Breaking News

ಬೆಳಗಾವಿ ವಿಟಿಯು ,ಯುನಿವರ್ಸಿಟಿಯನ್ನು ಐಐಟಿ ಮಾದರಿಯಲ್ಲಿ ಸುಧಾರಣೆ ಮಾಡುವೆ.

*ಸಮಗ್ರ ಸುಧಾರಣೆ ಮೂಲಕ ಐಐಟಿ ದರ್ಜೆಗೆ ವಿಟಿಯು ಸುಧಾರಣೆ: ಅಶ್ವತ್ಥನಾರಾಯಣ*

ಬೆಳಗಾವಿ: ಜಾಗತಿಕ ಮಟ್ಟದ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಿ, ಜ್ಞಾನಾಧಾರಿತ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನೀತಿ ಮತ್ತು ಆಡಳಿತ ಎರಡನ್ನೂ ಸಮಗ್ರವಾಗಿ ಬದಲಾಯಿಸಬೇಕಾದ ಅಗತ್ಯವಿದೆ. ಈ ಮೂಲಕ ವಿ.ವಿ.ಯನ್ನು ಐಐಟಿ ಮಟ್ಟಕ್ಕೆ ಉನ್ನತೀಕರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ವಿಟಿಯು ಕುಲಪತಿ ಪ್ರೊ.ಕರಿಬಸಪ್ಪನವರು ವಿ.ಟಿ.ಯು.ವನ್ನು ಐಐಟಿ ಸ್ಥಾನಮಾನಕ್ಕೆ ಏರಿಸುವ ಸಂಬಂಧ ಸಲ್ಲಿಸಿದ ವರದಿಯನ್ನು ಶನಿವಾರ ಸ್ವೀಕರಿಸಿ, ಅವರು ಮಾತನಾಡಿದರು.

ಭಾರತದಲ್ಲಿ ಸದ್ಯಕ್ಕೆ ಇರುವ ಐಐಟಿ, ಐಐಎಸ್ಇಆರ್, ಐಐಐಟಿ ಮತ್ತು ಎನ್ಐಟಿಗಳಂತಹ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಿಗೆ ಸದ್ಯದ ಅಗತ್ಯವನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನವಭಾರತವನ್ನು ಕಟ್ಟಲು ಅಗಾಧ ಸಂಖ್ಯೆಯಲ್ಲಿ ಬೇಕಾಗಿರುವ ದಕ್ಷ, ಜ್ಞಾನಾರ್ಜನೆಯುಳ್ಳ, ವೃತ್ತಿಪರ ತರಬೇತಿ ಹೊಂದಿದ ಕೌಶಲ್ಯಪೂರ್ಣ ಸಿಬ್ಬಂದಿ ಅತ್ಯಗತ್ಯವಾಗಿ ಬೇಕಾಗಿದ್ದಾರೆ. ಇದನ್ನು ನನಸು ಮಾಡಲು ವಿ.ಟಿ.ಯು.ವನ್ನು ಐಐಟಿಗೆ ಸರಿಸಮಾನವಾಗಿ ಬೆಳೆಸಲಾಗುವುದು ಎಂದು ಅವರು ತಿಳಿಸಿದರು.

ವಿಟಿಯುನಲ್ಲಿ ಇನ್ನುಮುಂದೆ ಗುಣಮಟ್ಟ ಮತ್ತು ಸಾಮರ್ಥ್ಯವೃದ್ಧಿ ಎರಡನ್ನೂ ಕಡ್ಡಾಯಗೊಳಿಸಲಾಗುವುದು. ಜತೆಗೆ, ಬೋಧನೆ ಮತ್ತು ಸಮಗ್ರ ಸಂಶೋಧನಾ ಚಟುವಟಿಕೆಗಳು ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವಂತಾಗಲು ತಂತ್ರಜ್ಞಾನವನ್ನು ಅಳವಡಿಸಲಾಗುವುದು ಎಂದು ಅವರು ನುಡಿದರು.

ವಿಟಿಯು ಅಥವಾ ಬೇರಾವುದೇ ವೃತ್ತಿಪರ ಶಿಕ್ಷಣ ಸಂಸ್ಥೆಗಳೊಂದಿಗೆ ಇದುವರೆಗೂ ಉದ್ಯಮಗಳು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರಲಿಲ್ಲ. ಆದರೆ, ಎನ್ಇಪಿಯಲ್ಲಿ ಇದಕ್ಕೆ ಆದ್ಯತೆ ಕೊಡಲಾಗಿದೆ. ಇದರಂತೆ, ಉದ್ಯಮಿಗಳೇ ನೇರವಾಗಿ ಬೋಧನಾ ಮತ್ತು ಸಂಶೋಧನಾ ಚಟುವಟಿಕೆಗಳಲ್ಲಿ ಕೈಜೋಡಿಸಲು ಮುಕ್ತ ಅವಕಾಶ ಕೊಡಲಾಗಿದೆ ಎಂದು ಅವರು ವಿವರಿಸಿದರು.

ಪ್ರಧಾನಿ ಮೋದಿಯವರು ಆತ್ಮನಿರ್ಭರ ಭಾರತ ಮತ್ತು 5 ಟ್ರಿಲಿಯನ್ ಡಾಲರ್ ಸಾಮರ್ಥ್ಯದ ಆರ್ಥಿಕತೆಯ ಬೆಳವಣಿಗೆಯ ಗುರಿ ಇಟ್ಟುಕೊಂಡಿದ್ದಾರೆ. ಇದು ಸಾಧ್ಯವಾಗಬೇಕೆಂದರೆ, ಸುಸ್ಥಿರ ಅಭಿವೃದ್ಧಿಯ ಗುರಿ ಈಡೇರಬೇಕು. ಜತೆಗೆ ಭಾರತದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಪ್ರಮಾಣ ಮತ್ತು ಗುಣಮಟ್ಟ ಎರಡೂ ಸುಧಾರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಸದ್ಯಕ್ಕೆ ದೇಶದ ಜಿಡಿಪಿಯ ಶೇ.0.69ರಷ್ಟು ಅತ್ಯಲ್ಪ ಪ್ರಮಾಣದ ಹಣವನ್ನು ಸಂಶೋಧನೆಗೆ ಮೀಸಲಾಗಿ ಇಡಲಾಗುತ್ತಿದೆ. ಈಗ ಕೇಂದ್ರ ಸರಕಾರವು `ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ವನ್ನು ಅಸ್ತಿತ್ವಕ್ಕೆ ತರುತ್ತಿದ್ದು, ಸಂಶೋಧನಾ ಚಟುವಟಿಕೆಗಳಿಗೆ ಸಾಕಷ್ಟು ಅನುದಾನ ಕೊಡಲಾಗುವುದು. ಒಟ್ಟಿನಲ್ಲಿ , ಉತ್ಪಾದನಾ ವಲಯದಲ್ಲಿ ನಾವು ಆದಷ್ಟು ತ್ವರಿತವಾಗಿ 10 ಕೋಟಿ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ ಎಂದು ಸಚಿವರು ಪ್ರತಿಪಾದಿಸಿದರು.

ಭಾರತವು ಸದ್ಯಕ್ಕೆ ಜಗತ್ತಿನಲ್ಲಿ ಆರನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದೆ. ಇನ್ನು ಮೂರು ವರ್ಷಗಳಲ್ಲಿ ಇದರಲ್ಲಿ ಮೂರನೇ ಸ್ಥಾನಕ್ಕೇರುವ ಗುರಿ ಇಟ್ಟುಕೊಳ್ಳಲಾಗಿದೆ. ನಮ್ಮ ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆಯು ಭಾರತವನ್ನು ಜಾಗತಿಕ ವ್ಯವಸ್ಥೆಯಲ್ಲಿ ಆರ್ಥಿಕವಾಗಿ ದೈತ್ಯಶಕ್ತಿಯನ್ನಾಗಿ ಮಾಡಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *