Breaking News

ಬೆಳಗಾವಿ ಜಿಲ್ಲಾಧಿಕಾರಿಗಳ ನಡೆ,ಹಳ್ಳಿಯ ಕಡೆಗೆ…!!

ನ.19 ರಂದು “ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಡೆ ಸವದತ್ತಿ ತಾಲ್ಲೂಕಿನ ಉಗರಗೊಳ ಹಳ್ಳಿಯ ಕಡೆ”

ಬೆಳಗಾವಿ-“ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಶನಿವಾರ (ನವಂಬರ್.19) ಸವದತ್ತಿ ತಾಲ್ಲೂಕಿನ ಉಗರಗೊಳ ಗ್ರಾಮಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ.

ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ದಿಸೆಯಲ್ಲಿ ಪ್ರತಿ ತಿಂಗಳು ಮೂರನೇ ಶನಿವಾರ ಜಿಲ್ಲಾಧಿಕಾರಿಗಳು ಒಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ಅದೇ ರೀತಿ ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು ಮತ್ತು ತಾಲ್ಲೂಕುಗಳ ತಹಶೀಲ್ದಾರರು ಕೂಡ ಅಂದು ತಮ್ಮ ವ್ಯಾಪ್ತಿಯ ಒಂದು ಗ್ರಾಮಕ್ಕೆ ತೆರಳಿ ಜನರ ಸಮಸ್ಯೆಗಳನ್ನು ಸ್ಥಳೀಯವಾಗಿ ಪರಿಹರಿಸುವ ಪ್ರಯತ್ನ ಮಾಡಲಿದ್ದಾರೆ.

ಶನಿವಾರ (ನ.19) ಬೆಳಗ್ಗೆ ಗ್ರಾಮಕ್ಕೆ ತೆರಳಲಿರುವ ಜಿಲ್ಲಾಧಿಕಾರಿಗಳು, ಗ್ರಾಮದಲ್ಲಿರುವ ಶಾಲೆ, ಗ್ರಾಮ ಪಂಚಾಯಿತಿ, ಅಂಗನವಾಡಿ ಸೇರಿದಂತೆ ಎಲ್ಲ ಸರಕಾರಿ ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ.
ಇದಲ್ಲದೇ ಗ್ರಾಮದ ಜನರ ಅಹವಾಲುಗಳನ್ನು ಆಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಮಾಜಿಕ ಭದ್ರತಾ‌‌ ಪಿಂಚಣಿ ಹಾಗೂ ಇತರೆ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳು ಮತ್ತು ಮಂಜೂರಾತಿ ಪತ್ರಗಳನ್ನು ವಿತರಿಸಲಿದ್ದಾರೆ.

ಜಿಲ್ಲಾಧಿಕಾರಿಗಳ ಜತೆಗೆ ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಭೂದಾಖಲೆಗಳು, ಆರೋಗ್ಯ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹೆಸ್ಕಾಂ, ಪಶುಪಾಲನೆ, ಅರಣ್ಯ, ಸಮಾಜ ಕಲ್ಯಾಣ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

“ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದಡಿಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳು ಇದಕ್ಕೂ ಮುಂಚೆ ಬೈಲಹೊಂಗಲ ತಾಲ್ಲೂಕಿನ ಬೈಲವಾಡ, ಕಿತ್ತೂರು ತಾಲ್ಲೂಕಿನ ವೀರಾಪುರ, ನಿಪ್ಪಾಣಿ ತಾಲ್ಲೂಕಿನ ಹಂಚಿನಾಳ ಕೆ.ಎಸ್., ಕಾಗವಾಡ ತಾಲ್ಲೂಕಿನ ಮೋಳವಾಡ; ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಮತ್ತು ಮೂಡಲಗಿ ತಾಲ್ಲೂಕಿನ‌ ಭೈರನಟ್ಟಿ, ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮಗಳಿಗೆ ಭೇಟಿ ನೀಡಿರುತ್ತಾರೆ.

ತಾಲ್ಲೂಕು ತಹಶೀಲ್ದಾರರ ಭೇಟಿ ವಿವರ:

ಜಿಲ್ಲೆಯ ಉಪ ವಿಭಾಗಗಳ ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರು ಕೂಡ ಶನಿವಾರ(ನ.19) ತಮ್ಮ ವ್ಯಾಪ್ತಿಯ ತಾಲ್ಲೂಕಿನ ಒಂದು ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.

ತಹಶೀಲ್ದಾರರು ಭೇಟಿ ನೀಡಲಿರುವ ಗ್ರಾಮಗಳ ವಿವರ ಈ ಕೆಳಕಂಡಂತಿದೆ.

ಬೆಳಗಾವಿ(ಅವಚಾರಹಟ್ಟಿ), ಖಾನಾಪುರ(ನಾವಗಾ), ಹುಕ್ಕೇರಿ (ಶಿಪ್ಪೂರ), ಬೈಲಹೊಂಗಲ(ಮದನಭಾಂವಿ), ರಾಮದುರ್ಗ (ಲಖನಾಯಕನಕೊಪ್ಪ), ಗೋಕಾಕ(ಕೈ ಹೊಸೂರ), ಮೂಡಲಗಿ(ಹೊಸಯರಗುದ್ರಿ), ಕಿತ್ತೂರು (ಕೊಟಬಾಗಿ), ಚಿಕ್ಕೋಡಿ(ಬೆಳಗಲಿ), ಅಥಣಿ(ಖಿಲೇಗಾಂವಿ), ರಾಯಬಾಗ(ದಿಗ್ಗೇವಾಡಿ), ನಿಪ್ಪಾಣಿ(ಶಿರದ್ವಾಡ), ಕಾಗವಾಡ(ಶೇಡಬಾಳ, ಸ್ಟೇಷನ್).
****

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *