ಪುರಾತನ ಮಂದಿರದಲ್ಲಿ ಗಲಾಟೆ……ಬೆಳಗಾವಿ-ಅದು ಪುರಾತನ ಕಾಲದ ಜೈನ ಮಂದಿರ… ಆ ಜೈನ ಮಂದಿರದ ಜೀರ್ಣೋದ್ಧಾರ ವಿಚಾರಕ್ಕೆ ಜೈನ ಸಮುದಾಯದ ಎರಡು ಪಂಗಡಗಳ ಮಧ್ಯೆ ಗಲಾಟೆ ಉಂಟಾಗಿದೆ. ಜೈನ ಮಂದಿರದಲ್ಲಿರುವ ಜಿನಬಿಂಬ ಉತ್ತಾಪನೆ ಮಾಡುವ ವೇಳೆ ಎರಡು ಪಂಗಡಗಳ ಸದಸ್ಯರ ಮಧ್ಯೆ ಘರ್ಷಣೆ ನಡೆದಿದ್ದು ಮಂದಿರದಲ್ಲಿದ್ದ ಮೂರ್ತಿ ಆವರಣಕ್ಕೆ ಬಂದಿದೆ. ಅಷ್ಟಕ್ಕೂ ಈ ಜೈನ ಬಸದಿ ಇರೋದು ಬೆಳಗಾವಿ ಮಹಾನಗರದಲ್ಲಿ ಪಕ್ಕದಲ್ಲೇ ಇರುವ ಮಚ್ಛೆ ಗ್ರಾಮದಲ್ಲಿ…
ಜಿನಬಿಂಬ ಉತ್ತಾಪನೆ ಮಾಡುತ್ತಿದ್ದ ಪುರೋಹಿತರ ಎಳೆದೊಯ್ದ ಗುಂಪು
ಜೈನ ಮಂದಿರದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸುತ್ತಿರುವ ಪುರೋಹಿತರ ಜೊತೆ ಮಹಿಳೆಯರ ವಾಗ್ವಾದ.. ನೋಡ ನೋಡುತ್ತಿದ್ದಂತೆ ಧಾರ್ಮಿಕ ವಿಧಿ ವಿಧಾನ ನೆರವೇರಿಸುತ್ತಿದ್ದ ಪುರೋಹಿತರ ಎಳೆದು ಹೊರಗೆ ಒಯ್ದ ಗುಂಪು… ಜೈನ ಮಂದಿರದ ಹೊರಗೆ ತಳ್ಳಾಟ ನೂಕಾಟ… ಜೈನ ಮಂದಿರ ಎದುರು ಪೊಲೀಸ್ ಬಿಗಿ ಭದ್ರತೆ.. ಮಂದಿರದೊಳಗೆ ಇದ್ದ ದೇವರ ಮೂರ್ತಿ ಆವರಣಕ್ಕೆ ಬಂದಿರೋದು.. ಆವರಣದಲ್ಲಿ ಇದ್ದ 1008 ಭಗವಾನ್ ಮಹಾವೀರ ದಿಗಂಬರ ಮೂರ್ತಿಗೆ ನಮಿಸಿ ತೆರಳುತ್ತಿರುವ ಭಕ್ತರು ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದ 1008 ಭಗವಾನ್ ಮಹಾವೀರ ದಿಗಂಬರ ಜೈನ ಮಂದಿರ ಎದುರು. ಪುರಾತನ ಕಾಲದ ಈ ಜೈನ ಮಂದಿರ ಜೀರ್ಣೊದ್ಧಾರ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಜೈನ ಮಂದಿರದಲ್ಲಿ ಎರಡು ಕಮೀಟಿಗಳಾಗಿವೆ. ಶ್ರೀ 1008 ಮಹಾವೀರ ದಿಗಂಬರ ಜೈನ ಬಸದಿ ವ್ಯವಸ್ಥಾಪಕ ಸಂಘ ಹಾಗೂ ಶ್ರೀ ಮಹಾವೀರ ಚೈತ್ರಾಲಯ ಟ್ರಸ್ಟ್ ಕಮೀಟಿ ಮಧ್ಯೆ ಹಲವು ವರ್ಷಗಳ ಮಧ್ಯೆ ಜಗಳವಿದ್ದು ಹೈಕೋರ್ಟ್‌ನಲ್ಲಿ ಕೇಸ್ ದಾಖಲಾಗಿ ಮಾರ್ಚ್ 31ರಂದು ವಿಚಾರಣೆ ಮುಕ್ತಾಯವಾಗಿದೆ. ಹೈಕೋರ್ಟ್‌ನಲ್ಲಿ ತೀರ್ಪು ತಮ್ಮಂತೆ ಬಂದಿದ್ದು ಅದರಂತೆ ನಾವು ಜೀರ್ಣೋದ್ಧಾರ ಕಾರ್ಯ ನಡೆಸುತ್ತಿದ್ವಿ ಆದ್ರೆ ಇದಕ್ಕೆ ಬೋಗಸ್ ಕಮಿಟಿಯವರು ವಿರೋಧಿಸುತ್ತಿದ್ದಾರೆ ಎಂಬುದು 1008 ಮಹಾವೀರ ದಿಗಂಬರ ಜೈನ ಬಸದಿ ವ್ಯವಸ್ಥಾಪಕ ಸಂಘದ ವಾದ.
ಶ್ರೀ ಮಹಾವೀರ ಜೈನ್ ಚೈತ್ರಾಲಯ ಟ್ರಸ್ಟ್ ಕಮಿಟಿಯವರು ಹೇಳುವ ಪ್ರಕಾರ ತಮ್ಮದೂ ಮೂಲ ಕಮಿಟಿ ಇದ್ದು 1956ರಲ್ಲಿ ರಜಿಸ್ಟ್ರೇಷನ್ ಆಗಿದೆ. 2013ರಲ್ಲಿ ಗೌಡರು ಮತ್ತು ರೈತರು ಅಂತಾ ಎರಡು ಪಾರ್ಟಿ ಆದ್ವು. ಅವರು ಸೊಸೈಟಿ ರಜಿಸ್ಟ್ರೇಷನ್ ಮಾಡಿಕೊಂಡು ಬಸದಿ ನಮ್ಮದೇ ಅಂತಾ ಹೇಳಲು ಶುರು ಮಾಡಿದ್ರು. ಟ್ರಸ್ಟಿ ಮೊಮ್ಮಗನ ಜತೆ ಸೇರಿ ನಾವು ಕಮಿಟಿ ಮಾಡಿದ್ವಿ. ಅದಕ್ಕೆ ಅವರು ವಿರೋಧ ಮಾಡಿ ಕೋರ್ಟ್ ನಿಂದ ತಡೆಯಾಜ್ಞೆ ತಂದ್ರು. ಮಾರ್ಚ್ 31ರಂದು ಹೈಕೋರ್ಟ್‌ನಲ್ಲಿ ಇದ್ದ ಕೇಸ್ ಮುಗಿದಿದ್ದು ಏನು ತೀರ್ಪು ನೀಡಿದೆ ಗೊತ್ತಿಲ್ಲ. ಆದ್ರೆ ತೀರ್ಪಿನ ಪ್ರತಿ ಸಿಗುವ ಮುನ್ನವೇ ನಿನ್ನೆ ರಾತ್ರಿ ಯಾರಿಗೂ ಗೊತ್ತಾಗದ ರೀತಿ ಮೂರ್ತಿ ಹೊರಗೆ ತಗೆದಿದ್ದಾರೆ. ಮೂರ್ತಿ ಬೇರೆಡೆ ತಗೆದುಕೊಂಡು ಹೋಗಲು ಯತ್ನಿಸಿದ್ರು. ಅದನ್ನ ತಡೆ ಹಿಡಿದಿದ್ದು ಈಗ ಮೂರ್ತಿ ಆವರಣದಲ್ಲಿ ಇದೆ. ಸಮಾಜ ಸಣ್ಣದಿದ್ದು ಎಲ್ಲರೂ ಸೇರಿ ಬಸದಿ ಕಟ್ಟೋಣ ಅಂದ್ರೆ ನಿಮ್ಮನ್ನ ನಾವು ಸೇರಿಸಲ್ಲ ಎಂದಿದ್ದಾರೆ. ಮಚ್ಛೆ ಊರಲ್ಲಿದ್ದ 50 ಗುಂಟೆ ಜಮೀನನ್ನು ಗೌಡರು ತಮ್ಮ ಹೆಸರಿಗೆ ಮಾಡಿಕೊಂಡಿದ್ದು ಆ ಜಮೀನು ವಶಕ್ಕೆ ಪಡೆಯಲು ಇಲ್ಲಿ ಎಂಟ್ರಿ ಹೊಡೀತಿದ್ದಾರೆ. ಮುಸ್ಲಿಂ ಸಮುದಾಯದ ಓರ್ವ ವ್ಯಕ್ತಿ ಹಲವು ವರ್ಷಗಳ ಹಿಂದೆ ಬಸದಿಗೆ ಜಮೀನು ನೀಡಿದ್ದ. ಯಾರೂ ಬಸದಿ ಪೂಜೆ ಮಾಡುತ್ತಾರೋ ಆ ಜಮೀನಿನಲ್ಲಿ ಕೃಷಿ ಮಾಡಿ ಜೀವನ ಸಾಗಿಸಬೇಕೆಂದು ಇತ್ತು. ಆ ಜಮೀನು ತಮ್ಮಂತೆ ಮಾಡಿಕೊಳ್ಳಲು ಕುತಂತ್ರ ನಡೆಸಿದ್ದಾರೆ. ಹೈಕೋರ್ಟ್ ತೀರ್ಪು ನಿಮ್ಮಂತ ಇದ್ರೆ ನಾವು ಬಿಟ್ಟು ಹೋಗ್ತೀವಿ ಅಂದ್ರೂ ಕೇಳ್ತಿಲ್ಲ ಅಂತಾ ಚೈತ್ರಾಲಯ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಹಾವೀರ ಪಾಟೀಲ್ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಒಂದೇ ಸಮುದಾಯದ ಎರಡು ಪಂಗಡಗಳ ಮಧ್ಯದ ಗಲಾಟೆಯಲ್ಲಿ ದೇವರ ಮೂರ್ತಿ ಗರ್ಭಗುಡಿಯಿಂದ ಆವರಣದ ಹೊರಗೆ ಬರುವಂತಾಗಿದೆ. ಏನೇ ಸಮಸ್ಯೆ ಇದ್ದರೂ ಪರಸ್ಪರ ಮಾತಾಡಿಕೊಂಡು ಬಗೆಹರಿಸಿಕೊಳ್ಳಬಹುದಿತ್ತು. ಈ ಮಟ್ಟಿಗೆ ಹೈಡ್ರಾಮಾ ಸೃಷ್ಟಿಸೋದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.