ನಿಷೇಧಿತ ಉಗ್ರವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡ ಓರ್ವ ಉಗ್ರ ಆರೋಪಿಯ ಬಂಧನ
ನಿಷೇಧಿತ ಉಗ್ರವಾದಿ ಸಂಘಟನೆ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೂಡೋಲ್ಯಾಂಡ್ (ಎಸ್) ನೊಂದಿಗೆ ನಿಕಟ ಸಂಬಂಧ ಹೊಂದಿದ ಆಸ್ಸಾಂ ರಾಜ್ಯದ ಓರ್ವ ವ್ಯಕ್ತಿಯನ್ನು ಬೆಳಗಾವಿ ಜಿಲ್ಲಾ ಪೊಲೀಸ್‍ರು ಹಾಗೂ ಆಸ್ಸಾಂ ರಾಜ್ಯದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಿನ್ನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲ್ಲೂಕಿನ ಯಡ್ರಾವ ಗ್ರಾಮದ ಸಕ್ಕರೆ ಕಾರ್ಖಾನೆಯ ಹತ್ತಿರ ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದು, ಬಂಧಿತ ಆರೋಪಿ ಪ್ರುಸ್ನಾ ಫಿರಲಾಂಗ್ ಬಸುಮತರೈ ಎಂದು ಗುರುತಿಸಲಾಗಿದ್ದು, ಆಸ್ಸಾಂ ರಾಜ್ಯದ ಚಿರಂಗ್ ಜಿಲ್ಲೆಯ ಗ್ವಾಜಾನಪೂರಿಯವನಾಗಿದ್ದಾನೆ. ರಾಯಬಾಗ ನ್ಯಾಯಾಲಯದಲ್ಲಿ ಆರೋಪಿಯನ್ನು ಹಾಜಪಡಿಸಲಾಗಿದ್ದು, ಆಸ್ಸಾಂ ರಾಜ್ಯದ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯು ನಿಷೇಧಿತ ಉಗ್ರವಾದಿ ಸಂಘಟನೆಯಾದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೂಡೋಲ್ಯಾಂಡ್ ಸಂಘಟನೆಗೆ 2013 ರಲ್ಲಿ ಪ್ರವೇಶಿಸಿ, ಮಯನ್ಮಾರ್ ದೇಶದಲ್ಲಿ 3 ತಿಂಗಳ ಕಾಲ ಅತ್ಯಾಧುನಿಕ ಎಕೆ-81 ಶಸ್ತ್ರಾಸ್ತ್ರ ತರಬೇತಿ ಪಡೆದುಕೊಂಡಿದ್ದಾನೆ. 2016ರ ನವೆಂಬರ್ 13 ರಂದು ನಿಷೇಧಿತ ಈ ಸಂಘಟನೆ ಮೇಲೆ ನಡೆದ ದಾಳಿಯಲ್ಲಿ ಈತನ ಕೆಲವು ಸಹಚರರು ಹತರಾಗಿದ್ದು, ಈತನ ಒಬ್ಬ ಸಹಚರರನನ್ನು ದಸ್ತಗೀರ ಮಾಡಲಾಗಿದೆ. ಈತನು ಆ ದಾಳಿಯಿಂದ ತಪ್ಪಿಸಿಕೊಂಡು, ರಾಯಬಾಗ ಸಕ್ಕರೆ ಕಾರ್ಖಾನೆಯಲ್ಲಿ 3 ತಿಂಗಳ ಹಿಂದೆ ದಿನಗೂಲಿ ನೌಕರನೆಂದು ತಲೆಮರಿಸಿಕೊಂಡು ಕೆಲಸ ಮಾಡುತ್ತಿದ್ದು, ರಾಯಬಾಗಕ್ಕೆ ಬರುವ ಮುಂಚೆ 15 ದಿನ ಚೆನೈನಲ್ಲಿ ತಂಗಿದ್ದನೆಂದು ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.