Breaking News

ರಸ್ತೆ ಗುಂಡಿಗಳ ದುರಸ್ಥಿಗೆ ಖಡಕ್ ಆರ್ಡರ್ ಆರ್ಡರ್….!!

ಜಿಲ್ಲಾ‌ಮಟ್ಟದ ರಸ್ತೆ ಸುರಕ್ಷಾ‌ ಸಮಿತಿ‌ ಸಭೆ

ಅಪಘಾತಗಳ ನಿಯಂತ್ರಣಕ್ಕೆ ಕ್ರಮ‌ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ

ಬೆಳಗಾವಿ, -ಬೆಳಗಾವಿ‌ ನಗರ ಸೇರಿದಂತೆ ಜಿಲ್ಲೆಯ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತ ಸಂಭವಿಸುವಂತಹ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಅಂತಹ ಪ್ರದೇಶಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಅಗತ್ಯವಿರುವ ಕ್ರಮ‌ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ (ಆ.22) ಜರುಗಿದ ಜಿಲ್ಲಾ‌ಮಟ್ಟದ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಾದ್ಯಂತ ಅಪಘಾತ ಪ್ರಮಾಣವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನಿರಂತರ ನಿಗಾ ವಹಿಸಿರುತ್ತದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಾಗುವುದರ ಜತೆಗೆ ತಮಗೆ ನಿಗದಿಪಡಿಸಿದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಲು ತಿಳಿಸಿದರು.

ಯಮನಾಪುರ ಹತ್ತಿರದ ರಾಷ್ಟ್ರೀಯ ಹೆದ್ದಾರಿ, ನಗರದ ಗೋಗಟೆ ವೃತ್ತ ಹಾಗೂ ಕಾಲೇಜು ರಸ್ತೆಗಳಲ್ಲಿ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಈ ಸ್ಥಳಗಳನ್ನು ಪರಿಶೀಲಿಸಿ ಸುರಕ್ಷತೆಗೆ ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು.

ಕಳೆದ‌ ಮೂರು ವರ್ಷಗಳಲ್ಲಿ ಆದಂತಹ ಅಪಘಾತಗಳ ಸಂಖ್ಯೆ, ಅಪಘಾತದಿಂದ ಮೃತರ ಸಂಖ್ಯೆ ಹಾಗೂ ಬ್ಲ್ಯಾಕ್ ಸ್ಪಾಟ್ ಗಳ ಕ್ರೋಢಿಕೃತ ವರದಿಯನ್ನು ಸಲ್ಲಿಸಲು ತಿಳಿಸಿದ ಅವರು, ಈಗಾಗಲೇ ಗುರುತಿಸಲಾದ ಅಪಾಯಕಾರಿ ಸ್ಥಳಗಳಲ್ಲಿ ಅಪಘಾತಗಳ‌ ನಿಯಂತ್ರಣಕ್ಕೆ ಕ್ರಮ ವಹಿಸಲು ಸೂಚಿಸಿದರು.

ರಸ್ತೆಯಲ್ಲಿನ ಗುಂಡಿಗಳ ದುರಸ್ತಿಗೆ ಕೂಡಲೇ‌ ಕ್ರಮ‌ ವಹಿಸಬೇಕು. ಈ ಸಂಬಂಧ ಸಂಬಂಧಿಸಿದ ಇಲಾಖೆಗಳು ಸಮನ್ವಯದೊಂದಿಗೆ ಕಾರ್ಯ ನಿರ್ವಹಿಸಬೇಕು.

ರಾಜ್ಯ ಹೆದ್ದಾರಿಗಳಲ್ಲಿ ನಿರಂತರ ಪೊಲೀಸ್ ಗಸ್ತು, ಅಪಘಾತವಾದಂತಹ ಸಂದರ್ಭದಲ್ಲಿ ಕೂಡಲೇ ಆರೋಗ್ಯ ಸೇವೆ ಒದಗಿಸಲು ಅಂಬ್ಯುಲೆನ್ಸ್ ಹಾಗೂ ಹತ್ತಿರದ ಆಸ್ಪತ್ರೆಗಳನ್ನು ಗುರುತಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ಪೋಲಿಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಅನುಮತಿಯಿಲ್ಲದೆ ವಾಹನಗಳ ಮಾಡಿಫೈ ಮಾಡಿದಂತಹ ವಾಹನಗಳ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದರು. ಶಾಲಾ ಕಾಲೇಜುಗಳ‌ ಬಳಿ ಝಿಬ್ರಾ ಕ್ರಾಸಿಂಗ್ ಗುರುತು ಮಾಡಬೇಕು. ಬೆಳಗಾವಿ‌ ನಗರ ವ್ಯಾಪ್ತಿಯಲ್ಲಿನ ಹಾಗೂ ಕ್ಯಾಂಟೋನ್ಮೆಂಟ್ ವ್ಯಾಪ್ತಿಯಲ್ಲಿ ರಸ್ತೆಗಳ ದುರಸ್ತಿಗೆ ಕ್ರಮ‌ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ಪ್ರಸ್ತುತ ಮಾಹೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಈ ಕುರಿತು ಅಪಘಾತಗಳ ನಿಯಂತ್ರಣಕ್ಕೆ ಅಗತ್ಯದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು ಕೂಡ ಅಪಘಾತಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸುವಂತೆ ತಿಳಿಸಿದರು.

ಹೆದ್ದಾರಿ ಅಥವಾ ಜಿಲ್ಲಾ ಮುಖ್ಯರಸ್ತೆಗೆ ಕೂಡು ರಸ್ತೆಗಳಿರುವ ಕಡೆಗಳಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು; ರಸ್ತೆ ಸರಿಯಾಗಿ ಕಾಣಿಸಲು ಅನುಕೂಲವಾಗುವಂತೆ ಗಿಡಗಂಟೆಗಳು ಅಥವಾ ಪೊದೆಯನ್ನು ಕತ್ತರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ರದ್ದಾಗಿರುವ ಚಾಲನಾ ಪರವಾನಿಗೆಗಳ ವಿವರವನ್ನು ಒದಗಿಸುವದರ ಜೊತೆಗೆ ಆ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರ ಪಡಿಸಲು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬ್ಲ್ಯಾಕ್ ಸ್ಪಾಟ್ ಗಳನ್ನು ಸಂಬಂಧಿತ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಿ ಮುಂಬರುವ ದಿನಗಳಲ್ಲಿ ಅಪಘಾತಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶೃತಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಬಿ.ಸೊಬರದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸೇರಿದಂತರ ಸಮಿತಿಯ ಸದಸ್ಯರುಗಳು ಹಾಜರಿದ್ದರು.
****

Check Also

ಮದ್ಯರಾತ್ರಿ ಸಾರಾಯಿ ಹುಡುಕಾಡದಿದ್ದರೆ ಅವರು ಸಿಗುತ್ತಿರಲಿಲ್ಲ……!!

ವೈನ್ ಇಸ್ ಇನ್…ಮೈಂಡ್ ಇಸ್ ಔಟ್ ಆತ ಹೇಳ್ತಾರೆ ಅದು ಸತ್ಯ…. ಆತ ಕಂಠಪೂರ್ತಿ ಕುಡುದಿದ್ದ ಬೆಳಗಾವಿಗೆ ಬರಲು ಬಸ್ …

Leave a Reply

Your email address will not be published. Required fields are marked *