ಬೆಳಗಾವಿ
ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮನ ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ಭಾಗವಹಿಸಿದರೆ ಮುಖ್ಯಮಂತ್ರಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢನಂಬಿಕೆಗೆ ಸೆಡ್ಡು ಹೊಡೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ಕಿತ್ತೂರಿನ ಕೋಟೆ ಆವರಣದಲ್ಲಿ ನಡೆಯುವ ಚನ್ನಮ್ಮನ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಮೌಢ್ಯ ಸುಳ್ಳು ಎಂಬ ಸಂದೇಶ ಸಾರಿ, ಅಭಿವೃದ್ಧಿಗೆ ನಾಂದಿ ಹಾಡಲಿದ್ದಾರೆ.
ಮುಡಾ ಹಗರಣದ ಸಂಕಷ್ಟಕ್ಕೆ ಸಿಲುಕಿರುವ ಸಿಎಂ ಸಿದ್ದರಾಮಯ್ಯ ಕಿತ್ತೂರು ಉತ್ಸವದಲ್ಲಿ ಭಾಗವಹಿಸುವುದು ಬಹುತೇಕವಾಗಿ ಎಲ್ಲರಿಗೂ ಡೌಟ್ ಆಗಿತ್ತು. ಆದರೆ, ಮೌಢ್ಯಕ್ಕೆ ಸೆಡ್ಡು ಹೊಡೆದು ಸಿಎಂ ಸಿದ್ದರಾಮಯ್ಯ ಕಿತ್ತೂರಿಗೆ ಆಗಮಿಸುತ್ತಿರುವುದು ಕೊನೆಗೂ ಖಾತ್ರಿಯಾಗಿದೆ. ಅವರ ಕಿತ್ತೂರು ಭೇಟಿ ಪ್ರವಾಸ ಕಾರ್ಯಕ್ರಮ ಪಟ್ಟಿ ಅಧಿಕೃತವಾಗಿ ಹೊರಬಿದ್ದಿದೆ. ನಾನು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ. ಯಾವುದೇ ಮೂಢನಂಬಿಕೆಯನ್ನು ನಂಬುವುದಿಲ್ಲ ಎಂಬುದನ್ನು ಸಿದ್ದರಾಮಯ್ಯ ಮತ್ತೊಮ್ಮೆ ಸಾಬೀತು ಪಡಿಸಲಿದ್ದಾರೆ. ಐತಿಹಾಸಿಕ ಕಿತ್ತೂರಿನ ಮೌಢ್ಯದ ಕಳಂಕಕ್ಕೆ ಕೊನೆ ಹಾಡಲಿದ್ದಾರೆ.
ಚನ್ನಮ್ಮನ ವಿಜಯೋತ್ಸವದ 200ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಹಿನ್ನೆಲೆಯಲ್ಲಿ ಕಿತ್ತೂರು ಉತ್ಸವಕ್ಕೆ ಈ ಬಾರಿ ಭಾರೀ ಪ್ರಮಾಣದಲ್ಲಿ ಜನ ಪ್ರವಾಹ ಹರಿದುಬರುತ್ತಿದೆ. ಎಲ್ಲಿ ನೋಡಿದರೂ ಜನಜಂಗುಳಿಯೇ ಕಂಡುಬರುತ್ತಿದೆ. ಎಲ್ಲರೂ ಕಿತ್ತೂರು ಉತ್ಸವದ ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ.