ಬೆಳಗಾವಿ-ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಯಾರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬಹುದು ಎನ್ನುವದು,ತರ್ಕಕ್ಕೆ ನಿಲಕದ್ದು,ಇದನ್ನು ಊಹೆ ಮಾಡಲು ಕೂಡಾ ಸಾಧ್ಯವಿಲ್ಲ.
ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ಚರ್ಚೆ ನಿರಂತರವಾಗಿ ನಡೆಯುತ್ತಲೇ ಇದೆ,ಈ ಚರ್ಚೆಯಲ್ಲಿ ದಿನಕ್ಕೊಂದು ಹೆಸರು ತೇಲಿ ಬರುತ್ತಲೇ ಇದೆ,ಆದ್ರೆ ಇತ್ತೀಚಿಗೆ ಈ ಪಟ್ಟಿಯಲ್ಲಿ ಮೊತ್ತೊಂದು ಹೆಸರು ಸೇರ್ಪಡೆಯಾಗಿದೆ.
ಸದನದ ಒಳಗೆ ,ಹೊರಗೆ,ಸಿಎಂ ವಿರುದ್ಧ ದಿನಕ್ಕೊಂದು ಬಾಂಬ್ ಸಿಡಿಸಿ ರಾಜ್ಯದ ಗಮನ ಸೆಳೆದಿರುವ ಬಿಜೆಪಿಯ ರೆಬಲ್ ಸ್ಟಾರ್ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸಮಾಧಾನ ಮಾಡುವದು,ಈಗ ಸಿಎಂ ಯಡಿಯೂರಪ್ಪ ಅವರ ಮುಂದಿರುವ ದೊಡ್ಡ ಸವಾಲು,ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಿಲ್ಲಿಸಿ,ಗೆಲ್ಲಿಸಿ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡುವ ಮೂಲಕ ಯತ್ನಾಳ ಅವರನ್ನು ದೆಹಲಿಗೆ ಕಳುಹಿಸಲು ಸಿಎಂ ಯಡಿಯೂರಪ್ಪ ಅವರು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆಂಬ ಸುದ್ಧಿ ಈಗ ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ತಲೆನೋವು ಆಗಿರುವ, ಬಿಜೆಪಿ ಸರ್ಕಾರದ ವಿರುದ್ಧ ಪದೇ ಪದೇ ಟೀಕೆಸುತ್ತ ಬಂದಿರುವ ವಿಜಾಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ.
ಉತ್ತರ ಕರ್ನಾಟಕದ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರಭಾವಿ ನಾಯಕರಾಗಿರುವ ಬಸನಗೌಡ ಪಾಟೀಲ ಯತ್ನಾಳ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿದ್ದಾರೆ.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ
ಬೆಳೆಯುತ್ತಲೇ ಸಾಗಿದೆ. ಈ ಪಟ್ಟಿಯಲ್ಲಿ ಇದೀಗ ಶಾಸಕ ಬಸನಗೌಡ ಪಾಟೀಲ ಹೆಸರು ಸೇರ್ಪಡೆಯಾಗಿರುವುದು ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಬಸನಗೌಡ ಪಾಟೀಲ ಯತ್ನಾಳ ಗೆಲ್ಲಿಸಿದರೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಯತ್ನಾಳ ಅವರನ್ನು ಬೆಳಗಾವಿಯಿಂದ ದಿಲ್ಲಿಗೆ ಕಳುಹಿಸುವ ಸಿದ್ಧತೆಗಳು ನಡೆದಿವೆ ಎನ್ನಲಾಗಿದೆ. ಇದರಿಂದಾಗಿ ಸಿಎಂ ಯಡಿಯೂರಪ್ಪ ಅವರ ಹಾದಿ ಸುಲಭವಾಗಲಿದೆ. ಪದೇ ಪದೇ ಪಕ್ಷಕ್ಕಾಗುತ್ತಿರುವ ಮುಜುಗುರವನ್ನು ತಪ್ಪಿಸುವ ಲೆಕ್ಕಾಚಾರವೂ ಇದೆ.
ಒಟ್ಟಾರೆ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಈಗ ತೀವ್ರ ಕುತೂಹಲ ಕೆರಳಿಸಿದ್ದು,ಬಿಜೆಪಿ ಟಿಕೆಟ್ ಗಾಗಿ ಆಕಾಂಕ್ಷಿಗಳ ನಡುವೆ ತೀವ್ರ ಪೈಪೋಟಿ ನಡೆದಿರುವ ಬೆನ್ನಲ್ಲಿಯೇ, ಯತ್ನಾಳ ಗೌಡರ ಹೆಸರು ಗೂಳಿ ನುಗ್ಗಿದಂತೆ ನುಗ್ಗಿದ್ದು ಸತ್ಯ…