ಬೆಳಗಾವಿ: ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ನಡೆದ ಭಾರತ ಹುಣ್ಣಿಮೆ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿದ್ದು, ಭಕ್ತರಿಂದ ಗುಡ್ಡದ ಪ್ರದೇಶವೆಲ್ಲ ತುಂಬಿ ತುಳುಕಿತು.
ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಬಂದು ಯಲ್ಲಮ್ಮ ದೇವಿಯ ದರ್ಶನ, ಆಶೀರ್ವಾದ ಪಡೆದುಕೊಂಡರು. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಜೈಕಾರ ಮುಗಿಲು ಮುಟ್ಟಿತ್ತು. ಭಂಡಾರದಲ್ಲಿ ಭಕ್ತರೆಲ್ಲ ಮಿಂದೆದ್ದರು. ದೀಡ್ ನಮಸ್ಕಾರ, ಉರುಳು ಸೇವೆ ಮೂಲಕ ಹರಕೆ ತೀರಿಸಿದರು. ಬಳೆ, ಎಣ್ಣೆ, ತೆಂಗಿನಕಾಯಿ, ಕಾಯಿ ಕರ್ಪೂರದ ವ್ಯಾಪಾರ ಜೋರಾಗಿತ್ತು. ವಿದೇಶಿಗರು ಗುಡ್ಡಕ್ಕೆ ಭೆಟ್ಟಿ ಕೊಟ್ಟು ಭಾರತೀಯ ಪರಂಪರೆ ಕಂಡು ಖುಷಿಪಟ್ಟರು.
ಬಣ್ಣ ಬಣ್ಣದ ಅಲಂಕಾರ, ತಳಿರ ತೋರಣಗಳ ಸಿಂಗಾರ, ಹೆಜ್ಜೆ ಮೇಳದೊಂದಿಗೆ ಚಕ್ಕಡಿಗಾಡಿಗಳೆಲ್ಲ ಸಾವಿರದ ಸಂಖ್ಯೆಯಲ್ಲಿ ತಂಡೋಪತಂಡವಾಗಿ ಬರುತ್ತಿದ್ದ ದೃಶ್ಯ ಹಳ್ಳಿ ಸೊಗಡನ್ನು ಸಾರುವಂತಿತ್ತು. ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಭಕ್ತರೆಲ್ಲ ಬಂದಿದ್ದರು. ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಜೆಗೆ ಜರುಗಲಿದ್ದು, ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದಾರೆ. ಇಂದು ಮಧ್ಯಾಹ್ನದ ವೇಳೆಗೆ ಗುಡ್ಡದ ಎಂಟ್ಹತ್ತು ಕಿಮೀ ವ್ಯಾಪ್ತಿ ಪ್ರದೇಶ ಭಕ್ತರಿಂದ ಭರ್ತಿಯಾಗಲಿದೆ.
ಜಾತ್ರೆಯಿಂದಾಗಿ ಸವದತ್ತಿ, ಮುನವಳ್ಳಿ, ನರಗುಂದದವರೆಗೂ ಭಕ್ತರ ರಾಶಿ ಹರಡಿಕೊಂಡಿತ್ತು.