Breaking News

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ ರಜನೀಶ್‌ ಅವರನ್ನು ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲು ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್ ಕೆ ಪಾಟೀಲ್​ ಅವರು, ರಾಜ್ಯ ಸರ್ಕಾರದ ಮುಂದಿನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್​ರನ್ನು ನೇಮಕ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು.

ಹಾಲಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರು ಇನ್ನು ಐದು ದಿನದಲ್ಲಿ​ ನಿವೃತ್ತಿ ಆಗುತ್ತಾರೆ. ಹೀಗಾಗಿ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ರಜನೀಶ್​ರನ್ನು ನೇಮಿಸಲು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಎಚ್ ಕೆ ಪಾಟೀಲ್ ಅವರು ಮಾಹಿತಿ ನೀಡಿದರು. ಇದರೊಂದಿಗೆ ಪತಿ ನಿವೃತ್ತಿ ಬೆನ್ನಲ್ಲೇ ಅದೇ ಹುದ್ದೆ ಪತ್ನಿಗೆ ದಕ್ಕುತ್ತಿದೆ.

ರಜನೀಶ್‌ ಗೋಯೆಲ್‌ ಅವರ ಅಧಿಕಾರಾವಧಿ ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ನೂತನ ಮುಖ್ಯ ಕಾರ್ಯದರ್ಶಿ ಯಾರು ಎಂಬ ಚರ್ಚೆ ನಡೆದಿತ್ತು. ಜೇಷ್ಠತೆಯಲ್ಲಿ ಕ್ರಮವಾಗಿ ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಜಯ್‌ ಸೇಠ್‌, ಅಭಿವೃದ್ಧಿ ಆಯುಕ್ತರಾಗಿರುವ ಶಾಲಿನಿ ರಜನೀಶ್‌ ಅವರ ಹೆಸರುಗಳು ಕೇಳಿಬಂದಿದ್ದವು. ಆದರೆ ಇಬ್ಬರ ಪೈಕಿ ಶಾಲಿನಿ ರಜನೀಶ್‌ ಅವರೇ ಮುಖ್ಯ ಕಾರ್ಯದರ್ಶಿ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿತ್ತು. ಇದೀಗ ಶಾಲಿನಿ ರಜನೀಶ್ ಅವರು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಯಾಗುವುದು ಖಚಿತವಾಗಿದೆ.

1989ನೇ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಶಾಲಿನಿ ರಜನೀಶ್ ಅವರು 2027ರ ಜೂನ್ ಅಂತ್ಯಕ್ಕೆ ನಿವೃತ್ತರಾಗಲಿದ್ದಾರೆ.

ಶಾಲಿನಿ ರಜನೀಶ್ ಅವರು ಬೆಳಗಾವಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿ ಅಪಾರ ಜನಮೆಚ್ವುಗೆ ಗಳಿಸಿದ್ದರು.

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *