Home / Breaking News / ಕಿತ್ತೂರಿನ ಕ್ರಾಂತಿ, ಚನ್ನಮ್ಮನನ್ನು ಸ್ಮರಿಸಿದ ಪ್ರಧಾನಮಂತ್ರಿಗಳು

ಕಿತ್ತೂರಿನ ಕ್ರಾಂತಿ, ಚನ್ನಮ್ಮನನ್ನು ಸ್ಮರಿಸಿದ ಪ್ರಧಾನಮಂತ್ರಿಗಳು

ಬೆಳಗಾ): ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಗೆ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಾಲನೆ ನೀಡಿದರು.

ಬೆಳಗಾವಿಯ ಚನ್ನಮ್ಮನ ಕಿತ್ತೂರು, ಮಂಡ್ಯದ ಶಿವಪುರ ಹಾಗೂ ಚಿಕ್ಕಬಳ್ಳಾಪುರ್ ವಿಧುರಾಶ್ವತ್ಥ ಸೇರಿದಂತೆ ದೇಶದ 75 ಸ್ಥಳಗಳಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ವರ್ಚುವಲ್ ವೇದಿಕೆಯ ಮೂಲಕ ಅವರು ಚಾಲನೆ ನೀಡಿದರು.

ಗುಜರಾತ್ ರಾಜ್ಯದ ಅಹ್ಮದಾಬಾದ್ ನಲ್ಲಿರುವ ಸಾಬರಮತಿ ಆಶ್ರಮಕ್ಕೆ ಆಗಮಿಸಿ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಹಾಗೂ ಚರಕಕ್ಕೆ ಮಾಲಾರ್ಪಣೆ ಮಾಡಿದರು.

ನಂತರ ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವ ಕುರಿತ ಕಿರುಚಿತ್ರ, ವಿವಿಧತೆಯಯಲ್ಲಿ ಏಕತೆ ಸಾರುವ ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ದೇಶದ ವಿಭಿನ್ನ ಸಂಸ್ಕೃತಿಯ ನೃತ್ಯ-ಗಾಯನ, ವಂದೇ ಮಾತರಂ ಗೀತೆ, ದೇಶದ ಅಭಿಮಾನ ಮತ್ತು ಅಸ್ಮಿತೆಯ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ನಂತರ ಮಾತನಾಡಿದ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, “ಗಾಂಧೀಜಿಯವರ ದಂಡಿಯಾತ್ರೆಯು ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ತೋರಿತು. ಈ ದಂಡಿಯಾತ್ರೆಯು ಭಾರತದ ಸಂಸ್ಕಾರವನ್ನು ವಿಶ್ವಕ್ಕೆ ಸಾರಿತು” ಎಂದು ಅಭಿಮಾನದಿಂದ ಹೇಳಿದರು.

ಭಾರತೀಯತಿರಿಗೆ ಉಪ್ಪು ಬರೀ ರುಚಿಗೆ ಬಳಸುವ ವಸ್ತುವಲ್ಲ; ಭಾರತದಲ್ಲಿ ಉಪ್ಪಿನ ಅರ್ಥ ನಂಬಿಕೆ. ವಿಶ್ವಾಸದ ಪ್ರತೀಕ ಉಪ್ಪು.
ಉಪ್ಪು ಶ್ರಮ ಮತ್ತು ಸಮಾನತೆಯ ಪ್ರತೀಕ. ಅಷ್ಟೇ ಅಲ್ಲದೇ ಉಪ್ಪು ಭಾರತದ ಆತ್ಮನಿರ್ಭರದ ಪ್ರತೀಕವಾಗಿತ್ತು.
ಇದನ್ನು ಅರ್ಥ ಮಾಡಿಕೊಂಡಿದ್ದ ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹವನ್ನು ನಡೆಸುವ ಮೂಲಕ ಪ್ರತಿಯೊಬ್ಬ ಭಾರತೀಯನ ಸ್ವಾಭಿಮಾನದ ಹೋರಾಟವಾಗಿ ರೂಪಿಸಿದರು.
ಇದರಿಂದ ಇಡೀ ಭಾರತವೇ ಒಂದಾಗಿ ಹೋರಾಟಕ್ಕೆ ಧುಮುಕಿತು ಎಂದು ಪ್ರಧಾನಮಂತ್ರಿಗಳು ಅಭಿಪ್ರಾಯಪಟ್ಟರು.

ದಂಡಿ ಯಾತ್ರೆಯ ಈ ಸಂದರ್ಭದಲ್ಲಿ ನಾವೆಲ್ಲರೂ ಇತಿಹಾಸದ ಭಾಗವಾಗುತ್ತಿದ್ದೇವೆ. ಅಮೃತ ಮಹೋತ್ಸವ ಇಂದಿನಿಂದ ಆರಂಭಗೊಂಡಿದ್ದು, ಆಗಸ್ಟ್ 15, 2023 ರವರೆಗೆ ನಡೆಯಲಿದೆ.

ಭಾರತಕ್ಕೆ ಪವಿತ್ರ ದಿನವಿದು. ದೇಶದ ವಿವಿಧ ಕಡೆಗಳಿಂದ ಇಂದಿನಿಂದ ಅಮೃತ ಮಹೋತ್ಸವದ ಆರಂಭವಾಗಿದೆ. ಅಸಂಖ್ಯ ಜನರ ತ್ಯಾಗ-ಬಲಿದಾನದ ಸ್ಮರಣೆ ಏಕಕಾಲಕ್ಕೆ ನಡೆಯುತ್ತಿದೆ.
ಮಹಾತ್ಮಾ ಗಾಂಧೀಜಿ ಸೇರಿದಂತೆ ದೇಶದ ಸ್ವಾತಂತ್ರ್ಯ ಕ್ಕೆ ಬಲಿದಾನಗೈದ ಮಹನೀಯರಿಗೆ ಪಾದಗಳಿಗೆ ನಾನು ತಲೆಬಾಗಿ ನಮಿಸುತ್ತೇನೆ.
ಅದೇ ರೀತಿ ಸ್ವತಂತ್ರ ಭಾರತದ ಪುನರ್ ನಿರ್ಮಾಣ ಕ್ಕೆ ಶ್ರಮಿಸಿದ ಎಲ್ಲರಿಗೂ ನಮಿಸುತ್ತೇನೆ.
ಗುಲಾಮಗಿರಿಯ ದಿನಗಳಲ್ಲಿ ಸ್ವಾತಂತ್ರ್ಯಕ್ಕಾಗಿ ಪರಿತಸುತ್ತಿದ್ದ ಜನರನ್ನು ನಾವು ಸ್ಮರಿಸಬೇಕಿದೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರ ಕನಸು ನನಸಾಗಿಸಬೇಕಿದೆ:

ಸ್ವತಂತ್ರ ಭಾರತದ ಉತ್ತರೋತ್ತರ ಪ್ರಗತಿಯ ಕಾಲಘಟ್ಟದಲ್ಲಿರುವ ನಾವು ಸ್ವಾತಂತ್ರ್ಯ ಹೋರಾಟದ ನೆನಪುಗಳ ಜತೆ ಸ್ವತಂತ್ರ ಭಾರತದ ಕನಸು ನನಸಾಗಿಸಲು ಶ್ರಮಿಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದರು.

ಮಹನೀಯರ ತ್ಯಾಗ-ಬಲಿದಾನ ಮತ್ತು ಸ್ವಾಭಿಮಾನವನ್ನು ನಂತರದ ಪೀಳಿಗೆಗೆ ತಲುಪಿಸುವ ರಾಷ್ಟ್ರದ ಗೌರವ ಮಾತ್ರ ಅಬಾಧಿತವಾಗಿರಲಿದೆ.

ದುಃಖ, ಕಷ್ಟ, ಕ್ಲೇಶ ಹಾಗೂ ವಿನಾಶಗಳನ್ನು ದಾಟಿ ಅಮೃತದೆಡೆಗೆ ಸಾಗಬೇಕಿದೆ. ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಉದ್ದೇಶ ಕೂಡ ಇದೆ ಆಗಿದೆ.

ಕಿತ್ತೂರು ಚನ್ನಮ್ಮನನ್ನು ಸ್ಮರಿಸಿದ ಪ್ರಧಾನಮಂತ್ರಿಗಳು

ತಮ್ಮ ಭಾಷಣದಲ್ಲಿ ಕಿತ್ತೂರು ಚನ್ನಮ್ಮನ ಹೋರಾಟವನ್ನು ಸ್ಮರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕ್ವಿಟ್ ಇಂಡಿಯಾ ಚಳವಳಿ, ಉಪ್ಪಿನ ಸತ್ಯಾಗ್ರಹ ಮತ್ತಿತರ ಹೋರಾಟಗಳು ನಮಗೆಲ್ಲ ಪ್ರೇರಣಾದಾಯಕವಾಗಿವೆ ಎಂದರು.

ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್, ಸರದಾರ ವಲ್ಲಭಭಾಯಿ ಪಟೇಲ್, ಜವಹರಲಾಲ್ ನೆಹರೂ, ಅಂಬೇಡ್ಕರ್, ವೀರ ಸಾವರಕರ ಸೇರಿದಂತೆ ನೂರಾರು ಮಹನೀಯರು ದೇಶದ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.
ಈ ಎಲ್ಲ ಸ್ವಾತಂತ್ರ್ಯ ಹೋರಾಟಗಾರ ರ ಕನಸಿನ ಭಾರತ ನಿರ್ಮಿಸುವ ಹೊಣೆ ನಮ್ಮದಾಗಿದೆ.

ಸ್ವಾತಂತ್ರ್ಯ ಸಂಗ್ರಾಮ ಮತ್ತು ಸಂಘರ್ಷಗಳು ಅಸತ್ಯದ ವಿರುದ್ಧ ಸತ್ಯದ ಜಯಕ್ಕೆ ಸಾಕ್ಷಿಗಳಾಗಿವೆ. ಭಾರತದ ಪ್ರತಿ ವರ್ಗ ಸಮಾಜಗಳು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿವೆ.

ಕಿತ್ತೂರು ಆಂದೋಲನವನ್ನೂ ತಮ್ಮ ಮಾತಿನಲ್ಲಿ ಸ್ಮರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ತ್ಯಾಗ ಮತ್ತು ಬಲಿದಾನಗಳು ಸ್ವಾತಂತ್ರ್ಯದ ಮಾರ್ಗವನ್ನು ನಮಗೆ‌ ತೋರಿಸಿವೆ ಎಂದರು.

ಸ್ವಾತಂತ್ರ್ಯ ಹೋರಾಟಗಾರರು, ಸಾಧು-ಸಂತರು, ಸೇರಿದಂತೆ ಅನೇಕ ಮಹನೀಯರು ಸ್ವಾತಂತ್ರ್ಯದ ಜ್ಯೋತಿಯನ್ನು ದೇಶದ ಮೂಲೆ‌ಮೂಲೆಗಳಲ್ಲಿ ಬೆಳಗಿಸಿದ್ದಾರೆ.
ಇಂತಹ ಮಹನೀಯರ ಹೋರಾಟದ ಫಲವಾಗಿ ಇಡೀ ದೇಶದ ಜನರು ಹಿಂದೆಮುಂದೆ ನೋಡದೇ‌ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದರು.
ತಮ್ಮ ಸರ್ವಸ್ವವನ್ನೂ ಸಮರ್ಪಿಸಿದ ಸ್ವಾತಂತ್ರ್ಯ ಸೇನಾನಿಗಳ ಜೀವನಗಾಥೆಯು ಇಂದಿನ ಯುವಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ಪಾಠವಾಗಿದೆ.

ಸಂವಿಧಾನ ಮತ್ತು ಪ್ರಜಾತಂತ್ರದ ಮೇಲೆ ನಮಗೆ ಗರ್ವವಿದೆ. ವಿಜ್ಞಾನ-ತಂತ್ರಜ್ಞಾನ, ಬಾಹ್ಯಾಕಾಶ, ವೈದ್ಯಕೀಯ, ರಕ್ಷಣೆ, ವ್ಯಾಪಾರ ವಹಿವಾಟು ಕ್ಷೇತ್ರದಲ್ಲಿ ಭಾರತದ ನಾಗಾಲೋಟದಲ್ಲಿ ಮುನ್ನಡೆದಿದೆ.

