Breaking News
Home / Breaking News / ಪಂಚಮಸಾಲಿ ಮೀಸಲಾತಿ ಬಗ್ಗೆ ಇವತ್ತು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು ಗೊತ್ತಾ..??

ಪಂಚಮಸಾಲಿ ಮೀಸಲಾತಿ ಬಗ್ಗೆ ಇವತ್ತು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು ಗೊತ್ತಾ..??

*ವರದಿ ಬಂದ ತಕ್ಷಣ ಕ್ರಮ :*

ಪಂಚಮಸಾಲಿ ಮೀಸಲಾತಿ ಕುರಿತು ನಾಳೆ ಅಂತಿಮ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರೆಲ್ಲರೂ ನಮ್ಮವರೇ, ನಾನು ಹಿಂದುಳಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಸಂಪರ್ಕದಲ್ಲಿದ್ದೇನೆ. ಕೂಡಲೇ ಈ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ವರದಿ ನೀಡಿದ ತಕ್ಷಣ ಮುಂದಿನ ಕ್ರಮಗಳನ್ನು ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಬೆಳಗಾವಿ
ಮಹಾರಾಷ್ಟ್ರದ ವಿರೋಧ ಪಕ್ಷದ ಶಾಸಕರು ಶಾಸನ ಸಭೆಯಲ್ಲಿ ಮತ್ತು ಹೊರಗಡೆ ಬಹಳ ಹದ್ದುಮೀರಿ ಅಸಂಬದ್ಧ ಹೇಳಿಕೆ ನೀಡುತ್ತಿರುವುದನ್ನು ನೋಡಿದರೆ ಅವರು ಮಾನಸಿಕ ಸಂತುಲನ ಕಳೆದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು. ಅಲ್ಲಿನ ವಿರೋಧ ಪಕ್ಷಗಳು ಇದೇ ವಿಚಾರದ ಮೇಲೆ ಅವರ ರಾಜಕಾರಣ ಮಾಡಲು ಹೊರಟಿದ್ದಾರೆ. ಹಿಂದೆಯೂ ಎನ್ಸಿಪಿ ನಾಯಕರು ರಾಜಕೀಯ ಲಾಭ ಪಡೆಯಲು ಹೋಗಿ ವಿಫಲರಾಗಿದ್ದಾರೆ. ಈಗಲೂ ವಿಫಲರಾಗಿದ್ದಾರೆ. ಎರಡೂ ರಾಜ್ಯಗಳ ಜನ ಶಾಂತಿ ಸಾಮರಸ್ಯ ಕಾಪಾಡಿಕೊಂಡು, ವ್ಯಾಪಾರ ವ್ಯವಹಾರ, ಓಡಾಟ ಮಾಡುತ್ತಿರುವಾಗ ಇವರು ಭಾರಿ ಸಂಖ್ಯೆಯಲ್ಲಿ ರಾಜ್ಯಕ್ಕೆ ಪ್ರವೇಶಿಸಲು ಹೊರಟಿದ್ದಾರೆ. ಜನರ ಬೆಂಬಲವಿಲ್ಲದಿದ್ದರೂ, ರಾಜಕೀಯ ಪಕ್ಷಗಳ ಧ್ವಜ ಹಿಡಿದುಕೊಂಡು ಬಂದಿರುವುದನ್ನು ನೋಡಿದರೆ, ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಮಾತ್ರ ಬಂದಿದ್ದರು. ಇದು ರಾಜಕೀಯ ಪ್ರೇರಿತ ಎಂದು ಸ್ಪಷ್ಟವಾಗುತ್ತದೆ ಎಂದು ನುಡಿದರು.

ರಾಜ್ಯದ ಕಾಂಗ್ರೆಸ್ ನಾಯಕರು ಮಹಾರಾಷ್ಟ್ರದಲ್ಲಿನ ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಬೇಕು ಎಂದು ಸಲಹೆ ನೀಡಿದ ಮುಖ್ಯಮಂತ್ರಿಗಳು ನಾವು ಕೂಡ ನಮ್ಮ ಪಕ್ಷದವರಿಗೆ ಮಾತನಾಡಿದ್ದೇವೆ. ಇದು ಬೀದಿಯಲ್ಲಿ ಇತ್ಯರ್ಥವಾಗುವ ವಿಚಾರವಲ್ಲ. ನಮ್ಮ ಕೇಂದ್ರ ಗೃಹ ಸಚಿವರೂ ಇದನ್ನೇ ಹೇಳಿದ್ದಾರೆ ಎಂದರು.
ಮಹಾರಾಷ್ಟ್ರದವರೇ ಇಂದು ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ಅವರಿಗೆ ತಮ್ಮ ದಾವೆ ದುರ್ಬಲವಾಗಿದೆ ಎಂದು ಅರಿವಾಗಿದೆ. ಅದಕ್ಕಾಗಿಯೇ ಇಂತಹ ಪರಿಸ್ಥಿತಿ ಸೃಷ್ಟಿಸಿ ಲಾಭ ಪಡೆಯುವ ಪ್ರಯತ್ನ ಮಾಡುತ್ತಿದ್ದು, ಅದು ಯಶಸ್ವಿಯಾಗುವುದಿಲ್ಲ. ಇದು ಮಹಾರಾಷ್ಟ್ರದ ವಿರೋಧ ಪಕ್ಷದ ಅಪ್ರಬುದ್ಧತೆಯ ಪ್ರದರ್ಶನ. ಮತ್ತು ಅವರು ಚೈನಾ ರೀತಿ ಆಕ್ರಮಣ ಮಾಡುತ್ತೇವೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ಅವರಿಗೆ ಈ ಕಡೆ ಭಾರತ ದೇಶ ಇದೆ ಎಂದು ಗೊತ್ತಿಲ್ಲ. ಚೈನಾ ಆಕ್ರಮಣವನ್ನು ನಮ್ಮ ಸೈನಿಕರು ಹಿಮ್ಮೆಟ್ಟಿಸಿದಂತೆ, ಅವರನ್ನು ಹಿಮ್ಮೆಟ್ಟಿಸುವ ಶಕ್ತಿ ಕನ್ನಡಿಗರಿಗಿದೆ. ನಾವು ಒಂದೇ ದೇಶದಲ್ಲಿರುವವರು. ಅದಾಗ್ಯೂ ಅವರು ಬಳಸಿದ ಪದಪ್ರಯೋಗಕ್ಕೆ ಉತ್ತರ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.

*ಕಾನೂನು ಬಾಹಿರ ಚಟುವಟಿಕೆಗೆ ಸರ್ಕಾರ ಅವಕಾಶ ಕೊಡುವುದಿಲ್ಲ :

ಬೆಳಿಗ್ಗೆ ವಿರೋಧ ಪಕ್ಷದ ನಾಯಕರು ಈ ವಿಚಾರದ ಬಗ್ಗೆ ಹೇಳಿಕೆ ನೀಡಿಡ್ಡು,ಕೇಂದ್ರ ಗೃಹ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದೆ, ಅದಕ್ಕೆ ಬೆಲೆ ಇಲ್ಲವೇ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಇದನ್ನು ಕೇಂದ್ರದ ಗೃಹ ಸಚಿವರ ಗಮನಕ್ಕೆ ತರಲಾಗುವುದು. ಅಂದಿನ ಸಭೆಯಲ್ಲಿ ಎರಡೂ ರಾಜ್ಯಗಳು ಶಾಂತಿ ವ್ಯವಸ್ಥೆಯನ್ನು ಕಾಪಾಡಬೇಕೆಂಬ ನಿರ್ಣಯದಂತೆ ರಾಜ್ಯದಿಂದ ಶಾಂತಿ ಸುವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲಾಗಿದೆ. ಒಂದೂ ಅಹಿತಕರ ಘಟಕನೆ ನಡೆಯದಂತೆ ನೋಡಿಕೊಳ್ಳಲಾಗಿದೆ. ಶಾಂತಿ ಭಂಗವಾಗಲು ಬಿಟ್ಟಿಲ್ಲ. ಜನಸಾಮಾನ್ಯರ ಓಡಾಟ ಸಾಮಾನ್ಯವಾಗಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿ ಆಗುವುದು ಅಷ್ಟೇ ಮುಖ್ಯ. ಯಾವುದೇ ಕಾನೂನು ಬಾಹಿರ ಚಟುವಟಿಕೆಗೆ ಸರ್ಕಾರ ಅವಕಾಶ ಕೊಡುವುದಿಲ್ಲ. ನಾಳೆ ವಿಧಾನಸಭೆಯಲ್ಲಿ ಈ ಬಗ್ಗೆ ಸುದೀರ್ಘವಾದ ಉತ್ತರವನ್ನೂ ಕೊಡಲಾಗುವುದು. ನಿರ್ಣಯವನ್ನೂ ಕೈಗೊಳ್ಳಲಾಗುವುದು ಎಂದರು.

*ಮಹಾರಾಷ್ಟ್ರದ ನಾಯಕರು ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ :*

ಮಹಾರಾಷ್ಟ್ರದಿಂದ ನೀರು ಬಿಡುವುದಿಲ್ಲ ಹಾಗೂ ಅಣೆಕಟ್ಟನ್ನು ಕೂಡ ಎತ್ತರಿಸಲಾಗುವುದು ಎಂದು ಮಹಾರಾಷ್ಟ್ರದವರು ಹೇಳಿಕೆ ನೀಡಿರುವ ಬಗ್ಗೆ ಉತ್ತರಿಸಿ, ಎಲ್ಲ ನದಿಗಳು, ಅಂತರರಾಜ್ಯ ನದಿಗಳು ಅಂತರರಾಜ್ಯ ಜಲ ವಿವಾದ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಮಹಾರಾಷ್ಟ್ರದ ನಾಯಕರಿಗೂ ಈ ಬಗ್ಗೆ ಅರಿವಿದೆ. ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅತಿಹೆಚ್ಚು ಮಳೆ ಬಂದಾಗ ನೀರನ್ನು ನಿಲ್ಲಿಸಲು ಸಾಧ್ಯವೇ. ಆಲಮಟ್ಟಿ ಜಲಾಶಯ ಎತ್ತರ 524.5 ಎಂದು ಟ್ರಿಬ್ಯೂನಲ್ ನಲ್ಲಿ ಆದೇಶವಾಗಿದೆ. ಈ ಬಗ್ಗೆ ಅಧಿಸೂಚನೆ ಆದ ತಕ್ಷಣ ಈ ಕೆಲಸವನ್ನೂ ಪ್ರಾರಂಭಿಸಲಾಗುವುದು ಎಂದರು.

 

Check Also

ಅಕ್ರಮ ಗೋ ಸಾಗಾಟ ; ಟ್ರಕ್ ಚಾಲಕನ ಮೇಲೆ ನೈತಿಕ ಪೊಲೀಸ್ ಗಿರಿ

ಬೆಳಗಾವಿ : ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಹಿನ್ನಲೆಯಲ್ಲಿ ಲಾರಿಯನ್ನು ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ …

Leave a Reply

Your email address will not be published. Required fields are marked *