ರಾಯಬಾಗ: ತಾಲೂಕಿನ ಹೊಸ ದಿಗ್ಗೆವಾಡಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ರೈತ ಬಸವರಾಜ ಭೀಮಪ್ಪ ಸಗರೆ ಮನೆಗೆ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತ ರೈತನ ಪತ್ನಿ ಶೋಭಾ ಹಾಗೂ ಆತನ ಇಬ್ಬರು ಮಕ್ಕಳಿಗೂ ಸಾಂತ್ವನ ಹೇಳಿ, ಸ್ಥಳದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಜಿಲ್ಲಾಡಳಿತ ವತಿಯಿಂದ ರೈತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಶೀಘ್ರವೇ ವಿತರಿಸಲು ಸೂಚಿಸಿದರು.
ಮೃತ ರೈತನ ಬ್ಯಾಂಕ್ ಸಾಲದ ಬಗ್ಗೆಯೂ ಸಂಪೂರ್ಣ ವಿವರ ಪಡೆದ ಸಚಿವರು, ಯಾವುದೇ ಸಮಸ್ಯೆಗಳಿದ್ದರೂ ಧೈರ್ಯದಿಂದ ಎದುರಿಸುವ ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮನ್ನು ನಂಬಿದ ಕುಟುಂಬಗಳು ಅನಾಥವಾಗುತ್ತವೆ, ಜತೆಗೆ ಅವರನ್ನು ನಡು ನೀರಿನಲ್ಲಿ ಕೈಬಿಟ್ಟು ಹೋದಂತಾಗುತ್ತದೆ. ಆದ್ದರಿಂದ ಧೈರ್ಯದಿಂದ ಜೀವನ ಎದುರಿಸಿ ಎಂದು ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್, ಜಿ.ಪಂಚಾಯತಿ ಸಿಇಓ ರಾಹುಲ್ ಶಿಂಧೆ, ಪೊಲೀಸ್ ವರಿಷ್ಠಾಧಿಕಾರಿಗಳು ಭೀಮಾಶಂಕರ ಗುಳೆದ, ರಾಯಬಾಗ ತಹಶೀಲ್ದಾರ್ ಸುರೇಸ ಮುಂಜೆ, ಬೆಳಗಾವಿ ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಮುಖಂಡರಾದ ಶೀವು ಪಾಟೀಲ್, ಮಹಾವೀರ ಮೋಹಿತೆ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.