭಾಗದಲ್ಲಿ ಜನಪ್ರಿಯತೆ ಇರಬೇಕು, ಜನ ಅವರನ್ನು ಒಪ್ಪಿಕೊಳ್ಳಬೇಕು. ಅಭ್ಯರ್ಥಿಯನ್ನು ಜನ ಒಪ್ಪಿಕೊಳ್ಳುವುದಿಲ್ಲ ಎಂದರೆ ನಾವು ಟಿಕೇಟ್ ಕೊಟ್ಟರೂ ಏನೂ ಪ್ರಯೋಜನ ಆಗುವುದಿಲ್ಲ. ಯಾವುದಾದ್ರೂ ಹುದ್ದೆಯಲ್ಲಿ ಕೆಲಸ ಮಾಡಿರಬೇಕು. ಆ ಭಾಗದಲ್ಲಿ ಆಕರ್ಷಣಿಯ ವ್ಯಕ್ತಿಯಾಗಿರಬೇಕು. ಇವು ಪ್ರಮುಖವಾದ ಮಾನದಂಡಗಳಾಗಿವೆ. ಮುಂದೆ ಬರುವುದು ಪಕ್ಷ. ಅಭ್ಯರ್ಥಿಯ ಹಿಂದೆ ಪಕ್ಷ ನಿಂತಿರುತ್ತದೆ. ಜಿಲ್ಲೆಯ ಎಲ್ಲ ಮುಖಂಡರು ಇರುತ್ತಾರೆ ಎಂದರು.
ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದೆ. ಒಂದು ಕಡೆ ಆರು ಜನ, ಮತ್ತೊಂದು ಕಡೆ ಇಬ್ಬರು ಇದ್ದಾರೆ. ಇನ್ನೊಂದು ನಿಖರವಾಗಿ ಒಬ್ಬರೇ ಇದ್ದಾರೆ. ಹೀಗಾಗಿ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಿದ್ದೇವೆ. ಸರ್ವೇದಲ್ಲಿ ಯಾರ ಹೆಸರು ಬರುತ್ತದೆ. ಅವರಿಗೆ ಟಿಕೆಟ್ ಕೊಡುತ್ತೇವೆ. ಈಗಾಗಲೇ ಒಂದು ಸರ್ವೇ ಮುಗಿದಿದೆ. ಮತ್ತೆ ಬೇರೆ ಬೇರೆ ವಿಷಯಗಳ ಮೇಲೆ ಬದಲಾವಣೆ ಆಗುತ್ತಿರುತ್ತದೆ. ಕೊನೆಯವರೆಗೂ ಸರ್ವೇ ಮಾಡಲಾಗುತ್ತದೆ. ಅಂತಿಮವಾಗಿ ಎಲ್ಲಾ ಪಕ್ಷದವರು ಟಿಕೆಟ್ ಕೊಟ್ಟ ಮೇಲೆ ಅಂತಿಮ ಸರ್ವೇ ಮಾಡಿ ಅಭ್ಯರ್ಥಿಯನ್ನು ಫೈನಲ್ ಮಾಡಲಾಗುತ್ತದೆ. ಈಗ ಆಗುತ್ತಿರುವುದು ಎಲ್ಲಾ ಊಹಾಪೋಹ ಅಷ್ಟೇ. ಪಕ್ಷಕ್ಕೆ ಈ ವಿಷಯದ ಮೇಲೆ ಇಷ್ಟು ಪರ್ಸೆಂಟ್ ವೋಟ್ ಬರಬಹುದು ಎಂದು ಅಂದಾಜು ಮಾಡಬಹುದು ಅಷ್ಟೇ. ಹೀಗಾಗಿ ವೈಯಕ್ತಿವಾಗಿ ಹೇಳುವುದು ಕಷ್ಟ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಚಿರತೆ ಬಂದು ಇವತ್ತಿಗೆ 26 ದಿನ ಕಳೆದಿದೆ. ಆದರೆ ಇನ್ನೂ ಚಿರತೆ ಮಾತ್ರ ಹಿಡಿದಿಲ್ಲ. ಜನರು ಆತಂಕಗೊಂಡಿದ್ದಾರೆ. ಆದ್ದರಿಂದ ಅರಣ್ಯ ಸಚಿವರು, ಹಿರಿಯ ಅಧಿಕಾರಿಗಳು ಚಿರತೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದವರನ್ನು ಕರೆ ತಂದು ಬೇಗ ಚಿರತೆ ಹಿಡಿದು ಜನರ ಆತಂಕ ನಿವಾರಿಸಬೇಕೆಂದು ಆಗ್ರಹಿಸಿದರು.
ಇನ್ನೂ ಬೆಳಗಾವಿಯ ಸುವರ್ಣಸೌಧದಲ್ಲಿ ಯಾವುದೇ ಒಂದು ಕಚೇರಿ ತಂದರೆ ಪ್ರಯೋಜನ ಆಗಲ್ಲ. ಅದಕ್ಕೆ ಸಂಧಿಸಿದ ಎಲ್ಲಾ ಆಡಳಿತವನ್ನು ಇಲ್ಲಿಗೆ ಸ್ಥಳಾಂತರಿಸಬೇಕು. ಅಂದಾಗ ಮಾತ್ರ ಈ ಭಾಗದ ಜನತೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ ಅವರು, ಕಾಂಗ್ರೆಸ್ ಪಕ್ಷದಿಂದ “ಭಾರತ ಜೋಡೋ” ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯಲಿದ್ದು, ಕರ್ನಾಟಕದಲ್ಲಿ 21 ದಿನ ನಡೆಯಲಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.