Breaking News

ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಸ್ತಬ್ಧ…ಹುಕ್ಕೇರಿ ಹುಲಿಗೆ ಕಣ್ಣೀರಿನ ವಿದಾಯ…!!

ಸಾವಿರಾರು ಜನರಿಂದ ಅಂತಿಮ ದರ್ಶನ
——————————————————————
ಸಕಲ ಸರಕಾರಿ ಗೌರವದೊಂದಿಗೆ ಸಚಿವ ಉಮೇಶ್ ಕತ್ತಿ ಅಂತ್ಯಕ್ರಿಯೆ

ಬೆಳಗಾವಿ,

: ತೀವ್ರ ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನ ಹೊಂದಿದ ಅರಣ್ಯ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವರಾದ ಉಮೇಶ್ ಕತ್ತಿ(61) ಅವರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.

ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮಧ್ಯಾಹ್ನ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಜೆ ಆಗಮಿಸಿದ ಪಾರ್ಥೀವ ಶರೀರವನ್ನು ಪುಷ್ಪಾಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ಅವರ ಹುಟ್ಟೂರಾದ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಗೆ ಕೊಂಡೊಯ್ಯಲಾಯಿತು.
ಸಾರ್ವಜನಿಕ ದರ್ಶನದ ಬಳಿಕ ಅವರ ತೋಟದಲ್ಲಿ ಬುಧವಾರ(ಸೆ.7) ಸಂಜೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಲಾಯಿತು.
ತೋಟದಲ್ಲಿರುವ ಅವರ ತಂದೆ ವಿಶ್ವನಾಥ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಕತ್ತಿ ಅವರ ಸಮಾಧಿ ಸ್ಥಳದ ಪಕ್ಕದಲ್ಲಿಯೇ ಸಚಿವ ಉಮೇಶ್ ಕತ್ತಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಇದಕ್ಕೂ‌ ಮುಂಚೆ ಬೆಲ್ಲದ ಬಾಗೇವಾಡಿ ಬಳಿಯ ವಿಶ್ವರಾಜ್ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಂತಿಮ ನಮನ ಸಲ್ಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಕಾರಿ ಗೌರವವನ್ನು ಸಮರ್ಪಿಸಿ ಉಮೇಶ್ ಕತ್ತಿ ಅವರ ಪತ್ನಿ ಶೀಲಾ ಅವರಿಗೆ ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು.
ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಸರಕಾರಿ ಗೌರವವನ್ನು ಸಲ್ಲಿಸಲಾಯಿತು.

ತದನಂತರ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಕೃಷಿ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಕಂದಾಯ ಸಚಿವರಾದ ಆರ್.ಅಶೋಕ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಸಚಿವರಾದ ಸಿ.ಸಿ.ಪಾಟೀಲ, ಹಾಲಪ್ಪ ಆಚಾರ್, ಶಂಕರ್ ಪಾಟೀಲ ಮುನೇನಕೊಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ, ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಹೆಚ್.ಡಿ.ರೇವಣ್ಣ, ಬಿ.ಎಸ್.ವಿಜಯೇಂದ್ರ, ಸಂಸದರಾದ ಮಂಗಳ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ‌ರಾದ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ, ಸತೀಶ್ ಜಾರಕಿಹೊಳಿ, ಪಿ.ರಾಜೀವ್, ಲಕ್ಷ್ಮೀ ಹೆಬ್ಬಾಳಕರ, ಅನಿಲ್ ಬೆನಕೆ, ಅಂಜಲಿ ನಿಂಬಾಳಕರ, ಅಭಯ್ ಪಾಟೀಲ, ಮಹಾಂತೇಶ್ ಕೌಜಲಗಿ, ಎಂ.ಬಿ.ಪಾಟೀಲ, ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಪ್ರಕಾಶ್ ಹುಕ್ಕೇರಿ, ಚನ್ನರಾಜ್ ಹಟ್ಟಿಹೊಳಿ, ಡಾ.ಪ್ರಭಾಕರ್ ಕೋರೆ ಸೇರಿದಂತೆ ಜಿಲ್ಲೆಯ ಅನೇಕ ಜನಪ್ರತಿನಿಧಿಗಳು ವಿವಿಧ ಗಣ್ಯರು ಅಂತಿಮದರ್ಶನ ಪಡೆದುಕೊಂಡರು.
ಹುಕ್ಕೇರಿಯ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿ ಮಠದ ಶಿವಲಿಂಗೇಶ್ವರ ಶ್ರೀಗಳು, ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಸಂಜೆ 6 ಗಂಟೆಗೆ ಆಗಮಿಸಿದ ಪಾರ್ಥೀವ ಶರೀರಕ್ಕೆ ಸರಕಾರಿ ಗೌರವ ಸಮರ್ಪಿಸಲಾಯಿತು. ತದನಂತರ ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಯವರು ಅಂತಿಮ ವಿಧಿವಿಧಾನ‌ವನ್ನು ನಡೆಸಿಕೊಟ್ಟರು.

ಇದಾದ ಬಳಿಕ ವಿಶ್ವರಾಜ್ ಸಕ್ಕರೆ ಕಾರ್ಖಾನೆ ಆವರಣದಿಂದ ಅಂತಿಮಯಾತ್ರೆ ಆರಂಭಗೊಂಡ ಅಂತಿಮಯಾತ್ರೆಯು ಬೆಲ್ಲದ ಬಾಗೇವಾಡಿ ಗ್ರಾಮದ ಮೂಲಕ ರಾತ್ರಿ 9.30 ಗಂಟೆಗೆ ತೋಟವನ್ನು ತಲುಪಿತು. ಧಾರ್ಮಿಕ ವಿಧಿವಿಧಾನದ ಬಳಿಕ ಅಂತ್ಯಕ್ರಿಯೆ ಮಾಡಲಾಯಿತು.
ಪಕ್ಷದ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಅಗಲಿದ ಮುಖಂಡನ ಅಂತಿಮ ದರ್ಶನ ಪಡೆದುಕೊಂಡು ಅಶ್ರುತರ್ಪಣೆ ಸಲ್ಲಿಸಿದರು.

ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

1961 ಮಾರ್ಚ್ 14 ರಂದು ಜನಿಸಿದ ಸಚಿವ ಕತ್ತಿ ಅವರು, ತಮ್ಮ ತಂದೆ ವಿಶ್ವನಾಥ್ ಕತ್ತಿ ಅವರ ಅಕಾಲಿಕ ನಿಧನದ ಬಳಿಕ 25 ನೇ ವಯಸ್ಸಿನಲ್ಲಿಯೇ ವಿಧಾನಸಭೆ ಪ್ರವೇಶಿಸಿ ನಂತರ ಎಂಟು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರು.
****

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *