Breaking News

ಜ್ಞಾನ ಜ್ಯೋತಿಯನ್ನು ಬೆಳಗುವ ಉತ್ಸವ ಬೆಳಗಾವಿಯಲ್ಲಿ….

ರಾಮಕೃಷ್ಣ ಮಿಷನ್ ವಿಶ್ವಭಾವೈಕ್ಯ ಮಂದಿರ ವಾರ್ಷಿಕೋತ್ಸವ : ಶಿಕ್ಷಕರು ಪ್ರೀತಿಯಿಂದ ಬೋಧಿಸಬೇಕು-
ವೀರೇಶಾನಂದಜೀ ಮಹಾರಾಜ

ಬೆಳಗಾವಿ :
ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೀತಿಯಿಂದ ಬೋಧನೆ ಮಾಡಬೇಕು ಎಂದು ಬೆಂಗಳೂರು ವೀರೇಶಾನಂದಜೀ ಮಹಾರಾಜ ತಿಳಿಸಿದರು.

ಇಲ್ಲಿಯ ಕೋಟೆ ಆವರಣದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಉದ್ಘಾಟನೆಯ ಸವಿನೆನಪಿಗೆ ಶನಿವಾರ ಏರ್ಪಡಿಸಿದ್ದ ಶಿಕ್ಷಕರ ಸಮ್ಮೇಳನದಲ್ಲಿ ಅವರು ಕಲಿಕೆ ಎಂಬ ಸಂತಸದ ಸಾಹಸ ವಿಷಯವಾಗಿ ಮಾತನಾಡಿದರು.
ಮಕ್ಕಳು ಶಿಕ್ಷಕರು ಕಲಿಸುವ ಭಾಷೆ, ವಿದ್ವತ್ ಹೇಗೆ ಇದೆ ಎನ್ನುವುದನ್ನು ಸದಾ ಗಮನಿಸುತ್ತಾ ಇರುತ್ತಾರೆ. ಈ ನಿಟ್ಟಿನಲ್ಲಿ ಸದಾ ಜಾಗೃತರಾಗಿ ಬೋಧನೆ ಮಾಡಬೇಕು ಎಂದರು.

ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡುವವನೆ ಶಿಕ್ಷಕ. ಶಾಲೆಗೆ ಹೋಗುವಾಗ ನಿಮಗೆ ಧನ್ಯತೆಯ ಭಾವ ಇರಬೇಕು. ಹಲವಾರು ರೀತಿಯ ಮಕ್ಕಳು ಶಾಲೆಗೆ ಬಂದಿರುತ್ತಾರೆ. ಅವರಿಗೆ ಶಾಲೆಯಲ್ಲಿ ನೀವೇ ತಂದೆ-ತಾಯಿ ಇದ್ದಂತೆ. ವಿದ್ಯಾಭ್ಯಾಸ ಹೊಸ ಜ್ಞಾನ ನೀಡುತ್ತದೆ. ಶಿಕ್ಷಕರು ಪುಣ್ಯವಂತರು. ಎಂಥ ಪುಣ್ಯದ ಕೆಲಸ ನೀವು ಮಾಡುತ್ತಿದ್ದೀರಿ ಎಂಬ ಅರಿವು ನಿಮ್ಮಲ್ಲಿ ಸದಾ ಜಾಗೃತವಾಗಿ ಇರಬೇಕು. ಅದರಂತೆ ಮಕ್ಕಳ ಬೇಕು-ಬೇಡಗಳ ಬಗ್ಗೆ ಗಮನಿಸಬೇಕು ಎಂದು ಹೇಳಿದರು.

ಮಕ್ಕಳನ್ನು ನೀವು ಪ್ರೀತಿಯಿಂದ ಕಾಣಬೇಕು. ನಿಸ್ವಾರ್ಥವಾಗಿ ಕಲಿಸಬೇಕು. ಪ್ರೀತಿಯೆಂಬ ಮಹಾ ಮಂತ್ರ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಉತ್ತರ ಕೊಡಬಲ್ಲದು. ಮಕ್ಕಳು ಪರಿಣಾಮಕಾರಿ ಪಾಠ ಹೇಗೆ ಕಲಿತುಕೊಳ್ಳುತ್ತಿದೆ ಎಂಬ ಪರಿಜ್ಞಾನ ಶಿಕ್ಷಕನಾದವನಿಗೆ ಇರಬೇಕು. ಮಗುವಿನಲ್ಲಿ ಅಪಾರವಾದ ಜ್ಞಾನ ಅಡಗಿರುತ್ತದೆ. ಅದನ್ನು ಹೊರ ತರುವ ಮಹತ್ತರ ಹೊಣೆ ಶಿಕ್ಷಕನ ಮೇಲೆ ಇರುತ್ತದೆ ಎಂದು ಹೇಳಿದರು.

ವ್ಯಕ್ತಿಗತವಾಗಿ ಶಿಕ್ಷಕರು ಕೆಲವು ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಪರಿಣಾಮಕಾರಿ ಬೋಧನೆ ಮಾಡಲು ಸಾಧ್ಯವಿದೆ. ಹಂತ ಹಂತವಾಗಿ ಶಿಕ್ಷಕರು ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಮಕ್ಕಳನ್ನು ಯಾವುದೇ ಕಾರಣಕ್ಕೂ ನಿಂದಿಸಲು ಹೋಗಬಾರದು. ಅವರಲ್ಲಿ ಶ್ರದ್ಧೆಯ ಜೊತೆಗೆ ಏಕಾಗ್ರತೆ ಬೆಳೆಸಬೇಕು. ಮಗುವಿಗೆ ಮನರಂಜನೆ ನೀಡಿ, ಆಕರ್ಷಣೀಯ ಓದಿನ ಕಡೆಗೆ ಒಲವು ಮೂಡಿಸುವುದು ಸಹಾ ಶಿಕ್ಷಕನ ಜವಾಬ್ದಾರಿ ಎಂದು ಹೇಳಿದರು.

ಗುಜರಾತ್ ರಾಜ್ಯದ ರಾಜಕೋಟ್ ಶ್ರೀರಾಮಕೃಷ್ಣ ಆಶ್ರಮದ ಸ್ವಾಮಿ ನಿಖಿಲೇಶ್ವರಾನಂದಜೀ ಮಹಾರಾಜ ಅವರು, ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ವಿಷಯವಾಗಿ ಮಾತನಾಡಿ, ದೇಶ ಕಟ್ಟುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕ ಮನಸ್ಸು ಮಾಡಿದರೆ ಶ್ರೇಷ್ಠ ವಿದ್ಯಾರ್ಥಿಯನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ತಮ್ಮ ಜೀವನದಲ್ಲಿ ಶಿಕ್ಷಣ ವೃತ್ತಿಗಾಗಿ ನಿಸ್ವಾರ್ಥ ಹಾಗೂ ತ್ಯಾಗ ಮನೋಭಾವದಿಂದ ತಮ್ಮನ್ನು ಅರ್ಪಿಸಿಕೊಳ್ಳಬೇಕು ಎಂದು ಎಂದು ಹೇಳಿದರು.

ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ.ಎಚ್.ಎನ್. ಮುರಳಿಧರ್ ಅವರು ಸ್ವಾಮಿ ವಿವೇಕಾನಂದರ ಶೈಕ್ಷಣಿಕ ಚಿಂತನೆಗಳು ವಿಷಯವಾಗಿ ಮಾತನಾಡಿ, ಸ್ವಾಮಿ ವಿವೇಕಾನಂದರು ಶಿಕ್ಷಣವನ್ನು ಮುಖ್ಯವಾಗಿ ಗ್ರಹಿಸಿದ್ದರು. ಮನುಷ್ಯನನ್ನು ಶಿಕ್ಷಣದಿಂದ ಮಾತ್ರ ಮೇಲೆತ್ತಬಹುದು ಎಂದು ಬಲವಾಗಿ ಪ್ರತಿಪಾದಿಸಿದ್ದರು. ಶಿಕ್ಷಕರು ತಮ್ಮ ಭವಿಷ್ಯದ ಜೀವನದಲ್ಲಿ ಮಾದರಿ ಶಿಕ್ಷಕರಾಗಿ ಹೊರಹೊಮ್ಮಿ ಸಮಾಜಕ್ಕೆ ಶ್ರೇಷ್ಠ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಬೆಳಗಾವಿ ರಾಮಕೃಷ್ಣ ಮಿಷನ್ ಆಶ್ರಮದ ಕಾರ್ಯದರ್ಶಿ ಸ್ವಾಮಿ ಆತ್ಮ ಪ್ರಾಣಾನಂದ ಸ್ವಾಗತಿಸಿದರು.ಬೆಳಗಾವಿಯ ವಿವಿಧ ಬಿಎಡ್ ಕಾಲೇಜುಗಳ ಪ್ರಶಿಕ್ಷಣಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *