‘ಬೆಳಗಾವಿ: ಗೋಕಾಕ ತಾಲೂಕು ಅರಭಾವಿಯ ವಿನಾಯಕ ಶಿವಲಿಂಗ ಉಪ್ಪಾರ ನಾಯಕ ನಟನಾಗಿ ನಟಿಸಿ ನಿರ್ದೇಶಿಸಿದ, ಶಿಕ್ಷಣದ ಮಹತ್ವದ ಕುರಿತು ಸಾಮಾಜಿಕ ಸಂದೇಶ ಹೊಂದಿರುವ ‘ಗುರುವೇ ದೇವರು’ ಕಿರುಚಿತ್ರಕ್ಕೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರಕಿದೆ.
ಚಿತ್ರದ ಉತ್ತಮ ನಿರ್ದೇಶನಕ್ಕೆ ಪ್ರಶಸ್ತಿ ಬಂದಿದೆ. ಫಿಲ್ಮ ಫೆಸ್ಟಿವಲ್ ಜಂಕ್ಷನ್ ವತಿಯಿಂದ ಇತ್ತೀಚಿಗೆ ಗ್ರೇಟ್ ಇಂಡಿಯನ್ ಶಾರ್ಟ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ ಕಾರ್ಯಕ್ರಮವನ್ನು ಕೊಲ್ಕತ್ತಾದಲ್ಲಿ ಆಯೋಜಿಸಲಾಗಿತ್ತು.
ಉತ್ತಮ ನಿರ್ದೇಶನ, ಉತ್ತಮ ಚಿತ್ರಕಥೆ, ಉತ್ತಮ ಚಿತ್ರ, ಉತ್ತಮ ಸಿನೆಮಾಟೋಗ್ರಾಫಿ ಮತ್ತು ಉತ್ತಮ ಎಡಿಟಿಂಗ್ ಹೀಗೆ ಐದು ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಪ್ರಶಸ್ತಿಗಾಗಿ ದೇಶದ ವಿವಿಧ ಭಾಗಗಳಿಂದ 11,000 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ‘ಗುರುವೇ ದೇವರು’ ಚಿತ್ರ ಉತ್ತಮ ನಿರ್ದೇಶನ ವಿಭಾಗದಲ್ಲಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದೆ.
“ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ತಮ್ಮ ಅಮೂಲ್ಯ ದಿನಗಳನ್ನು ವ್ಯರ್ಥ ಮಾಡಿಕೊಳ್ಳಬಾರದು ಎನ್ನುವ ಸಾಮಾಜಿಕ ಸಂದೇಶ ಚಿತ್ರದಲ್ಲಿದೆ. ಹಾಗೆ ಮಾಡಿದರೆ ಭವಿಷ್ಯದ ಮೇಲೆ ಆಗುವ ಪರಿಣಾಮಗಳನ್ನೂ ಚಿತ್ರದಲ್ಲಿ ವಿವರಿಸಲಾಗಿದೆ”, ಎಂದು ನಟ, ನಿರ್ದೇಶಕ ವಿನಾಯಕ ಉಪ್ಪಾರ ಹೇಳಿದರು.
ಅರಭಾವಿ ಗ್ರಾಮದಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಬೆಳಗಾವಿಯ ಕಿರಣ ಉಪ್ಪಾರ ಕ್ಯಾಮೆರಾ ಕೆಲಸ ನಿರ್ವಹಿಸಿದ್ದು, ಬೆಂಗಳೂರಿನ ಸತೀಶ ಕುಮಾರ ಬಿ ಎಡಿಟಿಂಗ್ ಮಾಡಿದ್ದಾರೆ. ವಿನಾಯಕ ಉಪ್ಪಾರ ಅವರ ಅಭಿನಯ ಮನೋಜ್ಞವಾಗಿ ಚಿತ್ರದಲ್ಲಿ ಮೂಡಿ ಬಂದಿದೆ.
ಉಳಿದಂತೆ ಮಂಜು, ಆಕಾಶ, ಪ್ರವೀಣ, ವಿನಾಯಕ ಪೂಜೇರಿ, ಬಾಳು ಪಾಟೀಲ, ಮಾರುತಿ ಇಳಿಗೇರ, ಸುಶಾಂಕ, ಸೂರಿ ಮೊದಲಾದವರು 48 ನಿಮಿಷಗಳ ಈ ಚಿತ್ರದಲ್ಲಿ ನಟಿಸಿದ್ದಾರೆ.