Home / Breaking News / ಇವತ್ತು ಬೆಳಗಾವಿಯಲ್ಲಿ ಉದ್ಯೋಗ ಮೇಳ ಐತಿ…!!

ಇವತ್ತು ಬೆಳಗಾವಿಯಲ್ಲಿ ಉದ್ಯೋಗ ಮೇಳ ಐತಿ…!!

ಇವತ್ತು ಬೆಳಗಾವಿಯಲ್ಲಿ ಉದ್ಯೋಗ ಮೇಳ, `ಸಕಲರಿಗೂ ಉದ್ಯೋಗ’ ಕಾರ್ಯಕ್ರಮಕ್ಕೆ ಸಿಎಂ ಚಾಲನೆ*

* ಕ್ವೆಸ್ ಕಾರ್ಪ್ ಜತೆ ಒಡಂಬಡಿಕೆ;* *25 ಸಾವಿರ ಮಂದಿಗೆ ಉದ್ಯೋಗ*

* 30 ಸಾವಿರ ಗ್ರಾಮೀಣ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಲಿರುವ `ನಾಂದಿ ಫೌಂಡೇಶನ್’

*ಜನವರಿಯಲ್ಲಿ ಮತ್ತೊಂದು ಉದ್ಯೋಗ ಮೇಳ*

ಬೆಳಗಾವಿ: ಇಲ್ಲಿನ ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಎಂಜಿನಿಯರಿಂಗ್, ಡಿಪ್ಲೊಮಾ ಮತ್ತು ಐಟಿಐ ಪದವೀಧರರಿಗೆ ಗುರುವಾರ  ಉದ್ಯೋಗ ಮೇಳ ನಡೆಯಲಿದ್ದು, ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಜಾರಿಗೆ ಬರಲಿರುವ `ಸಕಲರಿಗೂ ಉದ್ಯೋಗ’ (ಜಾಬ್ ಫಾರ್ ಆಲ್) ಕಾರ್ಯಕ್ರಮಕ್ಕೆ ಕೂಡ ಚಾಲನೆ ನೀಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಕಲರಿಗೂ ಉದ್ಯೋಗ’ ಕಾರ್ಯಕ್ರಮದಡಿ ಕ್ವೆಸ್ ಕಾರ್ಪ್ ಕಂಪನಿಯು 25 ಸಾವಿರ ಜನರಿಗೆ ಉದ್ಯೋಗ ಒದಗಿಸುವ ಸಂಬಂಧ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಸಮೂಹದ `ನಾಂದಿ ಫೌಂಡೇಶನ್’ ಪೈಥಾನ್, ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಸಂವಹನ ಕಲೆಗಳಲ್ಲಿ ಗ್ರಾಮೀಣ ಪ್ರದೇಶಗಳ 30 ಸಾವಿರ ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡುವ ಸಂಬಂಧ ಕೌಶಲ್ಯಾಭಿವೃದ್ಧಿ ನಿಗಮದೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಿವೆ ಎಂದರು.

ಮಾಹಿತಿ ತಂತ್ರಜ್ಞಾನ (ಐಟಿ), ಜೈವಿಕ ತಂತ್ರಜ್ಞಾನ (ಬಿಟಿ), ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಗುರುವಾರ ಬೆಳಿಗ್ಗೆ 9.30 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೇಳದ ಉದ್ಘಾಟನೆ ಜತೆಗೆ ಈ ಕಾರ್ಯಕ್ರಮಕ್ಕೂ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಅವರು ಹೇಳಿದರು.

ಬೆಳಗಾವಿ ಉದ್ಯೋಗ ಮೇಳವನ್ನು ಅತ್ಯಂತ ಕ್ಷಿಪ್ರ ಗತಿಯಲ್ಲಿ ಆಯೋಜಿಸಲಾಗಿದ್ದು, ಜನವರಿ ಮೂರನೇ ವಾರದಲ್ಲಿ ಇಲ್ಲಿ ಮತ್ತೊಂದು ಉದ್ಯೋಗ ಮೇಳವನ್ನು ಏರ್ಪಡಿಸಲಾಗುವುದು. ಮೇಳದಲ್ಲಿ 57 ಕಂಪನಿಗಳು ನೇರವಾಗಿ ಮತ್ತು 14 ಕಂಪನಿಗಳು ವರ್ಚುಯಲ್ ರೂಪದಲ್ಲಿ ಭಾಗವಹಿಸುತ್ತಿವೆ. ಈ ಕಂಪನಿಗಳಲ್ಲಿ 4,500ಕ್ಕೂ ಹೆಚ್ಚು ಉದ್ಯೋಗಾವಕಾಶಗಳಿವೆ. ವರ್ಚುಯಲ್ ರೂಪದಲ್ಲಿ ಭಾಗವಹಿಸುತ್ತಿರುವ ಕಂಪನಿಗಳಿಗೆ ಧಾರವಾಡದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಅಭ್ಯರ್ಥಿಗಳು `ಸ್ಕಿಲ್ ಕನೆಕ್ಟ್’ ಪೋರ್ಟಲ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, 600ಕ್ಕೂ ಹೆಚ್ಚು ಆಸಕ್ತರು ತಮ್ಮ ಸ್ವವಿವರಗಳನ್ನು ಇ-ಮೇಲ್ ಮೂಲಕ ಕಳಿಸಿ ಕೊಟ್ಟಿದ್ದಾರೆ. ಮೇಳಕ್ಕೆ ಬರುವವರಿಗೆ ಬೆಳಗಾವಿಯ ಬಸ್ ಮತ್ತು ರೈಲು ನಿಲ್ದಾಣಗಳಿಂದ ಗೋಗಟೆ ಎಂಜಿನಿಯರಿಂಗ್ ಕಾಲೇಜಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಇವರಿಗೆ ಅಗತ್ಯ ಮಾರ್ಗದರ್ಶನ ನೀಡಲು 100 ಸ್ವಯಂ ಸೇವಕರ ತಂಡ ಇರಲಿದೆ ಎಂದು ಅವರು ಹೇಳಿದರು.

ಅಭ್ಯರ್ಥಿಗಳು ಗರಿಷ್ಠ 3 ಕಂಪನಿಗಳ ಸಂದರ್ಶನ ಎದುರಿಸಲು ಅವಕಾಶವಿರಲಿದೆ. ಮೊದಲ ಸುತ್ತಿನಲ್ಲಿ ಆಯ್ಕೆಯಾದವರಿಗೆ ಶುಕ್ರವಾರ (ಡಿ.24) ಅಂತಿಮ ಸುತ್ತಿನ ಸಂದರ್ಶನ ನಡೆಯಲಿದೆ. ಕಂಪನಿಗಳು ಅಭ್ಯರ್ಥಿಗಳನ್ನು ತಿರಸ್ಕರಿಸಿದರೆ ಅದಕ್ಕೆ ಕಾರಣಗಳನ್ನು ಕೊಡಬೇಕು. ಇಂತಹವರಿಗೆ ಸೂಕ್ತ ಕೌಶಲ್ಯಗಳನ್ನು ಒದಗಿಸುವುದೇ `ಸಕಲರಿಗೂ ಉದ್ಯೋಗ’ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.

ಶಾಸಕ ಅಭಯ ಪಾಟೀಲ್, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಈ ಸಂದರ್ಭದಲ್ಲಿ ಹಾಜರಿದ್ದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *