ಬೆಳಗಾವಿ-ಚಳಿಗಾಲದ ಅಧಿವೇಶನದ ಮೊದಲ ದಿನವೇ ವಿವಿಧ ರೈತ ಸಂಘಟನೆಗಳು ಸೇರಿದಂತೆ ವಿವಧ ಸಂಘಟನೆಗಳು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸಿದರು
ವಸತಿ ನಿಲಯಗಳ ಡಿ ಗ್ರುಪ್ ನೌಕರರ ಸೇವೆಯನ್ನು ಖಾಯಂ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ಸದಸ್ಯರು ಸುವರ್ಣ ಉದ್ಯಾನ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು ಐನೂರಕ್ಕೂ ಹೆಚ್ಚು ಕಾರ್ಮಿಕರು ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಎಐಯುಟಿಯುಸಿ ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ ನೂರಾರು ಸದಸ್ಯರು ಸುವರ್ಣ ಉದ್ಯಾನದಲ್ಲಿ ಪ್ರತಿಭಟನಾ ಧರಣಿ ನಡೆಸಿದರು. 1985 ರ ಅವಿಭಜಿತ ಸಮಾಜ ಕಲ್ಯಾಣ ಇಲಾಖೆ ನಿಯಮದಂತೆ ಹಾಸ್ಟೆಲ್ ಗಳ ಅಡುಗೆ ಕಾರ್ಮಿಕರಿಗೆ ವಿದ್ಯಾರ್ಹತೆ ಮಾನದಂಡ ಇರಲಿಲ್ಲ. ಆದರೆ ಸರ್ಕಾರ ಈ ಹಿಂದಿನ ನಿಯಮಾವಳಿಗಳನ್ನು ತಿದ್ದುಪಡಿ ಮಾಡಿ ಹಾಸ್ಟೆಲ್ಗಳ ಅಡುಗೆ ಕಾರ್ಮಿಕರಿಗೆ ಹಾಗೂ ಸಹಾಯಕರ ನೇಮಕಾತಿಗೆ ಕನಿಷ್ಟ 10 ನೇ ತರಗತಿವರೆಗೆ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನಿಷ್ಟ ಮೂರು ವರ್ಷ ಅನುಭವ ಹೊಂದಿರಬೇಕು ಎಂದು ನಿಯಮ ಮಾಡಿದೆ. ಈ ನಿಯಮವನ್ನು ರೂಪಿಸುವಾಗ ಸರ್ಕಾರ ಇದಕ್ಕೂ ಮುಂಚೆ ಹಾಸ್ಟೆಲ್ಗಳಲ್ಲಿ 20 ವರ್ಷಗಳ ಕಾಲ ಕೆಲಸ ಮಾಡಿದ ಕಾರ್ಮಿಕರ ಹಿತದ ಬಗ್ಗೆ ಚಿಂತಿಸಬೇಕಿತ್ತು. ಮತ್ತು ಈಗಿರುವ 15 ಸಾವಿರ ಹಾಸ್ಟೆಲ್ ಅಡುಗೆ ಕಾರ್ಮಿಕರ ಸೇವೆಯನ್ನು ಖಾಯಂ ಮಾಡದೇ ಸರ್ಕಾರ ಹೊಸ ಕಾರ್ಮಿಕರನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಇದನ್ನು ಪ್ರಶ್ನಿಸಿ ಮಾರ್ಚ್ 2 ರಂದು ಬೆಂಗಳೂರಿನ ಫ್ರೀಡಂ ಪಾರ್ಕ ನಲ್ಲಿ ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದಿದ್ದ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಹೊಸದಾಗಿ ಜಾರಿ ಮಾಡಿದ ನೇಮಕಾತಿ ಆದೇಶವನ್ನು ಕೂಡಲೇ ಹಿಂಪಡೆಯುತ್ತೇನೆ ಎಂದಿದ್ದರು. ಮತ್ತು ಕಾರ್ಮಿಕರ ಸಮಸ್ಯೆಯ ಬಗ್ಗೆ ಕೂಡಲೇ ಸಭೆ ಕರೆಯಲಾಗುವುದು ಎಂದು ಹೇಳಿದ್ದರು. ಆದರೆ ಇದ್ಯಾವ ಭರವಸೆಯೂ ಇದುವರೆಗೆ ಈಡೇರಿಲ್ಲ. ಹಾಸ್ಟೆಲ್ ನೌಕಕರಿಗೆ ಯಾವುದೇ ವಿದ್ಯಾರ್ಹತೆ ಬೇಕಾಗಿಲ್ಲ ಎಂಬುದನ್ನು ಸರ್ಕಾರವೇ ನಿಯಮ ಮಾಡಿದೆ ಆದರೂ ಈಗ ಹಾಸ್ಟೆಲ್ ಅಡುಗೆ ಕಾರ್ಮಿಕರಿಗೆ ಸರ್ಕಾರ ಯಾಕೆ ವಿದ್ಯಾರ್ಹತೆ ಕೇಳುತ್ತಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸೋಮಶೇಖರ ಯಾದಗಿರಿ ಪ್ರಶ್ನಿಸಿದರು
ಸರ್ಕಾರ ಕೂಡಲೇ ವಸತಿ ನಿಲಯಗಳ ಡಿ ಗ್ರುಪ್ ನೌಕರರ ಸೇವೆಯನ್ನು ಖಾಯಂ ಮಾಡಬೇಕು ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನ ನೀತಿಯನ್ನು ಈ ಕಾರ್ಮಿಕರಿಗೂ ಅನ್ವಯಿಸುವಂತೆ ಮಾಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ.