Home / Breaking News / ಕೋಳಿ ಮೌಂಸ ತಿಂದ್ರೆ ತೊಂದರೆ ಇಲ್ಲ,ಅಂತಾ ಹೇಳಿದ ಮಿನಿಸ್ಟರ್ ಯಾರು ಗೊತ್ತಾ..?

ಕೋಳಿ ಮೌಂಸ ತಿಂದ್ರೆ ತೊಂದರೆ ಇಲ್ಲ,ಅಂತಾ ಹೇಳಿದ ಮಿನಿಸ್ಟರ್ ಯಾರು ಗೊತ್ತಾ..?

ಬೆಳಗಾವಿ,: ಲಾಕ್ ಡೌನ್ ಸಂದರ್ಭದಲ್ಲಿ ಕೃಷಿಯ ದೈನಂದಿನ ಚಟುವಟಿಕೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳುವುದರ ಜತೆಗೆ ಕೃಷಿ ಉತ್ಪನ್ನಗಳ ಮಾರಾಟ, ಸಾಗಾಣಿಕೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ-ಗೊಬ್ಬರ ಮತ್ತಿತರ ಸಾಮಗ್ರಿಗಳ ಪೂರೈಕೆ ವ್ಯತ್ಯಯವಾಗದಂತೆ ಎಲ್ಲ ವ್ಯವಸ್ಥೆ ಕಲ್ಪಿಸಬೇಕು ಎಂದು ಕೃಷಿ ಇಲಾಖೆಯ ಸಚಿವರಾದ ಬಿ.ಸಿ.ಪಾಟೀಲ ಸೂಚನೆ ನೀಡಿದರು.

ಕೋವಿಡ್ -೧೯ ಹಿನ್ನೆಲೆಯಲ್ಲಿ ಕೃಷಿ ಸಂಬಂಧಿತ ವಿಷಯಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ(ಏ.೬) ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಳೆಯಾದರೆ ರೈತರಿಗೆ ಬೀಜ, ಗೊಬ್ಬರ ಮತ್ತಿತರ ಸಾಮಗ್ರಿಗಳ ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕು. ಲಾಕ್ ಡೌನ್ ಹಿನ್ನೆಲೆಯಲ್ಲಿ ರೈತರು ಬೆಳೆದ ತರಕಾರಿ, ಹಣ್ಣುಗಳ ಮಾರಾಟ ಹಾಗೂ ಸಾಗಾಣಿಕೆಗೆ ಯಾವುದೇ ಅನಾನುಕೂಲ ಆಗಕೂಡದು.

ಬಿತ್ತನೆ, ಬೀಜ-ಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ, ಸಾಗಾಣಿಕೆ ಸಮರ್ಪಕವಾಗಿ ಇರಬೇಕು. ಕೃಷಿ ಯಂತ್ರೋಪಕರಣಗಳು ಮತ್ತಿತರ ಸಾಮಗ್ರಿಗಳ ಮಾರಾಟ ವ್ಯವಸ್ಥೆಯನ್ನು ಯಥಾಪ್ರಕಾರ ಕಲ್ಪಿಸಬೇಕು.

ಸರಕು ವಾಹನಗಳ ಸಂಚಾರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಬಂಧಗಳಿಲ್ಲ. ಒಂದು ವೇಳೆ ಎಲ್ಲಿಯಾದರೂ ಸರಕು ಸಾಮಗ್ರಿಗಳನ್ನು ಸಾಗಿಸುವ ವಾಹನಗಳಿಗೆ ತಡೆಯೊಡ್ಡಿದರೆ ಸರ್ಕಾರ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರೆ ಸಮಸ್ಯೆ ಪರಿಹರಿಸಲಾಗುವುದು ಎಂದು ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ರಾಜ್ಯದಲ್ಲಿ ಹಕ್ಕಿಜ್ವರ ಕಂಡುಬಂದಿಲ್ಲ:

ರಾಜ್ಯದಲ್ಲಿ ಕೋಳಿ ಅಥವಾ ಹಕ್ಕಿಜ್ವರ ವರದಿಯಾಗಿಲ್ಲ. ಆದ್ದರಿಂದ ಕೋಳಿ ಮಾಂಸ ತಿಂದರೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ ಸ್ಪಷ್ಟಪಡಿಸಿದರು.

ವ್ಯಾಪಾರ, ವಹಿವಾಟು ನಡೆಸಲು ಯಾವುದೇ ರೀತಿಯ ಸಮಯ ನಿರ್ಬಂಧ ವಿಧಿಸಬಾರದು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಲಾಕ್ ಡೌನ್ ಜಾರಿಗೆ ತರಲಾಗಿದೆ. ಅನಿವಾರ್ಯವಾಗಿ ಕೆಲವೊಂದು ನಿರ್ಬಂಧ ವಿಧಿಸಲಾಗಿದ್ದು ಜನರು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಅವರು, ನೆರೆಯ ರಾಜ್ಯಗಳಿಗೆ ಪೂರೈಕೆಯಾಗುವ ಹಣ್ಣು-ತರಕಾರಿ ಸೇರಿದಂತೆ ಇತರೆ ಸಾಮಗ್ರಿಗಳನ್ನು ಸರಾಗವಾಗಿ ಸಾಗಿಸಲು ಆಯಾ ರಾಜ್ಯದ ಗಡಿಯ ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಂತೆ ತಿಳಿಸಿದರು.

ಈ ಬಗ್ಗೆ ಈಗಾಗಲೇ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಅನೇಕ ಬಾರಿ ಚರ್ಚಿಸಲಾಗಿದೆ. ಆದಾಗ್ಯೂ ಸಮಸ್ಯೆ ಉದ್ಭವಿಸಿದಾಗ ತಮ್ಮ ಗಮನಕ್ಕೆ ತಂದರೆ ಮತ್ತೆ ಮಾತನಾಡುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ತಿಳಿಸಿದರು.

ಜಿಲ್ಲೆಯಲ್ಲಿ ಶೇ. ೧೦೦ ಬಿತ್ತನೆ ಪೂರ್ಣಗೊಂಡಿದೆ. ೪೦ ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಅಗತ್ಯವಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಜಿಲಾನಿ ಮೊಖಾಶಿ ತಿಳಿಸಿದರು.

ಮೇ ಕೊನೆ ಅಥವಾ ಜೂನ್ ನಲ್ಲಿ ಬಿತ್ತನೆ ಆರಂಭ. ಶೇ.೫೦ ರಸಗೊಬ್ಬರ ದಾಸ್ತಾನು ಇದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ ಕೃಷಿ ಉತ್ಪನ್ನ, ಮತ್ತಿತರ ಸಾಮಗ್ರಿಗಳ ಪೂರೈಕೆ ಅಥವಾ ಸಾಗಾಣಿಕೆಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ.

ರೈತ ಸಂಪರ್ಕ ಕೇಂದ್ರಗಳು ಕೂಡ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ಸಚಿವರಿಗೆ ಮಾಹಿತಿಯನ್ನು ನೀಡಿದರು.

ಹಾಪ್ ಕಾಮ್ಸ್ ಮತ್ತು ತೋಟಗಾರಿಕೆ ಇಲಾಖೆಯ ಮೂಲಕ ೧೦೦ ಕ್ಕೂ ಅಧಿಕ ವಾಹನಗಳನ್ನು ಬಳಸಿಕೊಂಡು ನಗರದಲ್ಲಿರುವ ಬಡಾವಣೆಗಳಿಗೆ ಹಣ್ಣು-ತರಕಾರಿ ಪೂರೈಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟಿ ವಿವರಿಸಿದರು.

ಹಸಿಮೆಣಸಿನಕಾಯಿ ಮಾರಾಟಕ್ಕೆ ಕೂಡ ಕೆಲವು ಜಿಲ್ಲೆಯ ಭಾಗಗಳಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದರು.

ಜಿಲ್ಲೆಯಲ್ಲಿ ೧ ಲಕ್ಷ ಟನ್ ಗೊಬ್ಬರ ಅಗತ್ಯವಿದ್ದು, ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರಾದ ಸಿದರಾಯ ಮೋದಗಿ ಮನವಿ ಮಾಡಿಕೊಂಡರು.

ಪಿಓಎಸ್ ಮೂಲಕ ಗೊಬ್ಬರ ಪೂರೈಸುವಾಗ ಬೆರಳಚ್ಚು ಹಾಗೂ ಓಟಿಪಿ ವ್ಯವಸ್ಥೆಗೆ ತಾತ್ಕಾಲಿಕ ರಿಯಾಯಿತಿ ನೀಡಬೇಕು ಎಂದರು.

ಎಪಿಎಂಸಿ ವಹಿವಾಟು ಬಿಸಿಲು ಹೆಚ್ಚಾಗಿರುವ ಅವಧಿಯಲ್ಲಿ ಆರಂಭಿಸಬೇಕು. ಅಲ್ಲಿ ಸಂಗ್ರಹವಾಗುವ ಹಣ್ಣು-ತರಕಾರಿಗಳ ಮೇಲೆ ನೀರು ಸಿಂಪಡಣೆ ಗೆ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಸಲಹೆ ನೀಡಿದರು.

ಕೃಷಿ ಪರಿಕರ ಮಾರಾಟ ಅಂಗಡಿಳನ್ನು ತೆರೆದು ವಹಿವಾಟು ನಡೆಸಲು ಅಗತ್ಯ ಪಾಸ್ ಗಳನ್ನು ಕೃಷಿ ಇಲಾಖೆಯ ವತಿಯಿಂದ ಪೂರೈಸಲಾಗಿದೆ. ಯಾವುದೇ ತೊಂದರೆಯಿಲ್ಲ ಎಂದು ಡೀಲರ್ ಗಳು ವಿವರಿಸಿದರು.

ಶಾಸಕರಾದ ಸತೀಶ್ ಜಾರಕಿಹೊಳಿ, ಅನಿಲ್ ಬೆನಕೆ, ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಮತ್ತಿತರರು ಉಪಸ್ಥಿತರಿದ್ದರು.

****

Check Also

ಚಾಕುವಿನಿಂದ ಇರಿದು, ಬೆಳಗಾವಿ ಜಿಲ್ಲೆಯಲ್ಲಿ ಡಬಲ್ ಮರ್ಡರ್….

ಬೆಳಗಾವಿ: ಅಪ್ರಾಪ್ತ ಮಗಳಿಗೆ ಪ್ರೀತಿಸುವಂತೆ ಬೆನ್ನು ಬಿದ್ದಿದ್ದ ಯುವಕ ಹಾಗೂ ಆತನ ಸಹೋದರನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ತಂದೆಯೇ ಹತ್ಯೆ …

Leave a Reply

Your email address will not be published. Required fields are marked *