ಬೆಳಗಾವಿ
ರೈತರ ಬಗ್ಗೆ ಕಳಕಳಿ, ನಾಡಿನ ಬಗ್ಗೆ ಕಾಳಜಿ ಹೊಂದಿರುವ ಸಿಎಂ ಬಿ.ಎಸ್.ಯಡಿಯೂರಪ್ಪನವರ ಪ್ರತಿಕೃತಿಯನ್ನು ಕೊಲ್ಲಾಪುರದಲ್ಲಿ ಶಿವಸೇನೆಯ ಕಾರ್ಯಕರ್ತರು ಧಹಿಸಿದ್ದು ಖಂಡನೀಯ ಎಂದು ಕರ್ನಾಟಕ ನವನಿರ್ಮಾಣ ಪಡೆಯ ಸಂಸ್ಥಾಪಕ, ಅಧ್ಯಕ್ಷ ರಾಜಕುಮಾರ ಟೋಪಣ್ಣವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬೆಳಗಾವಿ ಕನ್ನಡಿಗರ ಸ್ವತ್ತು. ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡಿರುವ ಶಿವಸೇನೆಯ ಕಾರ್ಯಕರ್ತರು ಕರ್ನಾಟಕದ ಸಿಎಂ ಪ್ರತಿಕೃತಿಯನ್ನು ದಹಿಸಿ ಪುಂಡಾಕೆ ಮೆರೆದಿರುವುದು ನಾಚಿಗೇಡಿನ ಸಂಗತಿ.
ಸಿಎಂ ಬಿ.ಎಸ್.ಯಡಿಯೂರಪ್ಪನವರು ಬೆಳಗಾವಿ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಜನಪರ ಯೋಜನೆಯನ್ನು ಜಾರಿಗೆ ತರುವ ಮೂಲಕ ಬೆಳಗಾವಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಲ್ಲದೆ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣ ಮಾಡಿ ಅಧಿವೇಶ ನಡೆಸುವ ಪರಂಪರೆಗೆ ನಾಂದಿ ಹಾಡಿದವರು ಸಿಎಂ ಯಡಿಯೂರಪ್ಪ. ಅಂಥವರ ಪ್ರತಿಕೃತಿಯನ್ನು ಶಿವಸೇನೆ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕೊಲ್ಲಾಪುರದಲ್ಲಿ ಸಿಎಂ ಯಡಿಯೂರಪ್ಪ ಹಾಗೂ ಕನ್ನಡ ಧ್ವಜ ದಹಿಸಿದ್ದು ಖಂಡನೀಯ.
ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ವಿಷಯ ಸುಪ್ರೀಂ ಕೋರ್ಟ್ ನಲ್ಲಿರುವ ಅಲ್ಲಿನ ಸಿಎಂ ಉದ್ದವ ಠಾಕ್ರೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳಿಕೆ ನೀಡುವು ಮೂಲಕ ಬೆಳಗಾವಿ ಶಿವಸೇನೆಯ ಕಾರ್ಯಕರ್ತರಿಗೆ ಹುರುದುಂಬಿಸುವ ಕೆಲಸ ಮಾಡಿದ್ದಲ್ಲದೆ, ಕರ್ನಾಟಕದ ಸಿಎಂ ಹಾಗೂ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ ಪುಂಡಾಟಿಕೆ ಮೆರೆದಿದ್ದಾರೆ. ಶಿವಸೇನೆಯ ನಾಮಫಲಕಗಳು ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಇವೆ. ಅವುಗಳನ್ನು 24 ಗಂಟೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೆರವುಗೊಳಿಸಬೇಕು. ಇಲ್ಲದಿದ್ದಲ್ಲಿ ಕನಪ ಕಾರ್ಯಕರ್ತರು ಮುಂದೆ ನಿಂತು ತೆರವುಗೊಳಿಸಲಾಗುವುದು. ಆ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾದರೆ ಜಿಲ್ಲಾಡಾಳಿತವೆ ನೇರ ಹೊಣೆಯಾಗುತ್ತದೆ ಎಂದು ಟೋಪಣ್ಣವರ ಎಚ್ಚರಿಕೆ ನೀಡಿದ್ದಾರೆ.
