ಬೆಳಗಾವಿ-ಮಾಜಿ ಸಚಿವ ಸತೀಶ ಜಾರಕಿಹೊಳಿ ನಿರ್ಮಾಣದ ಹೈಕಮಾಂಡ ಚಿತ್ರದ ಆಡಿಶನ್ ಬೆಳಗಾವಿಯಲ್ಲಿ ನಡೆಯಿತು ಇದರಲ್ಲಿ ಜ್ಯುನೀಯರ ಸಿದ್ಧರಾಮಯ್ಯ ಪಾಲ್ಗೊಂಡು ಎಲ್ಲರ ಗಮನ ಸೆಳೆದರು
ಸಚಿವ ಸ್ಥಾನ ಕಿತ್ತುಕೊಂಡ್ರೂ ಇದುವರೆಗೆ ಅಪ್ಪಿತಪ್ಪಿ ಈ ಕುರಿತು ಮಾತನಾಡದ ಮಾಜಿ ಸಚಿವ ಸತೀಶ ಜಾರಕಿಹೋಳಿ, ಹೈಕಮಾಂಡ ವಿರುದ್ಧ ಒಳ ಒಳಗೆ ಕತ್ತಿ ಮಸೆಯುತ್ತಿದ್ದರು. ಆದ್ರೆ ಇವತ್ತು ಮೌನಮುರಿದಿದ್ದಾರೆ. ರಾಜಕೀಯ ರಿಯಲ್ ಕಹಾನಿಯನ್ನ ಚಿತ್ರದ ರೂಪದಲ್ಲಿ ಹೊರ ತಂದು ರಾಜ್ಯದ ಜನತೆ ಮುಂದೆ ಇಡಲು ಮುಂದಾಗಿದ್ದಾರೆ. ಅವರೇ ಕಥೆ ಬರೆದು ನಿರ್ಮಾಣಮಾಡಿರುವ ಹೈಕಮಾಂಡ ಚಿತ್ರ ಶೀಘ್ರದಲ್ಲಿ ಸೆಟ್ಟೇರಲಿದೆ. ಚಿತ್ರದಲ್ಲಿ ಅಭಿನಯಕ್ಕೆ ಕಲಾವಿದರ ಆಯ್ಕೆಗಾಗಿ ಇಂದು ಆಡೀಷನ್ ನಡೆಯಿತು.
ಅಬಕಾರಿ ಸಚಿವ ಸ್ಥಾನ ನೀಡಿದ್ದಕ್ಕೆ ಮುನಿಸಿಕೊಂಡು ರಾಜೀನಾಮೆ ನೀಡಿ ಮತ್ತೆ ಸಣ್ಣ ಕೈಗಾರಿಕೆ ಸಚಿವ ಸ್ಥಾನದಲ್ಲಿ ಮುಂದುವರೆದಿದ್ದ ಸತೀಶ ಜಾರಕಿಹೊಳಿಗೆ ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ಹೈಕಮಾಂಡ ದೊಡ್ಡ ಶಾಕ್ ನೀಡಿತ್ತು. ಅಷ್ಟೇ ಅಲ್ಲ ಸಣ್ಣ ಕೈಗಾರಿಕೆ ಸಚಿವ ಸ್ಥಾನವನ್ನೂ ಕಸಿದುಕೊಂಡು ಇವರ ಸಹೋದರ ರಮೇಶ ಜಾರಕಿಹೊಳಿಗೆ ನೀಡುವ ಮೂಲಕ ಅಪಮಾನ ಮಾಡಿತ್ತು. ಸಚಿವ ಸ್ಥಾನ ಕಳೆದುಕೊಂಡ ನಂತ್ರ ಅಪ್ಪಿತಪ್ಪಿ ಯಾವುದೇ ಪ್ರತಿಕ್ರಿಯೆ ನೀಡದ ಸತೀಶ ಜಾರಕಿಹೊಳಿ ಮೌನಕ್ಕೆ ಶರಣಾಗಿದ್ದರು. ಆದ್ರೆ ಇದಾದ ನಂತ್ರ ಇದೀಗ ತಮ್ಮನ್ನ ಸಚಿವ ಸ್ಥಾನದಿಂದ ಕೆಳಗಿಸಿದ ಹೈಕಮಾಂಡನ ಬಣ್ಣ ಬಯಲು ಮಾಡಲು ನಿರ್ಧರಿಸಿದಂತೆ ಕಾಣುತ್ತಿದೆ. ರಾಜಕೀಯ ರಿಯಲ್ ಘಟನೆಗಳನ್ನ ಒಂದೊಂದಾಗಿಯೇ ಜೋಡಿಸಿ ತಾವೇ ಚಿತ್ರಕಥೆ ತಯಾರಿಸಿದ್ದಾರೆ. ಅದನ್ನ ಖುದ್ದು ತಾವೇ ನಿರ್ಮಾಣ ಮಾಡಲು ಸಿದ್ಧರಾಗಿದ್ದಾರೆ. ಅದರ ಹೆಸರು ಹೈಕಮಾಂಡ. ಇತ್ತೀಚಿಗೆ ಚಿತ್ರದ ಪೋಷ್ಟರ್ ರಿಲೀಜ್ ಮಾಡಿದ್ದರು. ಇಂದು ಬೆಳಗಾವಿಯ ಕುಮಾರ ಗಂಧರ್ವರಂಗ ಮಂದಿರದಲ್ಲಿ ಚಿತ್ರ ಆಡೀಷನ್ ನಡೆಯಿತು. ಈ ಆಡೀಷನ್ ನಲ್ಲಿ ಬೆಳಗಾವಿಯ ಜಿಲ್ಲೆಯ 300ಕ್ಕೂ ಕಲಾವಿದರು ಪಾಲ್ಗೊಂಡಿದ್ದರು. ಈ ವೇಳೆ ಮಾತಾನಾಡಿದ ಜಾರಕಿಹೊಳಿ, ಚಿತ್ರ ಕಲಾವಿದರ ಆಯ್ಕೆಗಾಗಿ ರಾಜ್ಯದ 6 ಕಡೆಗಳಲ್ಲಿ ಆಡೀಷನ್ ನಡೆಸಲಾವುದು. ಜತೆಗೆ ಇತ್ತೀಚಿಗೆ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆ ಎಂಬ ವದಂತಿ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ ನಾನು ಯಾವುದೇ ಕಾರಣಕ್ಕು ಪಕ್ಷ ಬಿಡುವ ಯೋಜನೆ ಮಾಡಿಲ್ಲ. ಸಿಎಂ ಸಿದ್ದರಾಮಯ್ಯಗೆ ನಮ್ಮ ಬೆಂಬಲ ಅಚಲ. ರಾಜಕೀಯದಲ್ಲಿ ಈ ರೀತಿ ವದಂತಿ ಸಾಮಾನ್ಯ ಎಂದರು.
ಇನ್ನೂ ಇದರಲ್ಲಿ ಸತೀಶ ಜಾರಕಿಹೊಳಿ ನಟನೆ ಮಾಡುವುದಿಲ್ಲವಾದ್ರೂ ಇವರ ಪಾತ್ರವೂ ಇರುತ್ತದೆ. ಅಷ್ಟೇ ಅಲ್ಲ ರಾಜಕೀಯ ನಾಯಕರು, ಹೈಕಮಾಂಡನ ಪಾತ್ರಗಳು ಇದರಲ್ಲಿ ಇರಲಿವೆ. ಅವರದ್ದೇ ದ್ವನಿಯಲ್ಲಿ ರಾಜಕೀಯ ವಿಡಂಬನಾತ್ಮಕವಾಗಿ ಹಾಗೂ ಹಾಸ್ಯಮಯವಾಗಿ ಈ ಚಿತ್ರವನ್ನ ನಿರ್ಮಾಣ ಮಾಡಲು ತೀರ್ಮಾನಿಸಿದ್ದಾರೆ. ಸತೀಶ ಜಾರಕಿಹೊಳಿ ಒಡೆತನದ ಬುದ್ಧ ಸಿನಿ ಕಂಬೈನ್ಸ್ ವತಿಯಿಂದ ನಿರ್ಮಾಣ ಮಾಡಲಾಗುತ್ತಿದ್ದು, 2017ರ ಜನವರಿಯಲ್ಲಿ ಚಿತ್ರದ ಚಿತ್ರಿಕರಣ ಆರಂಭವಾಗಲಿದೆ. ಇನ್ನೂ ಸತೀಶ್ ಜಾರಕಿಹೊಳಿ ಕಥೆಯನ್ನು ನಾಗೇಂದ್ರ ಮಾಗಡಿ ಚಿತ್ರಕತೆ, ನಿರ್ದೇಶನ ಮಾಡಲಾಗಿದ್ದಾರೆ. ಚಿತ್ರದಲ್ಲಿ ಯಾರ ಯಾರ ಪಾತ್ರಗಳು ಇರಲಿವೆ ಎನ್ನುವುದು ಕುತೊಹಲ ಮೂಡಿಸಿದೆ. ಸದ್ಯ ಇಂದಿನ ಆಡೀಷನ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಲುವ ವ್ಯಕ್ತಿಯೊಬ್ಬರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.