ನ.7ರಂದು ವಿನಯ ಕುಲಕರ್ಣಿ ಜನ್ಮದಿನಕ್ಕೆ ಲಕ್ಷಾಂತರ ಜನ; ಖರ್ಗೆ, ಸಿದ್ದರಾಮಯ್ಯ, ಡಿಕೆಶಿ, ದರ್ಶನ್ ಉಪಸ್ಥಿತಿ – ಲಕ್ಷ್ಮೀ ಹೆಬ್ಬಾಳಕರ್ ಮಾಹಿತಿ
ಕಿತ್ತೂರು – ನವೆಂಬರ್ 7ರಂದು ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಜನ್ಮ ದಿನವನ್ನು ಕಿತ್ತೂರಲ್ಲಿ ಅದ್ಧೂರಿಯಾಗಿ `ಜನ ನಮನ’ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಚಿತ್ರನಟ ದರ್ಶನ್ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತಿಳಿಸಿದ್ದಾರೆ.
ಕಿತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 7 ರಂದು ಸಂಜೆ 4 ಗಂಟೆಗೆ ಕಿತ್ತೂರಿನಲ್ಲಿ ಕಾರ್ಯಕ್ರಮ ನಡೆಯುವುದು. ಸತೀಶ್ ಜಾರಕಿಹೊಳಿ ಸೇರಿದಂತೆ ಎಲ್ಲ 6 ಜನ ಕೆಪಿಸಿಸಿ ಕಾರ್ಯಾಧ್ಯಕ್ಷರು, ರಾಜ್ಯದೆಲ್ಲೆಡೆಯಿಂದ ಮಾಜಿ ಸಚಿವರು, ಶಾಸಕರು, ಮುಖಂಡರು, ಹಲವಾರು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ನ್ಯಾಯಾಲಯದ ಆದೇಶದಂತೆ ಧಾರವಾಡ ಜಿಲ್ಲೆಗೆ ವಿನಯ ಕುಲಕರ್ಣಿ ಅವರು ಹೋಗಲು ನಿಷೇಧವಿರುವ ಕಾರಣ ಕಾರ್ಯಕ್ರಮವನ್ನು ಕಿತ್ತೂರು ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು 1.5 ಲಕ್ಷ ಅಭಿಮಾನಿಗಳು ಭಾಗವಹಿಸಲಿದ್ದಾರೆ ಎಂದರು.
ಬೃಹತ್ ವೇದಿಕೆ, ಜನರಿಗೆ ಕುಳಿತುಕೊಳ್ಳಲು ಸಮಾರು 50 ಸಾವಿರ ಖುರ್ಚಿಗಳನ್ನು ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಜಾನಪದ ಗೀತೆಗಳು, ಝಿ ವಾಹಿನಿಯ ಗಾಯಕರು, ನೃತ್ಯ ಕಲಾವಿದರು ಪಾಲ್ಗೊಳ್ಳುತ್ತಾರೆ ಎಂದು ಅವರು ವಿವರಿಸಿದರು.
ಜಿ.ಪಂ. ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ, ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ತಾ.ಪಂ. ಮಾಜಿ ಸದಸ್ಯ ಮುದಕಪ್ಪ ಮರಡಿ, ಬಿಷ್ಠಪ್ಪ ಶಿಂಧೆ, ಅಶೋಕ ಮಾಳಗಿ, ಆಶ್ಪಾಕ್ ಹವಾಲ್ದಾರ, ಬಸವರಾಜ ಸಂಗೊಳ್ಳಿ ಇದ್ದರು.