ಬೆಳಗಾವಿ: ಪ್ರತಿ ಸಲವೂ ನನ್ನ ವಿರುದ್ಧ ವಾಗ್ದಾಳಿ ನಡೆಸುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ನನ್ನ ಮೇಲೆ ತುಂಬಾ ಪ್ರೀತಿ ಇರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ನನ್ನ ಮೇಲೆ ತುಂಬಾ ಪ್ರೀತಿ ಇರಬೇಕು. ನಿನ್ನೆ ವಿಧಾನ ಪರಿಷತ್ನಲ್ಲಿ ಗಲಾಟೆಯಾದ ವಿಚಾರಕ್ಕೆ ಸಂಬಂಧಿಸಿ, ಬಿಜೆಪಿ ಮತ್ತು ಸರ್ಕಾರ ಕಾನೂನು ಹೋರಾಟಕ್ಕೆ ಪ್ರಯತ್ನ ಮಾಡಿದೆ. ಕಾನೂನು ತಜ್ಞರ ಸಲಹೆ ಪಡೆದು ಮೊದಲ ಬಾರಿಗೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದೇವೆ. ಕಾಂಗ್ರೆಸ್ ದೇಶದಲ್ಲಿ, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿರುವುದಕ್ಕೆ ಗೂಂಡಾಗಿರಿ ಮಾಡುತ್ತಿದೆ ಎಂದರು.
ಇತಿಹಾಸದಲ್ಲಿ ಕಾಂಗ್ರೆಸ್ ಮಾಡಿರುವ ಗೂಂಡಾಗಿರಿ ಬಹಳಷ್ಟಿದೆ. ಹದಿನೇಳು ಜನ ಶಾಸಕರು ಬಿಜೆಪಿಗೆ ಬರುವ ಸಂದರ್ಭದಲ್ಲಿ ವಿಧಾನಸಭೆಯಲ್ಲೇ ಸುಧಾಕರ್ ಮೇಲೆ ಹಲ್ಲೆ ಮಾಡಿ ಗೂಂಡಾಗಿರಿಯನ್ನು ವಿಧಾನಸಭೆಗೆ ತರಲಾಗಿತ್ತು. ದೇಶದ ಇತಿಹಾಸದಲ್ಲಿಯೇ ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಗೂಂಡಾಗಿರಿ ಮಾಡಿದೆ. ಉಪಸಭಾಪತಿಯನ್ನು ಎಳೆದು ಹೊರ ಹಾಕುವುದರ ಮೂಲಕ ಗೂಂಡಾಗಿರಿಯನ್ನು ವಿಧಾನ ಪರಿಷತ್ ಒಳಗೆ ತರಲಾಗಿದೆ. ಬಿಜೆಪಿ ಸಭಾಪತಿ ಮೇಲೆ ಅವಿಶ್ವಾಸ ಮಂಡನೆ ನಿರ್ಣಯ ಮಂಡಿಸಲಾಗಿತ್ತು. ಒಂದು ಸಾರಿ ಅವಿಶ್ವಾಸ ಮಂಡನೆಯಾದ ಬಳಿಕ ಸಭಾಪತಿ ಸ್ಥಾನದಲ್ಲಿ ಕೂರಬಾರದು. ಹಾಗೇನಾದ್ರೂ ಇದ್ದರೆ ಕಾನೂನು ಹೋರಾಟ ಮಾಡಬೇಕಿತ್ತು ಎಂದರು. ಕಾಂಗ್ರೆಸ್ ಯಾವತ್ತೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಹೊಂದಿಲ್ಲ. ಹಳೇ ಕಾಂಗ್ರೆಸ್ ಈಗಿನ ಕಾಂಗ್ರೆಸ್ ಬೇರೆ ಬೇರೆಯಾಗಿದೆ. ಅಧಿಕಾರ ಇಲ್ಲದಿದ್ದಾಗ ಬೆಂಕಿ ಹಾಕಿ, ಗಲಭೆ ಸೃಷ್ಟಿಸಿರುವ ಹತ್ತಾರು ಉದಾಹರಣೆಗಳಿವೆ. ಮೋದಿ ಸರ್ಕಾರ ಬಂದ ಮೇಲೆ ಹಲವಾರು ಗಲಭೆ ಸೃಷ್ಟಿಸಲು ಕಾಂಗ್ರೆಸ್ನವರು ಯತ್ನ ಮಾಡಿದ್ದು, ಅದು ಯಶಸ್ವಿಯಾಗಿಲ್ಲ. ಕಾಂಗ್ರೆಸ್ನ ಹೋರಾಟಕ್ಕೆ ಜನ ಬೆಂಬಲ ಇಲ್ಲ. ಬೆಂಕಿ ಹಾಕುವ ಪ್ರವೃತ್ತಿ ಕಾಂಗ್ರೆಸ್ನದು. ಅಧಿಕಾರ ಇದ್ದಾಗ ಭ್ರಷ್ಟಾಚಾರ, ಇಲ್ಲದಿದ್ದಾಗ ಬೆಂಕಿ ಹಾಕುವುದೇ ಕಾಂಗ್ರೆಸ್ ಕೆಲಸ ಎಂದು ಕಿಡಿಕಾರಿದರು.
ಡಿ. 20ರಂದು ಬೆಂಗಳೂರಿನಲ್ಲಿ ಬಿಜೆಪಿ ಪದಾಧಿಕಾರಿಗಳ ಸಭೆ ನಡೆಯಲಿದೆ. ಸಭೆಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಗೆ ಆಹ್ವಾನ ನೀಡಲಾಗಿದೆ. ಸಂಪುಟ ವಿಸ್ತರಣೆ ಕುರಿತು ಸಿಎಂ ಮತ್ತು ಕೇಂದ್ರದ ನಾಯಕರು ಚರ್ಚೆ ಮಾಡುತ್ತಾರೆ. ಸಂಪುಟ ವಿಸ್ತರಣೆ ಬಗ್ಗೆ ರಾಷ್ಟ್ರೀಯ ನಾಯಕರ ಜತೆ ಚರ್ಚಿಸುವುದು ನಮ್ಮಲ್ಲಿರುವ ವ್ಯವಸ್ಥೆ. ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿಗಳು ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದರು.