ಸುವರ್ಣ ವಿಧಾನಸೌಧದ ಎದುರು ಯೋಗಾ ಯೋಗ…!!

ಬೆಳಗಾವಿ-ಮಾನವೀಯತೆಗಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಇಲ್ಲಿನ ಸುವರ್ಣ ವಿಧಾನಸೌಧದ ಮುಂಭಾಗದ ಆವರಣದಲ್ಲಿ ಮಂಗಳವಾರ (ಜೂ.21) 8ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಆಯುಷ್ ಇಲಾಖೆ, ಯುವ ಸಬಲೀಕರಣ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ನೆಹರೂ ಯುವ ಕೇಂದ್ರ ಹಾಗೂ ಪತಂಜಲಿ ಯೋಗ ಸಮಿತಿಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಸಂಸದರಾದ ಮಂಗಳ ಅಂಗಡಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪೊಲೀಸ್ ಆಯುಕ್ತರಾದ ಡಾ.ಎಂ.ಬಿ.ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರೇಗೌಡ, ಜಿಲ್ಲಾ ಆಯುಷ್ ಅಧಿಕಾರಿಗಳಾದ ಶ್ರೀಕಾಂತ ಸುಣಧೋಳಿ, ಶಂಕರಗೌಡ ಪಾಟೀಲ ಸೇರಿದಂತೆ ಗಣ್ಯರು ಸಸಿಗೆ ನೀರೆರೆಯುವ ಮೂಲಕ ಯೋಗ ದಿನಾಚರಣೆಗೆ ಚಾಲನೆ ನೀಡಿದರು.

ಚಾಲನ ಕ್ರಿಯೆಗಳು, ಸ್ಕಂದ ಸಂಚಾಲನೆ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋನಾಸನ, ಭದ್ರಾಸನ, ಭುಜಂಗಾಸನ, ಶಲಭಾಸನ, ಉತ್ತಾನ ಪಾದಾಸನ, ಅರ್ಧ ಹಲಾಸನ, ಸೇರಿದಂತೆ ವಿವಿಧ ಆಸನಗಳನ್ನು ಹಾಗೂ ಪ್ರಾಣಾಯಾಮವನ್ನು ಪ್ರದರ್ಶಿಸಲಾಯಿತು.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಯೋಗ ಶಿಕ್ಷಕರಾಗಿರುವ ಅಂತರಾಷ್ಟ್ರೀಯ ಯೋಗ ರೆಫರಿಯಾಗಿರುವ ಸಂಕಲ್ಪ ಯೋಗ ಶಾಹುನಗರದ ಆರತಿ ಸಂಕೇಶ್ವರಿ ಅವರು ಯೋಗಾಸನಗಳನ್ನು ಹೇಳಿಕೊಟ್ಟರು.
ಇದಲ್ಲದೇ ಆರತಿ ಸಂಕೇಶ್ವರಿ ಅವರು ಯೋಗ ಸಂಕಲ್ಪವನ್ನು ಮತ್ತು ಪ್ರಾರ್ಥನೆಯನ್ನು ಕೂಡ ಬೋಧಿಸಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಸುವರ್ಣ ಪದಕ ವಿಜೇತೆ ಬಾಲಕಿ ದಕ್ಷಾ ಬೇವಿನಮರದ ಭರತನಾಟ್ಯದ ಮೂಲಕ ಅದ್ಭುತ ಯೋಗವನ್ನು ಪ್ರದರ್ಶಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾದಳು. ಇದಾದ ಬಳಿಕ ಅಥರ್ವ ಸವನೂರ ನಾಟ್ಯ ಪ್ರದರ್ಶಿಸಿದರು.
ಜೈನ್ ಹೆರಿಟೇಜ್ ಶಾಲೆ ಬಿದ್ಯಾರ್ಥಿಗಳ ತಂಡ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನಸೆಳೆಯಿತು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು.

ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಮಾತನಾಡಿ, ಎಲ್ಲರೂ ಪ್ರತಿದಿನ ಯೋಗ ಮಾಡುವ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು.
ಎಲ್ಲರೂ ಉತ್ತಮ ಆರೋಗ್ಯ ಹೊಂದುವ ಮೂಲಕ ಸದೃಢ ದೇಶ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಗಣ್ಯರು, ವಿವಿಧ ಇಲಾಖೆಯ ಅಧಿಕಾರಿಗಳು, ರಾಣಿ ಚೆನ್ನಮ್ಮ ವಿವಿ, ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ ಗಳು, ಸೇವಾದಳ, ನೆಹರೂ ಯುವ ಕೇಂದ್ರ ಮತ್ತು ಪತಂಜಲಿ ಯೋಗ ಸಮಿತಿಯ ಸದಸ್ಯರು‌, ಪದಾಧಿಕಾರಿಗಳು ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು.
***

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *