ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ
ಬೆಳಗಾವಿ, ಫೆ.೧೫(ಕರ್ನಾಟಕ ವಾರ್ತೆ): ನಗರದ ಮಿಲನ್ ಹೋಟೆಲ್ ನಿಂದ ಹಿಂಡಲಗಾ ರಸ್ತೆಯ ಗಾಂಧೀಜಿ ಪುತ್ಥಳಿವರೆಗಿನ ಸ್ಮಾರ್ಟ್ ರಸ್ತೆ ಕಾಮಗಾರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಶನಿವಾರ(ಫೆ.೧೫) ಚಾಲನೆ ನೀಡಿದರು.
೧೫.೦೪ ಕೋಟಿ ರೂಪಾಯಿ ವೆಚ್ಚದ ಸ್ಮಾರ್ಟ್ ರಸ್ತೆ ಜತೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಹೋಟೆಲ್ ಮಿಲನನಿಂದ ಹರ್ಷಾ ಶೋರೂಮ್ ಮೂಲಕ ಹಿಂಡಲಗಾ ರಸ್ತೆಯಲ್ಲಿರುವ ಗಾಂಧೀಜಿ ಪುತ್ಥಳಿವರೆಗೆ ವೈಟ್ ಟಾಪಿಂಗ್, ಫುಟ್ ಪಾಥ್ ನಿರ್ಮಾಣ, ಬೀದಿದೀಪ ಅಳವಡಿಕೆ, ಸೈಕಲ್ ಟ್ರ್ಯಾಕ್ ನಿರ್ಮಾಣ ಮತ್ತು ಭೂಗತ ವಿದ್ಯುತ್ ವ್ಯವಸ್ಥೆಯನ್ನು ಕಾಮಗಾರಿ ಒಳಗೊಂಡಿದೆ.
ಶಾಸಕ ಅನಿಲ್ ಬೆನಕೆ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ, ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಪಠಾಣ ಮತ್ತಿತರರು ಉಪಸ್ಥಿತರಿದ್ದರು.
****