ಬೆಳಗಾವಿಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಮುನ್ನೆಲೆ ಮತ್ತೇ ತಾರರಕ್ಕೇರಿದೆ. ಮಹಾರಾಷ್ಟ್ರ ಪುಂಡರ ವಿಕೃತಿಗೆ ಸಿಡಿಡೆದ್ದ ಕರವೇ ಕಾರ್ಯಕರ್ತರು ಇಂದು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಮಹಾರಾಷ್ಟ್ರ ಸಿಎಂ, ಡಿಸಿಎಂ ಪ್ರತಿಕೃತಿ ಅಣಕು ಶವಾಯತ್ತೆ ಮಾಡಿ ಆಕ್ರೋಶ ಹೊರಹಾಕಿದರು. ಮಹಾನಾಯಕರ ವಿರುದ್ಧ ಕನ್ನಡ ಸಂಘಟನೆಗಳು ಆಕ್ರೋಶಗೊಂಡಿದ್ದೇಕೆ. ಈ ಸುದ್ದಿ ಓದಿ..
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಮುನ್ನೆಲೆಗೆ ಬರುತ್ತಿದ್ದಂತೆ ಉಭಯ ರಾಜ್ಯಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದಲ್ಲಿ ಸಂಚರಿಸುತ್ತಿದ್ದ ಕರ್ನಾಟಕ ಬಸ್‌ಗಳ ಮೇಲೆ ಮಹಾರಾಷ್ಟ್ರ ಪುಂಡರು ಕಪ್ಪು ಮಸಿ ಹಚ್ಚಿ ಪುಂಡಾಟ ಪ್ರದರ್ಶಿಸುತ್ತಿದ್ದರು. ಸಾಲದೆಂಬಂತೆ ರನ್ನಿಂಗ್‌ನಲ್ಲಿದ್ದ ಬಸ್‌ಗೆ ಕಲ್ಲು ತೂರಿ ಮಹಾ ಕಿಡಿಗೇಡಿಗಳು ವಿಕೃತಿ ಮೆರೆದಿದ್ದರು. ಅಲ್ಲದೇ ಮಹಾರಾಷ್ಟ್ರ ನಾಯಕರ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡುತ್ತಿದ್ದರು. ಮಹಾರಾಷ್ಟ್ರ ರಾಜಕೀಯ ನಾಯಕರ ಹಾಗೂ ಅಲ್ಲಿನ ಪುಂಡರ ಪುಂಡಾಟದ ವಿರುದ್ಧ ಕನ್ನಡ ಪರ ಸಂಘಟನೆಗಳು ತಿರುಗಿ ಬಿದ್ದಿವೆ. ನಿನ್ನೆ ಕೂಡ ಬೆಳಗಾವಿಯಲ್ಲಿ ಕರವೇ (ಶಿವರಾಮೆಗೌಡ) ಬಣದ ಕಾರ್ಯಕರ್ತರು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಪ್ರತಿಕೃತಿ ಅಣಕು ಶವಯಾತ್ರೆ ಮಾಡಿದ್ದರು.
ಇಂದು ಕೂಡ ಕರವೇ (ನಾರಾಯಣಗೌಡ) ಬಣದ ಕಾರ್ಯಕರ್ತರು ಕೂಡ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ರು. ಸಿಎಂ ಏಕನಾಥ ಶಿಂಧೆ-ಡಿಸಿಎಂ ದೇವೇಂದ್ರ ಫಡ್ನವೀಸ್ ಪ್ರತಿಕೃತಿಗಳ ಅಣಕು ಶವಯಾತ್ರೆ ಮಾಡಿದ್ರು. ಬೆಳಗಾವಿ ಪ್ರದೇಶಗಳನ್ನು ಕೇಳ್ತಿರುವ ಸಿಎಂ ಹಾಗೂ ಡಿಸಿಎಂ ಭಾವಚಿತ್ರಕ್ಕೆ ಕಪ್ಪು ಮಸಿ ಹಚ್ಚಿ ಅಸಮಾಧಾನ ಹೊರಹಾಕಿದರು. ಬಳಿಕ ಪ್ರತಿಕೃತಿಗೆ ಬೆಂಕಿ ಹಚ್ಚಿದರು. ಬಳಿಕ ಮಹಾರಾಷ್ಟ್ರದ ಗೂಡ್ಸ್‌ವಾಹನಕ್ಕೆ ಕಪ್ಪು ಮಸಿ ಹಚ್ಚಿ ಮಹಾ ಪುಂಡರಿಗೆ ತಿರುಗೇಟು ನೀಡಿದರು. ಈ ವೇಳೆ ಪೊಲೀಸರು-ಹೋರಾಟಗಾರರ ಮಧ್ಯೆ ನೂಕು ನುಗ್ಗಲು ಉಂಟಾಯಿತು.
ಈ ಕುರಿತು ಮಾತನಾಡಿದ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ, ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ನಾಯಕರು ನೀಡುತ್ತಿರುವ ಹೇಳಿಕೆ ನಿಲ್ಲಿಸಬೇಕು. ನಾವೇನು ಕೈಯಲ್ಲಿ ಬಲೆ ತೊಟ್ಟುಕೊಂಡಿಲ್ಲ. ಉದ್ಧಟನನ ಪ್ರದರ್ಶನ ನಮಗೂ ಬರುತ್ತದೆ ಎಂದು ಎಚ್ಚರಿಕೆ ನೀಡಿದರು.
ಗಡಿವಿವಾದ ಮುನ್ನೆಲೆಗೆ ಬರುತ್ತಿದ್ದಂತೆ ಕರ್ನಾಟಕ ಬಸ್‌ಗಳ ಮೇಲೆ ಮರಾಠಿ ಭಾಷಿಕ ಪುಂಡರು ವಿಕೃತಿ ಮೆರೆಯುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಸಂಚರಿಸುವ ಬಸ್‌ಗಳ ಮೇಲೆ ಕಪ್ಪು ಮಸಿ ಹಚ್ಚಿ ಪುಂಡಾಟ ಪ್ರದರ್ಶನ ಮೆರೆಯುತ್ತಿದ್ದಾರೆ. ನಿಪ್ಪಾಣಿ-ಔರಂಗಾಬಾದ್ ಮಧ್ಯೆ ಸಂಚರಿಸುವ ನಿಪ್ಪಾಣಿ ಡಿಪೋಗೆ ಸೇರಿದ ಬಸ್‌ಗೆ ಮಹಾ ಪುಂಡರು ಕಪ್ಪು ಮಸಿ ಹಚ್ಚಿದ್ದರು.
ಬಳಿಕ ಶಿವಸೇನೆ ಕಾರ್ಯಕರ್ತರು ಜಮಖಂಡಿ ಡಿಪೋಗೆ ಸೇರಿದ ಬಸ್‌ಗೆ ಕಪ್ಪು ಮಸಿ ಹಚ್ಚಿ ಪುಂಡಾಟ ಪ್ರದರ್ಶಿಸಿದರು. ಎರಡು ದಿನಗಳ ಹಿಂದೆ ಕಾಗವಾಡ ಡಿಪೋಗೆ ಸೇರಿದ ಬಸ್‌ಗೆ ಕಿಡಿಗೇಡಿಗಳು ಕಲ್ಲೆಸೆದು ಹಾನಿಗೊಳಿಸಿದ್ದರು. ಪುಣೆಯಿಂದ ಮೀರಜ್ ಮಾರ್ಗವಾಗಿ ಕಾಗವಾಡಕ್ಕೆ ಬರುತ್ತಿದ್ದ ರನ್ನಿಂಗ್ ಬಸ್ ಮುಂಭಾಗದ ಗಾಜಿಗೆ ಕಿಡಿಗೇಡಿಗಳು ಕಲ್ಲು ಎಸೆದದಿದ್ದರು. ಕಿಡಿಗೇಡಿಗಳ ವಿರುದ್ಧ ಮಹಾರಾಷ್ಟ್ರದ ಮಿರಜ್ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾರ್ವಜನಿಕ ಆಸ್ತಿ ಹಾನಿಗೊಳಿಸಿದ ಆರೋಪದಡಿ ಅಥಣಿ ಸಾರಿಗೆ ಸಿಬ್ಬಂದಿ ದೂರು ದಾಖಲಿಸಿದ್ದಾರೆ. ಇನ್ನು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಬೇಕು ಎಂದು ಈ ಭಾಗದ ಕನ್ನಡ ಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದಾರೆ.
ಗಡಿವಿವಾದ ಸಂಬಂಧ ಮಹಾರಾಷ್ಟ್ರ ನಾಯಕರ ಉದ್ಧಟತನ ಮೆರೆಯುತ್ತಿದ್ದಾರೆ. ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಲ್ಲದೇ ಅಲ್ಲಿನ ಸಂಘಟನೆಗಳ ಪರವೂ ಮಹಾರಾಷ್ಟ್ರ ನಾಯಕರು ನಿಂತಿದ್ದಾರೆ. ಆದರೆ ಗಡಿ ವಿವಾದ ಸಂಬಂಧ ಬೆಳಗಾವಿ ಜಿಲ್ಲೆಯ ರಾಜಕಾರಣಿಗಳು ತುಟಿ ಬಿಚ್ಚದೇ ಇರುವುದು ಈ ಭಾಗದ ಕನ್ನಡ ಪರ ಸಂಘಟನೆಗಳ ಮುಖಂಡರು ವ್ಯಾಪಕ ಆಕ್ರೋಶ ಹೊರಹಾಕುತ್ತಿದ್ದಾರೆ.