ಭಾರತದ ಸ್ವಾತಂತ್ರ್ಯದ ಹೋರಾಟವು ಬ್ರಿಟಿಷರ ವಿರುದ್ಧ ಮಾತ್ರವಲ್ಲ; ಮಾನವ ಹಕ್ಕುಗಳ ಹೋರಾಟವಾಗಿದೆ. ಭಾರತದ ಸ್ವಾತಂತ್ರ್ಯದ ಬಳಿಕ ಇಡೀ ವಿಶ್ವದಲ್ಲೇ ಸ್ವಾತಂತ್ರ್ಯದ ಕೂಗು ಎದ್ದಿತು.
ಭಾರತದ ಆತ್ಮನಿರ್ಭರತೆಯಿಂದ ಇಡೀ ವಿಶ್ವಕ್ಕೆ ಪ್ರಯೋಜನವಾಗಲಿದೆ ಎಂಬುದಕ್ಕೆ ಕೊರೊನಾ ಲಸಿಕೆ ಇದಕ್ಕೆ ಸಾಕ್ಷಿಯಾಗಿದೆ.

ನಾವು ಭಾರತೀಯರು ಇನ್ನೊಬ್ಬರಿಗೆ ದುಃಖ ನೀಡುವುದಿಲ್ಲ. ಆದರೆ ಇನ್ನೊಬ್ಬರಿಗಾಗಿ ನಾವು ಒಳಗೊಳಗೆ ದುಃಖವನ್ನು ಅನುಭವಿಸುತ್ತಿದ್ದೇವೆ.
ಸುಖ-ದುಃಖಗಳ ನಡುವೆಯೂ ಗುರಿಯೆಡೆಗೆ ಸಾಗುವವರಿಗೆ ಮಾತ್ರ ಅಮೃತ ಲಭಿಸುತ್ತದೆ.
ಅಮೃತ ಮಹೋತ್ಸವ ಎಂಬ ರಾಷ್ಟ್ರದ ಯಜ್ಞದಲ್ಲಿ ನಾವೆಲ್ಲರೂ ಭಾಗಿಯಾಗಿ ದೇಶವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ ಎಂದು ಕರೆ ನೀಡಿದರು.

ದೇಶದ ಶಾಲಾ-ಕಾಲೇಜುಗಳ ಮಕ್ಕಳು ಮುಂಬರುವ ದಿನಗಳಲ್ಕಿ 75 ಮಹನೀಯರ ವೇಷಭೂಷಣ ಧರಿಸಿ ಅವರ ಘೋಷಣೆಗಳನ್ನು ಕಲಿಯಬೇಕು ಎಂದು ಹೇಳಿದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಭಾರತವು ವಿಶ್ವಕ್ಕೆ ಹೊಸ ದಿಕ್ಕು ತೋರಿಸಬೇಕಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಶಯ ವ್ಯಕ್ತಪಡಿಸಿದರು.

ಚನ್ನಮ್ಮನ ಕಿತ್ತೂರಿನಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.
ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಕಾಡಾ ಅಧ್ಯಕ್ಷ ಡಾ.ವಿ.ಐ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಚನ್ನಮ್ಮನ ಕಿತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡ್ರ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಚನ್ನಮ್ಮನ ಕಿತ್ತೂರಿನಿಂದ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿರುವ ಸಂಗೊಳ್ಳಿ ರಾಯಣ್ಣನ ಸ್ಮಾರಕದವರೆಗೆ 75 ಕಿ.ಮೀ. ಸೈಕಲ್ ರ್ಯಾಲಿ ನಡೆಯಿತು.
*****

Check Also

ಗೆಲುವಿನತ್ತ SSLC ವಿಧ್ಯಾರ್ಥಿಗಳ ಪಯಣ

SSLC ವಿದ್ಯಾರ್ಥಿಗಳ ಕೈ ಹಿಡಿದ “ಗೆಲುವಿನತ್ತ ನಮ್ಮ ಪಯಣ” ಪುಸ್ತಕ ಸತೀಶ್‌ ಜಾರಕಿಹೊಳಿ ಫೌಂಡೇಶನ್‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ಯಪಡಿಸಿದ ವಿದ್ಯಾರ್ಥಿಗಳು …

Leave a Reply

Your email address will not be published. Required fields are marked *