ಬೆಳಗಾವಿ,ಉಸ್ತುವಾರಿ ಸಚಿವರ ಮೊದಲ ಸಭೆಯಲ್ಲಿ, ಹಲವಾರು ನಿರ್ಣಯ..!!

ಬೆಳಗಾವಿ, – ರೈಲ್ವೆ, ನೀರಾವರಿ, ಹೆದ್ದಾರಿ, ರಿಂಗ್ ರಸ್ತೆ, ಫ್ಲೈ ಓವರ್ ನಿರ್ಮಾಣ, ಭೂಸ್ವಾಧೀನ, ಪುನರ್ವಸತಿ ಹೀಗೆ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ಸಂಬಂಧಿಸಿದ ಪ್ರತಿಯೊಂದು ಯೋಜನೆಯ ಅನುಷ್ಠಾನ ಪ್ರಕ್ರಿಯೆ ಚುರುಕುಗೊಳಿಸಬೇಕು; ಯೋಜನೆಗೆ ಅಡ್ಡಿಯಾಗುವ ತಾಂತ್ರಿಕ ತೊಂದರೆಗಳನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜೂ.13) ನಡೆದ ಭೂಸ್ವಾಧೀನ, ರೈಲ್ವೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಳಗಾವಿ ರಿಂಗ್ ರಸ್ತೆ, ರೈಲ್ವೆ ಯೋಜನೆ ಸೇರಿದಂತೆ ಮಹತ್ವದ ಯೋಜನೆಗಳ ಕುರಿತು ವಿಸ್ತೃತವಾದ ಚರ್ಚೆ ನಡೆಸಿದ ಅವರು, ಭೂಸ್ವಾಧೀನ ಅಥವಾ ನ್ಯಾಯಾಲಯದ ತಡೆಯಾಜ್ಞೆಯಂತಹ ತಾಂತ್ರಿಕ ಸಮಸ್ಯೆಗಳನ್ನು ಆದ್ಯತೆ ಮೇರೆಗೆ ಪರಿಹರಿಸಿ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಸ್ಥಳಾಂತರ-ಪುನರ್ವಸತಿ ಪ್ರಕ್ರಿಯೆ ತ್ವರಿತಗೊಳಿಸಲು ನಿರ್ದೇಶನ:

ಕಮಲಾಪುರ ಗ್ರಾಮದ ಸ್ಥಳಾಂತರಕ್ಕೆ ಅಗತ್ಯವಾದ 72 ಎಕರೆ ಜಾಗೆ ಇದೆ. ಆದರೆ ಗ್ರಾಮಸ್ಥರು ಗ್ರಾಮ ಪಕ್ಕದಲ್ಲೇ ಇರುವ ಜಾಗೆಗೆ ಸ್ಥಳಾಂತರಕ್ಕೆ ಮನವಿ ಮಾಡಿಕೊಂಡಿದ್ದು, ಈ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ಮುಳುಗಡೆ ಪ್ರದೇಶ ಎಂದು ಘೋಷಿಸಲಾಗಿರುವ ಗ್ರಾಮಗಳ ಸ್ಥಳಾಂತರ ಅಥವಾ ಪುನರ್ವಸತಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ಒಂದು ವೇಳೆ ನ್ಯಾಯಾಲಯದಲ್ಲಿ ತಡೆ ಅಥವಾ ಪ್ರಕರಣಗಳು ಇದ್ದಲ್ಲಿ ಅವುಗಳನ್ನು ಪರಿಹರಿಸಲು ತಕ್ಷಣವೇ ಕ್ತಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ಪುನರ್ವಸತಿಗೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಲು ನೀರಾವರಿ ಇಲಾಖೆಯ ಅಧಿಕಾರಿಗಳೇ ಮುತುವರ್ಜಿ ವಹಿಸಬೇಕು.
ಗ್ರಾಮಸ್ಥರ ಅಭಿಪ್ರಾಯಗಳು ಹಾಗೂ ನ್ಯಾಯಾಲಯದ ಆದೇಶವನ್ನು ಗಮನದಲ್ಲಿಟ್ಟುಕೊಂಡು ಚಿಕ್ಕೋಡಿ ಸಮೀಪದ ಜಾಗನೂರ ಸೇರಿದಂತೆ ಐದು ಗ್ರಾಮಗಳ ಸ್ಥಳಾಂತರಕ್ಕೆ ಸೂಕ್ತ ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು ಎಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಅಥಣಿ ತಾಲ್ಲೂಕಿನಲ್ಲಿ ಈಗಾಗಲೇ ಸಿದ್ಧಪಡಿಸಲಾಗಿರುವ ಪುನರ್ವಸತಿ ಕೇಂದ್ರದ ನಿವೇಶನಗಳನ್ನು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಕೂಡಲೇ ಸಂಬಂಧಿಸಿದ ಗ್ರಾಮಸ್ಥರಿಗೆ ವಿತರಿಸಬೇಕು. ಗ್ರಾಮಸ್ಥರು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡಾಗ ಅಗತ್ಯ ಮೂಲಸೌಕರ್ಯವನ್ನು ಒದಗಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ರಿಂಗ್ ರಸ್ತೆ ನಿರ್ಮಾಣ- ವಿನ್ಯಾಸ ಮಾರ್ಪಾಡು ಕುರಿತು ಪರಿಶೀಲನೆಗೆ ನಿರ್ದೇಶನ:

ಕಡೋಲಿ, ಹೊನಗಾ, ಬೆನ್ನಾಳಿ, ಅಗಸಗಾ ಮತ್ತಿತರ ಸಣ್ಣ‌ ಗ್ರಾಮಗಳಿದ್ದು, ಬೆಳಗಾವಿ ರಿಂಗ್ ರಸ್ತೆ ನಿರ್ಮಾಣಕ್ಕೆ ನೂರಾರು ಎಕರೆ ಸ್ವಾಧೀನಪಡಿಸಿಕೊಂಡರೆ ಗ್ರಾಮಸ್ಥರಿಗೆ ತೊಂದರೆಯಾಗಲಿದೆ. ಆದ್ದರಿಂದ ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿ ವಿನ್ಯಾಸದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಬೇಕು. ಒಂದೆರಡು ಕಿ.ಮೀ. ಆಸುಪಾಸಿನಲ್ಲಿ ಪರ್ಯಾಯ ಸ್ಥಳ ಗುರುತಿಸಬೇಕು ಎಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತು ಭೂಸ್ವಾಧೀನ ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಹಲಗಾ-ಮಚ್ಛೆ ಹೆದ್ದಾರಿ ಕಾಮಗಾರಿಗೆ ಅನುಕೂಲವಾಗುವಂತೆ ಬಾಕಿ ಇರುವ ಭೂಸ್ವಾಧಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದರು.

ರೈಲ್ವೆ ಮೇಲ್ಸೇತುವೆ ವಿನ್ಯಾಸ-ಲೋಕೋಪಯೋಗಿ ಇಲಾಖೆಯ ಜತೆ ಚರ್ಚಿಸಲು ಸಲಹೆ:

ನಗರದ ಮೊದಲ ಹಾಗೂ ಎರಡನೇ ಗೇಟ್ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗಳ ಟೆಂಡರ್ ಗಳನ್ನು ಕೂಡಲೇ ಕರೆಯಬೇಕು. ಇದಕ್ಕೂ ಮುಂಚೆ ಮಹಾನಗರ ಪಾಲಿಕೆ, ಲೋಕೋಪಯೋಗಿ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಜತೆ ಚರ್ಚಿಸಿ ವಿನ್ಯಾಸವನ್ನು ಅಂತಿಮಗೊಳಿಸಬೇಕು ಎಂದು ತಿಳಿಸಿದರು.

ರೈಲ್ವೆ ಇಲಾಖೆಯು ರಸ್ತೆ ಮೇಲ್ಸೆತುವೆ ಹಾಗೂ ಅಂಡರ್ ಪಾಸ್ ಗಳು ಅವೈಜ್ಞಾನಿಕವಾಗಿದ್ದು, ಜನರಿಗೆ ತೀವ್ರ ಅನಾನುಕೂಲ ಆಗುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಯಾವುದೇ ರಸ್ತೆ ಮೇಲ್ಸೆತುವೆ ಹಾಗೂ ಅಂಡರ್ ಪಾಸ್ ನಿರ್ಮಿಸುವಾಗ ಕಡ್ಡಾಯವಾಗಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ವಿನ್ಯಾಸವನ್ನು ಅಂತಿಮಗೊಳಿಸಬೇಕು ಎಂದು ಸಚಿವರು ಸಲಹೆ ನೀಡಿದರು.

ಬೆಳಗಾವಿ ನಗರದಲ್ಲಿ ಬಹುಮಹಡಿ ಕಟ್ಟಡ:

ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ವಿವಿಧ ಸರಕಾರಿ ಕಚೇರಿಗಳ ಜಾಗೆಯಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ವಿನ್ಯಾಸವನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಸಚಿವರು ತಿಳಿಸಿದರು.

ಸಂಚಾರ ದಟ್ಟಣೆ ನಿರ್ವಹಣೆಗೆ ನಗರದಲ್ಲಿ ಫ್ಲೈ ಓವರ್ ನಿರ್ಮಾಣ:

ರಾಷ್ಟ್ರೀಯ ಹೆದ್ದಾರಿ ಜಂಕ್ಷನ್ ಸಂಕಮ್‌ ಹೋಟೆಲ್ ಮೂಲಕ ಕಿಲ್ಲಾವರೆಗೆ ಅಶೋಕ ವೃತ್ತದ ಬಳಿ ನಿರ್ಮಿಸಲು ಉದ್ಧೇಶಿಸಿರುವ ಪ್ರಸ್ತಾವಿತ ರಸ್ತೆ ಫ್ಲೈ ಓವರ್ ನಿರ್ಮಾಣ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರು, ಆರಂಭಿಕವಾಗಿ ಪ್ರಸ್ತಾವಿತ ಯೋಜನೆಯ ಮೊದಲ ಹಂತ ಅನುಷ್ಠಾನದ ಕುರಿತು ಚರ್ಚೆ ನಡೆಸಿದರು.

ಹೆದ್ದಾರಿ ಎರಡೂ ಕಡೆಯಿಂದ ಬಸ್ ನಿಲ್ದಾಣ, ಆರ್.ಟಿ.ಓ. ವೃತ್ತ ಸೇರಿದಂತೆ ನಗರ ಪ್ರವೇಶಿಸುವ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಮಾಡುವುದು ಫ್ಲೈ ಓವರ್ ಮುಖ್ಯ ಉದ್ಧೇಶವಾಗಿರಬೇಕು. ಅದೇ ರೀತಿಯಲ್ಲಿ ವಿನ್ಯಾಸ ರೂಪಿಸಬೇಕು ಎಂದರು.
ಇದಾದ ಬಳಿಕ ಪೀರನವಾಡಿಯವರೆಗೆ ವಿಸ್ತರಿಸುವ ಬಗ್ಗೆ ಪರಿಶೀಲಿಸಬಹುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.

ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲು ಸೂಚನೆ:

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಾಗೂ ತಪ್ಪು ಮಾಹಿತಿಯನ್ನು ಹರಡುವಂತಹ ವ್ಯಕ್ತಿಗಳ ಮೇಲೆ ನಿಗಾವಹಿಸಬೇಕು. ಅಂತಹ ಪ್ರಕರಣಗಳು ಕಂಡುಬಂದರೆ ಪೊಲೀಸ್ ಇಲಾಖೆಯು ಕೂಡಲೇ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಸೂಚನೆ ನೀಡಿದರು.

ಭದ್ರತೆ ದೃಷ್ಟಿಯಿಂದ ನಗರ‌ ಹಾಗೂ ಹೆದ್ದಾರಿಯಲ್ಲಿ ವಾಣಿಜ್ಯ ಕೇಂದ್ರಗಳು ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್, ತಹಶಿಲ್ದಾರ ಕಚೇರಿ ಶಿಥಿಲಹೊಂಡಿರುವುದರಿಂದ ಬಹುಮಹಡಿ ಕಟ್ಟಡ ನಿರ್ಮಿಸುವಾಗ ಇದಕ್ಕೂ ಆದ್ಯತೆ ನೀಡಬೇಕು ಎಂದು ಹೇಳಿದರು.

ಪುನರ್ವಸತಿ ಪ್ರಕ್ರಿಯೆ ಚುರುಕುಗೊಳಿಸಲು ಸೂಚನೆ:

ಜಿಲ್ಲೆಯಲ್ಲಿ ಮುಳುಗಡೆ ಎಂದು ಘೋಷಿಸಲಾಗಿರುವ ಗ್ರಾಮಗಳ ಪುನರ್ವಸತಿಗೆ ಸಂಬಂಧಿಸಿದಂತೆ ಯಾವುದೇ ಕೆಲಸಗಳು ಬಾಕಿ ಇದ್ದರೆ ನೀರಾವರಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಕೂಡಲೇ ಜಿಲ್ಲಾಡಳಿತದ ಜತೆ ಸಮನ್ವಯ ಸಾಧಿಸಿಕೊಂಡು ಕೂಡಲೇ ಜನರಿಗೆ ಪುನರ್ವಸತಿ ಪ್ರಕ್ರಿಯೆ ತ್ವರಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ರಿಂಗ್ ರಸ್ತೆ ನಿರ್ಮಾಣದ ಬಳಿಕ ಬೆಳಗಾವಿ ನಗರದಲ್ಲಿ ಟ್ರಾಫಿಕ್ ಹಾಗೂ ಸಂಚಾರದ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.
ಇದೇ ರೀತಿ ಪೀರನವಾಡಿ ಬಳಿಯೂ ಸಂಚಾರ ದಟ್ಟಣೆ ದಿನೇ ದಿನೆ ಹೆಚ್ಚಾಗುತ್ತಿರುವುದರಿಂದ ಇಲ್ಲಿಯೂ ಕೂಡ ರಸ್ತೆ ಮೇಲ್ಸೇತುವೆ ನಿರ್ಮಿಸಬಹುದು ಎಂಬುದನ್ನು ಸಚಿವರ ಗಮನಕ್ಕೆ ತಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆಯಲ್ಲಿ ಮಾತನಾಡಿ, ಚಿಕ್ಕೋಡಿ, ಕಾಗವಾಡ ಹಾಗೂ ಅಥಣಿ ಬೈಪಾಸ್ ರಸ್ತೆ ಯೋಜನೆಯ ಜತೆಗೆ ಲೋಕೋಪಯೋಗಿ ಇಲಾಖೆಯ ವತಿಯಿಂದ ರಿಂಗ್ ರಸ್ತೆ ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು.

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಎಂ‌.ಬಿ.ಬೋರಲಿಂಗಯ್ಯ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ರೈಲ್ವೆ, ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ, ನಗರ ನೀರು ಸರಬರಾಜು, ರಾಷ್ಟ್ರೀಯ ಹೆದ್ದಾರಿ, ಭೂಸ್ವಾಧೀನ, ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
****

Check Also

ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ

ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …

Leave a Reply

Your email address will not be published. Required fields are marked *