Breaking News

ಆರ್ಡರ್ ಮಾಡಿದ್ರೆ ಸಾಕು, ಮನೆ ಬಾಗಿಲಿಗೆ ತರಕಾರಿ,ಕಿರಾಣಿ ಸಾಮಾನು, ಬರತೈತಿ…!!!

ಮನೆಬಾಗಿಲಿಗೆ ದಿನಸಿ ಸಾಮಗ್ರಿ, ತರಕಾರಿ: ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ

ಬೆಳಗಾವಿ, ಮಾ.೨೫(ಕರ್ನಾಟಕ ವಾರ್ತೆ): ರಾಷ್ಟ್ರದಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ನಾಗರಿಕರಿಗೆ ದೈನಂದಿನ ಅಗತ್ಯ ಸಾಮಗ್ರಿಗಳಾದ ದಿನಸಿ, ತರಕಾರಿ ಮತ್ತಿತರ ವಸ್ತುಗಳನ್ನು ಮನೆಬಾಗಿಲಿಗೆ ಕಳಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ (ಮಾ.೨೫) ದಿನಸಿ, ತರಕಾರಿ ವ್ಯಾಪಾರಸ್ಥರು ಹಾಗೂ ಹೋಟೆಲ್ ಮಾಲೀಕರ ಜತೆ ಸಭೆ ನಡೆಸಿದ ಬಳಿಕ ಈ ವಿಷಯ ತಿಳಿಸಿದರು.

ಕೋವಿಡ್-೧೯ ವೈರಾಣು ಹರಡುವಿಕೆ ತಡೆಗಟ್ಟಲು ವಾಹನಗಳ ಸಂಚಾರ ಸೇರಿದಂತೆ ಅನೇಕ ನಿರ್ಬಂಧ ವಿಧಿಸಲಾಗಿರುವುದರಿಂದ ನಾಗರಿಕರಿಗೆ ದೈನಂದಿನ ಬಳಕೆಯ ವಸ್ತುಗಳ ಕೊರತೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ.

ದಿನಸಿ ಅಂಗಡಿಗಳು ಯಥಾಪ್ರಕಾರ ತಮ್ಮ ವ್ಯಾಪಾರ-ವಹಿವಾಟು ನಡೆಸಬಹುದು. ಇದಲ್ಲದೇ ಜನರು ದೂರವಾಣಿ ಮೂಲಕ ತಮಗೆ ಅಗತ್ಯವಿರುವ ವಸ್ತುಗಳ ಪಟ್ಟಿ ನೀಡಿದರೆ ಆಯಾ ಪ್ರದೇಶದಲ್ಲಿರುವ ಸಂಬಂಧಿಸಿದ ಅಂಗಡಿಯವರು ಗ್ರಾಹಕರ ಮನೆಬಾಗಿಲಿಗೆ ದಿನಸಿ‌ ಸಾಮಗ್ರಿಗಳನ್ನು ತಲುಪಿಸಲಿದ್ದಾರೆ.

ತಳ್ಳುಗಾಡಿ ಮೂಲಕ ತರಕಾರಿ ಪೂರೈಕೆ:

ತರಕಾರಿ ಮಾರಾಟ ಸ್ಥಳಗಳಲ್ಲಿ ಜನರು ಗುಂಪುಗೂಡುವುದನ್ನು ತಡೆಗಟ್ಟುವ ಉದ್ದೇಶದಿಂದ ಒಂದು ನಿಗದಿತ ಸ್ಥಳದಲ್ಲಿ ತರಕಾರಿ ಮಾರಾಟವನ್ನು ನಿರ್ಬಂಧಿಸಲಾಗಿದೆ. ತಳ್ಳು ಗಾಡಿಗಳು ಅಥವಾ ಇತರೆ ಸರಕು ಸಾಗಾಣಿಕೆ ವಾಹನಗಳ ಮೂಲಕ ಪ್ರತಿಯೊಂದು ಬಡಾವಣೆ, ನಗರ ಹಾಗೂ ಮೊಹಲ್ಲಾಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿರುತ್ತದೆ. ಇದಕ್ಕೆ ಅನೇಕ ವ್ಯಾಪಾರಸ್ಥರು ಕೂಡ ಮುಂದಾಗಿದ್ದಾರೆ.
ಅದೇ ರೀತಿ ರಿಲಯನ್ಸ್ ಫ್ರೆಷ್, ಮೋರ್ ಮತ್ತಿತರ ಡಿಪಾರ್ಟಮೆಂಟಲ್ ಸ್ಟೋರ್ಸ್ ಗಳಲ್ಲಿ ಕೇವಲ ದಿನಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗ್ರಾಹಕರು ಕಡ್ಡಾಯವಾಗಿ ಸಾಮಾಜಿಕ ಅಂತರ‌ ಕಾಯ್ದುಕೊಳ್ಳುವ ಮೂಲಕ ಈ‌ ಮಳಿಗೆಗಳಲ್ಲೂ ದಿನಸಿ ಖರೀದಿಸಬಹುದು.

ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ ನಿರಾತಂಕ:

ನಗರದ ಎಲ್ಲ ಹೋಟೆಲ್ ಗಳಲ್ಲೂ ಪಾರ್ಸೆಲ್ ಸೇವೆ ಒದಗಿಸಲು ಅವಕಾಶ ಕಲ್ಪಿಸಲಾಗಿದೆ. ಹೋಟೆಲ್ ವ್ಯವಹಾರಕ್ಕೆ ನಿರ್ಬಂಧ ವಿಧಿಸಿಲ್ಲ. ಆದರೆ ಸ್ಥಳದಲ್ಲಿಯೇ ಆಹಾರ ಸೇವನೆಗೆ ಅವಕಾಶವಿಲ್ಲ; ಗ್ರಾಹಕರು ಪಾರ್ಸೆಲ್ ತೆಗೆದುಕೊಂಡು ಹೋಗಬಹುದು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಅವರು ಸ್ಪಷ್ಟಪಡಿಸಿದ್ದಾರೆ.

ನಾಳೆಯಿಂದ ಎಲ್ಲ ಹೋಟೆಲ್ ಗಳಲ್ಲಿ ಪಾರ್ಸೆಲ್ ಸೇವೆ ಒದಗಿಸಲು‌ ಹೋಟೆಲ್ ಮಾಲೀಕರು ಒಪ್ಪಿಕೊಂಡಿದ್ದಾರೆ.

ರಾಷ್ಟ್ರದಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ ದಿನಬಳಕೆ ವಸ್ತುಗಳನ್ನು ಖರೀದಿಸಲು ಯಾವುದೇ ತೊಂದರೆಯಾಗದಂತೆ ಪೂರೈಸಲು ಈ ಕ್ರಮ ಕೈಗೊಳ್ಳಲಾಗಿದೆ.
ನಾಗರಿಕರು‌ ಅನಗತ್ಯವಾಗಿ ಸಂಚರಿಸದೇ ಅಂಗಡಿಯವರಿಗೆ ದೂರವಾಣಿ ಮೂಲಕ ಸಾಧ್ಯವಾದಷ್ಟು ದಿನಸಿ‌ಯನ್ನು ಮನೆಗೆ ತರಿಸಿಕೊಳ್ಳಬೇಕು.
ಎಲ್ಲ ಅಗತ್ಯ ವಸ್ತುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಿರುವುದರಿಂದ ಯಾವುದೇ ಆತಂಕಕ್ಕೆ ಒಳಗಾಗದೇ ಅಗತ್ಯತೆ ಮತ್ತು ಆದ್ಯತೆ ಆಧಾರದ ಮೇಲೆ ಪಡೆದುಕೊಂಡು ಮನೆಯಲ್ಲಿಯೇ ಇರುವ ಮೂಲಕ ಕೋವಿಡ್-೧೯ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡಿದ್ದಾರೆ.
****

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *